ನವದೆಹಲಿ: ಹೊಸ ದರ ವ್ಯವಸ್ಥೆಯನ್ನು ಒಪ್ಪಿಕೊಳ್ಳದ ಕೇಬಲ್ ಟಿವಿಗಳಲ್ಲಿ ಝೀ ಎಂಟರ್ಟೈನ್ಮೆಂಟ್, ಸ್ಟಾರ್ ಮತ್ತು ಸೋನಿ ಪಿಕ್ಚರ್ಸ್ ಮೊದಲಾದ ವಾಹಿನಿಗಳ ಪ್ರಸಾರ ನಿಲ್ಲಿಸಲಾಗಿದೆ. ಒಂದು ಅಂದಾಜು ಪ್ರಕಾರ 4.5 ಕೋಟಿಗೂ ಹೆಚ್ಚು ಕೇಬಲ್ ಟಿವಿ ಗ್ರಾಹಕರಿಗೆ ಈ ಹಲವು ವಾಹಿನಿಗಳು ಲಭ್ಯ ಇರುವುದಿಲ್ಲ. ಇದು ಟಿವಿ ಬ್ರಾಡ್ಕ್ಯಾಸ್ಟರ್ ಮತ್ತು ಕೇಬಲ್ ಆಪರೇಟರುಗಳ ನಡುವಿನ ಭಿನ್ನಾಭಿಪ್ರಾಯದ ಫಲಶ್ರುತಿ. ಫೆಬ್ರುವರಿ 1ರಂದು ಜಾರಿಗೆ ಬಂದಿರುವ ಹೊಸ ಬೆಲೆ ನೀತಿಗೆ ಬದ್ಧರಾಗದ ಕೇಬಲ್ ಆಪರೇಟರುಗಳಿಗೆ ಈ ಕೆಲ ವಾಹಿನಿಗಳು ಪ್ರಸಾರಕ್ಕೆಲಭ್ಯ ಇರುವುದಿಲ್ಲ.
ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕಳೆದ ನವೆಂಬರ್ನಲ್ಲಿ ಟಿವಿ ವಾಹಿನಿಯ ಎಂಆರ್ಪಿ ದರವನ್ನು ಮರಳಿ ಹೆಚ್ಚಿಸಿತ್ತು. ಇದರಿಂದ ಟಿವಿ ಚಾನಲ್ ಸಬ್ಸ್ಕ್ರಿಪ್ಶನ್ ದರ ಶೇ. 10-15ರಷ್ಟು ಹೆಚ್ಚಳ ಕಂಡಿವೆ. ಬೊಕೆ ಗ್ರೂಪ್ನಲ್ಲಿ ಇಲ್ಲದ ಕೆಲ ವೈಯಕ್ತಿಕ ಚಾನಲ್ಗಳ ದರ ಇನ್ನೂ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಕೇಬಲ ಟಿವಿ ಗ್ರಾಹಕರು ಬೆಲೆ ಏರಿಕೆಯ ಹೊರೆ ಹೊರುವಂತಾಗಿದ್ದು, ಪರಿಣಾಮವಾಗಿ ಗ್ರಾಹಕರು ತಮಗೆ ಕೈತಪ್ಪಿ ಹೋಗುತ್ತಿದ್ದಾರೆ ಎಂಬುದು ಕೇಬಲ್ ಟಿವಿ ಉದ್ಯಮಿಗಳ ಅಳಲು.
ಆದರೆ, ಟಿವಿ ಪ್ರಸಾರ ಸಂಸ್ಥೆಗಳು ಈ ವಾದವನ್ನು ಒಪ್ಪುವುದಿಲ್ಲ. ಕಳೆದ ಐದು ವರ್ಷಗಳಿಂದ ಯಾವ ದರ ಏರಿಕೆಯನ್ನೂ ಮಾಡಲಾಗಿಲ್ಲ. ಶೇ. 10ರಿಂದ 15ರಷ್ಟು ಬೆಲೆ ಏರಿಕೆ ಪ್ರಸ್ತಾಪ ಬಹಳ ದಿನಗಳಿಂದ ಇತ್ತು. ನಮ್ಮ ಉದ್ಯಮದ ಆರೋಗ್ಯಕ್ಕೆ ಇದು ಬಹಳ ಅವಶ್ಯಕವಾಗಿದೆ. ಟ್ರಾಯ್ ಆದೇಶದ ಪಾಲನೆ ಮಾಡಲು ಸ್ಥಳೀಯ ಕೇಬಲ್ ಆಪರೇಟರುಗಳಿಗೆ 48 ಗಂಟೆ ಕಾಲಾವಕಾಶ ನೀಡಿದ್ದೆವು. ಈ ಆದೇಶ ಪಾಲಿಸವರಿಗೆ ನಾವು ವಾಹಿನಿಗಳ ಪ್ರಸಾರಕ್ಕೆ ಅನುಮತಿ ನಿರಾಕರಿಸಿದ್ದೇವೆ ಎಂದು ಬ್ರಾಡ್ಕ್ಯಾಸ್ಟಿಂಗ್ ಕಂಪನಿಯೊಂದರ ಅಧಿಕಾರಿ ಹೇಳಿದರೆಂದು ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ರಷ್ಯಾದಿಂದ ಎಂಬಿಬಿಎಸ್ ಅಧ್ಯಯನ ಮಾಡುವ ಆಸೆ ಇದೆಯೇ? ಅರ್ಹತೆ, ಶುಲ್ಕ ಮತ್ತಷ್ಟು ಮಾಹಿತಿ ಇಲ್ಲಿದೆ
ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಬಹಳ ವೆಚ್ಚವಾಗುತ್ತದೆ. ಚಾನಲ್ಗಳಿಗೆ ಶೇ. 30ರಷ್ಟು ಆದಾಯವು ಸಬ್ಸ್ಕ್ರಿಪ್ಶನ್ ಮೂಲಕ ಬರುತ್ತದೆ. ಇದು ಕಡಿಮೆ ಆದರೆ ಬೇರೆಲ್ಲಿಂದ ಆದಾಯ ಸೃಷ್ಟಿಸೋದು ಎಂದು ಪ್ರಶ್ನಿಸುವ ಈ ಪ್ರಸಾರಕ ಸಂಸ್ಥೆಗಳು, ಕೇಬಲ್ ಟಿವಿ ಆಪರೇಟರುಗಳು ನೆಟ್ವರ್ಕ್ ಕೆಪಾಸಿಟಿ ಫೀ, ಕ್ಯಾರಿಯೇಜ್ ಫೀ, ಲ್ಯಾಂಡಿಂಗ್ ಫೀ, ಪ್ಲೇಸ್ಮೆಂಟ್ ಫೀ ಇತ್ಯಾದಿ ವಿವಿಧ ಮೂಲಗಳಿಂದ ಆದಾಯ ಗಳಿಸುತ್ತಿವೆ. ಇವರಿಗೆ ಗ್ರಾಹಕರ ಬಗ್ಗೆ ಅನುಕಂಪ ಇದ್ದರೆ ತಮ್ಮ ಎನ್ಸಿಎಫ್ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಸಲಹೆ ನೀಡಿವೆ.
ಕೇಬಲ್ ಆಪರೇಟರುಗಳು ತಮ್ಮ ಗ್ರಾಹಕರಿಂದ ಎನ್ಸಿಎಫ್ ಶುಲ್ಕವಾಗಿ ಪ್ರತೀ ತಿಂಗಳು 130 ರೂ ಮತ್ತು 160 ರೂ ಪಡೆಯುತ್ತವೆ. ಈ ಸಬ್ಸ್ಕ್ರಿಪ್ಚನ್ನಲ್ಲಿ 100ರಿಂದ 200 ಉಚಿತ ಚಾನಲ್ಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ದರವನ್ನು ಕಡಿಮೆ ಮಾಡಲಿ ಎಂಬುದು ಬ್ರಾಡ್ಕ್ಯಾಸ್ಟರ್ಗಳ ವಾದ.
ಇದನ್ನೂ ಓದಿ: Ola EV: ಓಲಾ ಇವಿ ತಮಿಳುನಾಡು ಪಾಲಾಯ್ತು, ಕರ್ನಾಟಕಕ್ಕೆ ಚಿಂತೆ ಇಲ್ಲವಾ?: ಪ್ರಧಾನಿಗೆ ಟ್ಯಾಗ್ ಮಾಡಿ ಉದ್ಯಮಿ ಪೈ ಟ್ವೀಟ್
ಡಿಶ್ ಟಿವಿ, ಟಾಟಾ ಪ್ಲೇ ಇತ್ಯಾದಿ ಡಿಟಿಎಚ್ ಆಪರೇಟರುಗಳು ಹಾಗೂ ದೇಶದ ಶೇ. 80ರಷ್ಟು ಕೇಬಲ್ ಆಪರೇಟರುಗಳು ಟ್ರಾಯ್ ನಿಗದಿಪಡಿಸಿದ ಹೊಸ ಬೆಲೆಗೆ ಸಂಬದ್ಧವಾಗಿವೆ ಎಂದೂ ಬ್ರಾಡ್ಕ್ಯಾಸ್ಟರ್ ಸಂಸ್ಥೆಗಳು ಹೇಳುತ್ತಿವೆ. ಈ ಮಾತನ್ನು ಕೇಬಲ್ ಟಿವಿ ಆಪರೇಟರುಗಳು ಒಪ್ಪುವುದಿಲ್ಲ. ಒಪ್ಪಂದಕ್ಕೆ ಸಹಿಹಾಕಿರುವ ಬಹುತೇಕ ಕೇಬಲ್ ಟಿವಿ ಆಪರೇಟರುಗಳು ಸದ್ಯ ಕಾರ್ಯಾಚರಣೆಯಲ್ಲೇ ಇಲ್ಲ. ಹಾತ್ವೇ ಕೇಬಲ್, ಡೆನ್ ನೆಟ್ವರ್ಕ್ ಮೊದಲಾದವು ಸೇರಿದಂತೆ ಅಖಿಲ ಭಾರತ ಡಿಜಿಟಲ್ ಕೇಬಲ್ ಒಕ್ಕೂಟದ ಬಹುತೇಕ ಸದಸ್ಯರು ಟ್ರಾಯ್ ಆದೇಶವನ್ನು ಒಪ್ಪಿಲ್ಲ ಎಂದು ಕೇಬಲ್ ಟಿವಿ ಆಪರೇಟರುಗಳು ಪ್ರತಿವಾದಿಸಿವೆ.
ನಮ್ಮ ಡಿಟಿಎಚ್ ಮತ್ತು ಕೇಬಲ್ಗಳಲ್ಲಿ ಪ್ರಸಾರವಾಗುವ ವಾಹಿನಿಗಳಲ್ಲಿ ಉಚಿತವಾಗಿ ಸಿಗುವಂಥವು ಮತ್ತು ಶುಲ್ಕ ನಿಗದಿಯಾದವು ಹೀಗೆ ಎರಡು ಥರಹದ ವಾಹಿನಿಗಳಿವೆ. ಶುಲ್ಕ ಇರುವ ವಾಹಿನಿಗಳಿಗೆ ಕೇಬಲ್ ಆಪರೇಟರುಗಳು ಹಣ ಕೊಟ್ಟು ಪ್ರಸಾರ ಅವಕಾಶ ಪಡೆಯಬೇಕು. ಈ ಶುಲ್ಕ ಹಣದ ಏರಿಕೆ ವಿಚಾರವೇ ಈಗ ಕೇಬಲ್ ಆಪರೇಟರುಗಳು ಮತ್ತು ಬ್ರಾಡ್ಕ್ಯಾಸ್ಟರ್ಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವುದು.