ಇಸ್ಲಾಮಾಬಾದ್: ಪಾಕಿಸ್ತಾನ ಅನುಭವಿಸುತ್ತಿರುವ ಆರ್ಥಿಕ ಬಾಧೆ (Pakistan Economic Crisis) ಒಂದೆರಡಲ್ಲ. ಹಣದುಬ್ಬರ ಎಗ್ಗಿಲ್ಲದೆ ಏರುವುದು ನಿಂತಿಲ್ಲ. ವಿದೇಶೀ ವಿನಿಯಮ ಮೀಸಲು ನಿಧಿ ಅಥವಾ ಫೋರೆಕ್ಸ್ ರಿಸರ್ವ್ (Forex Reserve) ತೀರಾ ಕೃಶಗೊಳ್ಳುತ್ತಲೇ ಇದೆ. ಸಾಲದ ಸುಳಿ ಬಲಗೊಳ್ಳುತ್ತಿದೆ. ಸಾಲದ ಕಂತು ಕಟ್ಟಲೂ ಪಾಕ್ ಬಳಿ ಹಣ ಇಲ್ಲದಾಗಿದೆ. ಐಎಂಎಫ್ ಸಾಲ (IMF Loan) ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ಇದೆ. ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಜಾಗತಿಕ ಆರ್ಥಿಕ ಹಿನ್ನಡೆಯ ಪರಿಣಾಮ ಪಾಕಿಸ್ತಾನದ ಮೇಲೆ ಆಗುತ್ತಿದೆ. ಮೊನ್ನೆಯಷ್ಟೇ ಪಾಕಿಸ್ತಾನದ ಸಚಿವರೊಬ್ಬರು ತಮ್ಮ ದೇಶ ದಿವಾಳಿಯಾಗಿದೆ ಎಂದು ಬಹಿರಂಗವಾಗಿಯೇ ಹೇಳಿದ್ದರು.
ಬ್ಲೂಮ್ಬರ್ಗ್ ಮಾಧ್ಯಮ ಸಂಸ್ಥೆಯ ವರದಿ ಪ್ರಕಾರ ಪಾಕಿಸ್ತಾನದ ದೊಡ್ಡ ದೊಡ್ಡ ಕಂಪನಿಗಳ ಚಟುವಟಿಕೆ ನಿಂತೇ ಹೋಗಿದೆ. ಉತ್ಪಾದನೆ ಮಾಡಲು ಕಚ್ಛಾ ವಸ್ತುಗಳೇ ಸಿಗದಂತಾಗಿದೆ. ಕಚ್ಛಾ ವಸ್ತುಗಳನ್ನು ಆಮದು ಮಾಡಿಕೊಳ್ಳಲೂ ಸಾಧ್ಯವಾಗದಷ್ಟು ಫೋರೆಕ್ಸ್ ರಿಸರ್ವ್ ಸಂಕುಚಿತಗೊಂಡಿದೆ. ಸುಜುಕಿ ಮೋಟಾರ್ ಸಂಸ್ಥೆ ಕೆಲವಾರು ದಿನಗಳಿಂದ ತನ್ನ ಉತ್ಪಾದನಾ ಘಟಕವನ್ನು ಮುಚ್ಚಿದೆ. ಕಚ್ಛಾ ವಸ್ತು ಅಲಭ್ಯತೆಯೊಂದೇ ಕಾರಣವಲ್ಲ, ಪಾಕಿಸ್ತಾನದಲ್ಲೀಗ ಆರ್ಥಿಕ ಬಿಕ್ಕಟ್ಟಿನಿಂದ ವಾಹನಗಳ ಮಾರಾಟ ಪ್ರಪಾತಕ್ಕೆ ಬಿದ್ದಿದೆ.
ಇನ್ನು, ವಾಹನಗಳಿಗೆ ಟಯರ್ ತಯಾರಿಸುವ ಗಾಂಧಾರ ಟಯರ್ ಅಂಡ್ ರಬ್ಬರ್ ಕಂಪನಿ ಕೂಡ ಫೆಬ್ರುವರಿ 13ರಂದು ತನ್ನ ಉತ್ಪಾದನಾ ಘಟಕದ ಬಾಗಿಲು ಬಂದ್ ಮಾಡಿದೆ. ಟಯರ್ ಉತ್ಪಾದನೆಗೆ ಬೇಕಾದ ಕಚ್ಛಾ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಕಷ್ಟವಾದ ಹಿನ್ನೆಲೆಯಲ್ಲಿ ಉತ್ಪಾದನೆ ನಡೆಸುವುದು ದುಸ್ತರವಾಗಿದೆ. ಇವಷ್ಟೇ ಅಲ್ಲ, ಉಕ್ಕು, ಜವಳಿ, ರಸಗೊಬ್ಬರ ಕ್ಷೇತ್ರಗಳ ಉತ್ಪಾದಕರು ತಮ್ಮ ಚಟುವಟಿಕೆಗಳನ್ನು ಅನಿರ್ದಿಷ್ಟ ಅವಧಿಯವರೆಗೆ ನಿಲ್ಲಿಸಿದ್ದಾರೆ.
ಇದನ್ನೂ ಓದಿ: Adani Effect: ಅದಾನಿ ಷೇರು ಏನಾದರಾಗಲೀ, ಭಾರತದ ಬುಲ್ಸ್ಟ್ರೀಟ್ ಜಗ್ಗೋದು ಕಷ್ಟ
ಪಾಕಿಸ್ತಾನದ ಆರ್ಥಿಕತೆ ಈ ಹಣಕಾಸು ವರ್ಷದಲ್ಲಿ ಶೇ. 1ರಿಂದ ಶೇ. 1.25ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. ಹಿಂದಿನ ವರ್ಷ ಶೇ. 6ರಷ್ಟು ಜಿಡಿಪಿ ವೃದ್ಧಿ ಕಂಡಿದ್ದ ಪಾಕಿಸ್ತಾನಕ್ಕೆ ಈ ದಿಢೀರ್ ಮಂದಗತಿ ಭಾರೀ ಫಜೀತಿಗೆ ಸಿಲುಕಿಸಿದೆ. ಹಣದುಬ್ಬರ ವಿಪರೀತವಾಗಿ ಹೋಗಿದೆ. ಹಾಲಿನ ಬೆಲೆ ಲೀಟರ್ಗೆ 250 ರೂ (ಪಾಕ್ ರುಪಾಯಿ) ಮತ್ತು ಕೋಳಿ ಬೆಲೆ ಕಿಲೋಗೆ 780 ರೂ ಆಗಿದೆ. ಪೆಟ್ರೋಲ್, ಬೇಳೆ ಕಾಳು ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಭಾರೀ ಏರಿಕೆ ಆಗಿದೆ.
ಪಾಕಿಸ್ತಾನದ ಫಾರೆಕ್ಸ್ ಮೀಸಲು ನಿಧಿ ಸಂಕುಚಿತಗೊಂಡಿದೆ. ಆಮದು ಇತ್ಯಾದಿ ಕಾರ್ಯಗಳಿಗೆ ಫಾರೆಕ್ಸ್ ರಿಸರ್ವ್ ಪ್ರಬಲವಾಗಿರುವುದು ಬಹಳ ಮುಖ್ಯ. ಬಾಹ್ಯ ಸಾಲವಂತೂ ಪಾಕಿಸ್ತಾನಕ್ಕೆ ವಿಪರೀತ ಇದೆ. ಆಗಲೇ ಹೇಳಿದಂತೆ ಸಾಲದ ಕಂತು ಕಟ್ಟಲೂ ಹಣವಿಲ್ಲದಂತಾಗಿದೆ. ಇವೆಲ್ಲಾ ಸಮಸ್ಯೆಗಳಿಂದ ಸ್ವಲ್ಪವಾದರೂ ಮುಕ್ತಿ ಹೊಂದಲು ಪಾಕಿಸ್ತಾನಕ್ಕೆ ಹೊಸ ಸಾಲ ಬೇಕಾಗಿದೆ. ಚೀನಾದಿಂದ ನಿರೀಕ್ಷಿಸಿದಷ್ಟು ಸಹಾಯ ಸಿಗುತ್ತಿಲ್ಲ. ಐಎಂಎಫ್ ಸಾಲ ಮಂಜೂರು ಆದರೂ ವಿವಿಧ ಕಾರಣಗಳಿಂದ ತಡೆಹಿಡಿಯಲಾಗಿದೆ. ಐಎಂಎಫ್ ಹಾಕಿದ ಷರತ್ತುಗಳಿಗೆಲ್ಲಾ ಪಾಕಿಸ್ತಾನ ಒಪ್ಪಿದೆಯಾದರೂ ಸಾಲ ಮಾತ್ರ ಬಿಡುಗಡೆ ಆಗುತ್ತಿಲ್ಲ. ಐಎಂಎಫ್ ಅನ್ನು ಮೆಚ್ಚಿಸಲು ಪಾಕಿಸ್ತಾನ ತೆರಿಗೆ ಹೆಚ್ಚಿಸಿದೆ, ಇಂಧನದ ಬೆಲೆ ಹೆಚ್ಚಿಸಿದೆ. ಆದರೂ ಕೂಡ ಐಎಂಎಫ್ ಸಾಲ ಬಿಡುಗಡೆಗೆ ಹಿಂದೇಟು ಹಾಕುತ್ತಿದೆ.