Lakshadweep Resorts: ಲಕ್ಷದ್ವೀಪದಲ್ಲಿ ನಿರ್ಮಾಣವಾಗಲಿವೆ ಎರಡು ವಿಶ್ವದರ್ಜೆ ರೆಸಾರ್ಟ್ಗಳು; ತಾಜ್ ಗ್ರೂಪ್ನ ಯೋಜನೆ
World Class Taj Hotels in Lakshadweep: ಲಕ್ಷದ್ವೀಪದ ಎರಡು ದ್ವೀಪಗಳಲ್ಲಿ ತಾಜ್ ಹೋಟೆಲ್ ಮತ್ತು ರೆಸಾರ್ಟ್ಗಳು ನಿರ್ಮಿತವಾಗುತ್ತಿವೆ. 2026ಕ್ಕೆ ಇವು ಅನಾವರಣಗೊಳ್ಳುತ್ತವೆ. 2023ರ ಜನವರಿ ತಿಂಗಳಲ್ಲೇ ಟಾಟಾ ಗ್ರೂಪ್ ಸಂಸ್ಥೆ ಎರಡು ವಿಶ್ವದರ್ಜೆ ಹೋಟೆಲ್ಗಳನ್ನು ಲಕ್ಷದ್ವೀಪದಲ್ಲಿ ನಿರ್ಮಿಸುವುದಾಗಿ ಘೋಷಣೆ ಮಾಡಿತ್ತು. ಸುಹೇಲಿ ಮತ್ತು ಕಡಮತ್ ದ್ವೀಪಗಳಲ್ಲಿ ನಿರ್ಮಾಣವಾಗುತ್ತಿರುವ ತಾಜ್ ಹೋಟೆಲ್ಗಳು ತಲಾ 110 ಲಕ್ಷುರಿ ವಿಲ್ಲಾಗಳನ್ನು ಹೊಂದಿರುತ್ತವೆ.
ನವದೆಹಲಿ, ಜನವರಿ 9: ಮಾಲ್ಡೀವ್ಸ್ ವಿವಾದದ ಮಧ್ಯೆ ಲಕ್ಷದ್ವೀಪದ (lakshadweep) ಬಗ್ಗೆ ಅಂತಾರಾಷ್ಟ್ರೀಯ ಗಮನ ನೆಟ್ಟಿದ್ದು, ಜೊತೆ ಜೊತೆಗೆ ಅಲ್ಲಿನ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ನಕಾರಾತ್ಮಕ ಧ್ವನಿಗಳೂ ಸೇರಿವೆ. ಇದಕ್ಕೆ ಉತ್ತರವೋ ಎಂಬಂತೆ ಲಕ್ಷದ್ವೀಪದಲ್ಲಿ ವಿಶ್ವದರ್ಜೆಯ ಹೋಟೆಲ್, ರೆಸಾರ್ಟ್ಗಳು ನಿರ್ಮಾಣವಾಗುತ್ತಿರುವ ಸುದ್ದಿ ಬಂದಿದೆ. ಟಾಟಾ ಗ್ರೂಪ್ ಸಂಸ್ಥೆ ಲಕ್ಷದ್ವೀಪದ ಸುಹೇಲಿ (suheli island) ಮತ್ತು ಕಡಮತ್ (Kadmat island) ದ್ವೀಪಗಳಲ್ಲಿ ಎರಡು ರೆಸಾರ್ಟ್ ನಿರ್ಮಿಸುತ್ತಿದೆ. ಇವು 2026ಕ್ಕೆ ಬಿಡುಗಡೆ ಆಗುವ ನಿರೀಕ್ಷೆ ಇದೆ.
ಲಕ್ಷದ್ವೀಪದಲ್ಲಿ ಟಾಟಾ ಸಂಸ್ಥೆಯಿಂದ ರೆಸಾರ್ಟ್ಗಳ ನಿರ್ಮಾಣ ಮಾಡುವ ನಿರ್ಧಾರ ದಿಢೀರ್ ಕೈಗೊಂಡಿದ್ದಲ್ಲ. 2023ರ ಜನವರಿ ತಿಂಗಳಲ್ಲೇ ಟಾಟಾ ಗ್ರೂಪ್ ಸಂಸ್ಥೆ ಲಕ್ಷದ್ವೀಪದಲ್ಲಿ ಗ್ರೀನ್ಫೀಲ್ಡ್ ಪ್ರಾಜೆಕ್ಟ್ ಆರಂಭಿಸುವುದಾಗಿ ಘೋಷಿಸಿತ್ತು. ಟಾಟಾ ಸನ್ಸ್ಗೆ ಸೇರಿದ ಐಎಚ್ಸಿಎಲ್ ಸಂಸ್ಥೆ ಗ್ರೀನ್ಫೀಲ್ಡ್ ಪ್ರಾಜೆಕ್ಟ್ ಅಡಿಯಲ್ಲಿ ತಾಜ್ ಬ್ರ್ಯಾಂಡ್ನ ಎರಡು ರೆಸಾರ್ಟ್ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಈಗ ಲಕ್ಷದ್ವೀಪದ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ಪ್ರಶ್ನೆಗಳು ಉದ್ಭವವಾದ ಹಿನ್ನೆಲೆಯಲ್ಲಿ ಟಾಟಾದ ತಾಜ್ ಬ್ರ್ಯಾಂಡ್ ಹೋಟೆಲ್ಗಳ ಸಂಗತಿ ಮುನ್ನೆಲೆಗೆ ಬಂದಿದೆ.
‘ಲಕ್ಷದ್ವೀಪದಲ್ಲಿ ಬಹಳ ರಮ್ಯವೆನಿಸುವ ಬೀಚ್ಗಳು ಮತ್ತು ಹವಳ ಬಂಡೆಗಳು (coral reef) ಕಣ್ಮನ ಸೆಳೆಯುತ್ತವೆ. ಎರಡು ವಿಶ್ವದರ್ಜೆ ತಾಜ್ ರೆಸಾರ್ಟ್ಗಳು ದೇಶೀಯ ಮತ್ತು ವಿದೇಶೀ ಪ್ರವಾಸಿಗರನ್ನು ಸೆಳೆಯುತ್ತವೆ’ ಎಂದು ಯೋಜನೆ ಘೋಷಿಸುವ ವೇಳೆಯೆ ಐಎಚ್ಸಿಎಲ್ ಎಂಡಿ ಮತ್ತು ಸಿಇಒ ಪುನೀತ್ ಛಾತವಾಲ್ ಹೇಳಿದ್ದರು.
ಸುಹೇಲಿಯಲ್ಲಿರುವ ತಾಜ್ ರೆಸಾರ್ಟ್ ಬೀಚ್ ಬಳಿಯೇ ಇರುತ್ತದೆ. ಇದರಲ್ಲಿ 60 ವಿಲ್ಲಾ ಮತ್ತು 50 ವಾಟರ್ ವಿಲ್ಲಾ ಸೇರಿದಂತೆ 110 ಲಕ್ಷುರಿ ರೂಮುಗಳು ಇರುತ್ತವೆ.
ಇದನ್ನೂ ಓದಿ: Maldives: ಭಾರತದಲ್ಲಿ ಟ್ರೆಂಡ್ ಆಗುತ್ತಿದೆ #UninstallMakeMyTrip; ಯಾಕೆ ಮೇಕ್ ಮೈ ಟ್ರಿಪ್ ಮೇಲೆ ಆಕ್ರೋಶ?
ಇನ್ನು, ದೊಡ್ಡ ಸರೋವರವೊಂದನ್ನು ಒಳಗೊಂಡಿರುವ ಕಡಮತ್ ದ್ವೀಪದಲ್ಲಿ ನಿರ್ಮಿತವಾಗುತ್ತಿರುವ ತಾಜ್ ಹೋಟೆಲ್ನಲ್ಲಿ 75 ಬೀಚ್ ವಿಲ್ಲಾ ಮತ್ತು 35 ವಾಟರ್ ವಿಲ್ಲಾಗಳು ಇರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ