ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ಮಾಡ ಹೊರಟ ರಾಜಮೌಳಿಗೆ ಹಿನ್ನಡೆ; ಕುಟುಂಬದಿಂದ ವಿರೋಧ
ದಾದಾಸಾಹೇಬ್ ಫಾಲ್ಕೆ ಅವರ ಜೀವನ ಕಥೆಯನ್ನು ಆಧರಿಸಿ ಎರಡು ಸಿನಿಮಾ ನಿರ್ಮಾಣವಾಗುತ್ತಿವೆ. ಒಂದು ರಾಜಮೌಳಿ ನಿರ್ದೇಶನದಲ್ಲಿ, ಇನ್ನೊಂದು ಆಮಿರ್ ಖಾನ್ ಮತ್ತು ರಾಜ್ ಕುಮಾರ್ ಹಿರಾನಿ ಅವರ ತಂಡದಿಂದ ಸಿನಿಮಾ ಮೂಡಿ ಬರುತ್ತಿದೆ. ಫಾಲ್ಕೆ ಅವರ ಕುಟುಂಬ ರಾಜಮೌಳಿ ಯೋಜನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಭಾರತದ ಸಿನಿಮಾದ ಹರಿಕಾರ ದಾದಾಸಾಹೇಬ್ ಫಾಲ್ಕೆ (Dadasaheb Phalke) ಅವರ ಬಗ್ಗೆ ಬಯೋಪಿಕ್ ಮಾಡಲು ಸಿದ್ಧತೆ ನಡೆದಿದೆ. 1903ರಲ್ಲಿ ಭಾರತದ ಮೊಟ್ಟ ಮೊದಲ ಪೂರ್ಣ ಪ್ರಮಾಣದ ಚಿತ್ರವನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದ ಖ್ಯಾತಿ ದಾದಾಸಾಹೇಬ್ ಫಾಲ್ಕೆ ಅವರಿಗೆ ಇದೆ. ಆಗಿನ ಕಾಲಕ್ಕೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದನ್ನು ಶತಮಾನಗಳ ಬಳಿಕ ತೆರೆಮೇಲೆ ತೋರಿಸುವ ಪ್ರಯತ್ನ ಆಗುತ್ತಿದೆ. ಆದರೆ, ಎರಡು ಖ್ಯಾತ ನಾಮರು ಇದಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದಾದಾಸಾಹೇಬ್ ಫಾಲ್ಕೆ ಮೊಮ್ಮೊಗ ಚಂದ್ರಶೇಖರ್ ಶ್ರೀಕೃಷ್ಣ ಪುಸಾಲ್ಕರ್ ಮಾತನಾಡಿದ್ದಾರೆ. ರಾಜಮೌಳಿ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದಾರೆ.
ಖ್ಯಾತ ನಿರ್ದೇಶಕ ರಾಜಮೌಳಿ ಹಾಗೂ ಕೆಲವರು ಸೇರಿಕೊಂಡು ದಾದಾಸಾಹೇಬ್ ಫಾಲ್ಕೆ ಚಿತ್ರವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಅವರು ದಾದಾಸಾಹೇಬ್ ಫಾಲ್ಕೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿತ್ತು. ಎನ್ಟಿಆರ್ ಅವರು ದಾದಾಸಾಹೇಬ್ ಲುಕ್ನಲ್ಲಿರುವ ಸಾಕಷ್ಟು ಎಐ ಫೋಟೋಗಳು ವೈರಲ್ ಆಗಿವೆ.
ಈ ಬಗ್ಗೆ ಚಂದ್ರಶೇಖರ್ ಶ್ರೀಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ. ಏಕೆಂದರೆ ಮತ್ತೊಂದು ಕಡೆ ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ಮಾಡಲು ಆಮಿರ್ ಖಾನ್ ಹಾಗೂ ರಾಜ್ಕುಮಾರ್ ಹಿರಾನಿ ಸಿದ್ಧತೆ ಮಾಡಿಕೊಂಡಿದ್ದಾರೆ. ಇವರು ದಾದಾಸಾಹೇಬ್ ಫಾಲ್ಕೆ ಕುಟುಂಬವನ್ನು ಸಂಪರ್ಕಿಸಿ ಸ್ಕ್ರಿಪ್ಟ್ ಆರಂಭಿಸಿದ್ದರು. ರಾಜಮೌಳಿ ಅವರು ಬೇರೆ ಬೇರೆ ಪುಸ್ತಕಗಳನ್ನು ಆಧಿರಿಸಿ ಸಿನಿಮಾ ಮಾಡುತ್ತಿದ್ದಾರೆ. ಅವರು ಈವರೆಗೆ ಕುಟುಂಬದವರನ್ನು ಸಂಪರ್ಕಿಸಿಯೇ ಇಲ್ಲ. ಇದು ಚಂದ್ರಶೇಖರ್ ಅವರ ಬೇಸರಕ್ಕೆ ಕಾರಣ ಆಗಿದೆ.
‘ರಾಜಮೌಳಿ ಅವರು ಮಾಡುತ್ತಿರುವ ಪ್ರಾಜೆಕ್ಟ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಅವರು ನನ್ನನ್ನು ಎಂದಿಗೂ ಸಂಪರ್ಕಿಸಲಿಲ್ಲ. ಯಾರಾದರೂ ಫಾಲ್ಕೆ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ ಎಂದರೆ ಕನಿಷ್ಠ ಪಕ್ಷ ಅವರ ಕುಟುಂಬದೊಂದಿಗೆ ಮಾತನಾಡಬೇಕು’ ಎಂದು ಅವರು ಅಭಿಪ್ರಾಯ ಹೊರಹಾಕಿದ್ದಾರೆ.
ಇದನ್ನೂ ಓದಿ: ಸಿನಿಮಾ ರಂಗದ ಹರಿಕಾರ ದಾದಾಸಾಹೇಬ್ ಫಾಲ್ಕೆ ಬಯೋಪಿಕ್ನಲ್ಲಿ ಜೂ.ಎನ್ಟಿಆರ್?
ರಾಜ್ಕುಮಾರ್ ಹಿರಾನಿ ಹಾಗೂ ಆಮಿರ್ ಖಾನ್ ತಂಡ ಕಳೆದ ಮೂರು ವರ್ಷಗಳಿಂದ ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಶೇಷ ಎಂದರೆ ಈ ತಂಡ ಕಳೆದ ಮೂರು ವರ್ಷಗಳಿಂದ ಚಂದ್ರಶೇಖರ್ ಜೊತೆ ಸಂಪರ್ಕದಲ್ಲಿ ಇದೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








