ಎಲ್​ಎಟಿ ಏರೋಸ್ಪೇಸ್: ಭಾರತದ್ದೇ ಸ್ವಂತ ವಿಮಾನ ಎಂಜಿನ್ ತಯಾರಿಸಲು ಹೊರಟಿದ್ದಾರೆ ಜೊಮಾಟೊ ಸಂಸ್ಥಾಪಕರು

LAT Aerospace to build India's first Indigenous Gas Turbine Engine: ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ಅವರು ಈ ವರ್ಷ ಆರಂಭಿಸಿರುವ ಎಲ್​ಎಟಿ ಏರೋಸ್ಪೇಸ್ ಸಂಸ್ಥೆ ಹೊಸ ಸಾಹಸಕ್ಕೆ ಕೈಹಾಕಿದೆ. ಗ್ಯಾಸ್ ಟರ್ಬೈನ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಈ ಕಂಪನಿ. ಇದು ಸಾಧ್ಯವಾದರೆ ಭಾರತಕ್ಕೆ ಹೊಸ ಇತಿಹಾಸ ಎನಿಸುತ್ತದೆ. ಅಮೆರಿಕ ಸೇರಿದಂತೆ ಏಳು ದೇಶಗಳಿಗೆ ಮಾತ್ರ ಈ ಎಂಜಿನ್ ತಯಾರಿಸುವ ಸಾಮರ್ಥ್ಯ ಇರುವುದು.

ಎಲ್​ಎಟಿ ಏರೋಸ್ಪೇಸ್: ಭಾರತದ್ದೇ ಸ್ವಂತ ವಿಮಾನ ಎಂಜಿನ್ ತಯಾರಿಸಲು ಹೊರಟಿದ್ದಾರೆ ಜೊಮಾಟೊ ಸಂಸ್ಥಾಪಕರು
ಎಲ್​ಎಟಿ ಏರೋಸ್ಪೇಸ್

Updated on: Aug 01, 2025 | 5:45 PM

ಬೆಂಗಳೂರು, ಆಗಸ್ಟ್ 1: ಭಾರತದ ರಕ್ಷಣಾ ಕ್ಷೇತ್ರವನ್ನು ರೋಮಾಂಚನಗೊಳಿಸುವ ಬೆಳವಣಿಗೆ ನಡೆಯುತ್ತಿದೆ. ಜೊಮಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ (Deepinder Goyal) ಅವರು ಎಲ್​ಎಟಿ ಏರೋಸ್ಪೇಸ್ (LAT Aerospace) ಎನ್ನುವ ಕಂಪನಿಯನ್ನು ಸ್ಥಾಪಿಸಿದ್ದಾರೆ. ಭಾರತದ ಡಿಆರ್​ಡಿಒಗೂ ಸಾಧ್ಯವಾಗದ ಸಾಹಸವನ್ನು ಈ ಕಂಪನಿ ಮಾಡಲು ಹೊರಟಿದೆ. ಸ್ವಂತವಾಗಿ ಗ್ಯಾಸ್ ಟರ್ಬೈನ್ ಎಂಜಿನ್ (Gas Turbine Engine) ಅನ್ನು ತಯಾರಿಸಲಿದೆ. ಇದೇನಾದರೂ ಯಶಸ್ವಿಯಾದಲ್ಲಿ ಭಾರತದ ಮೊದಲ ದೇಶೀಯ ನಿರ್ಮಿತ (Indigenously built) ಗ್ಯಾಸ್ ಟರ್ಬೈನ್ ಎಂಜಿನ್ ಇದಾಗಲಿದೆ. ವಿಶ್ವದ ಆರೇಳು ದೇಶಗಳು ಮಾತ್ರ ಈ ಇಂಜಿನ್ ತಯಾರಿಸುವ ಸಾಮರ್ಥ್ಯ ಇರುವುದು.

ದೀಪಿಂದರ್ ಗೋಯಲ್ 2008ರಲ್ಲಿ ಜೊಮಾಟೋ ಕಟ್ಟಿದ್ದರು. ನಂತರ, ಬ್ಲಿಂಕಿಟ್, ಡಿಸ್ಟ್ರಿಕ್ಟ್, ಹೈಪರ್​ಪ್ಯೂರ್, ಫೀಡಿಂಗ್ ಇಂಡಿಯಾ, ಟೆಂಪಲ್ ಅನ್ನೂ ಕಟ್ಟಿದ್ಧಾರೆ. ಇದೀಗ ಜೊಮಾಟೊದ ಮಾಜಿ ಸಿಒಒ ಸುರಭಿ ದಾಸ್ ಅವರ ಜೊತೆ ಸೇರಿ ಎಲ್​ಎಟಿ ಏರೋಸ್ಪೇಸ್ ಸ್ಥಾಪಿಸಿದ್ದಾರೆ. ಇದು ಸುಮಾರು 12ರಿಂದ 25 ಸೀಟುಗಳಿರುವ ಸಣ್ಣ ವಿಮಾನಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಅಗ್ಗದ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಕಲ್ಪ ಹೊಂದಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಎಫ್-35 ಫೈಟರ್ ಜೆಟ್ ಡೀಲ್​ನಿಂದ ಹಿಂದಕ್ಕೆ ಸರಿದ ಭಾರತ; ಇದು ಟ್ರಂಪ್ ಟ್ಯಾರಿಫ್​ಗೆ ಭಾರತ ಕೊಟ್ಟ ಪ್ರತ್ಯುತ್ತರವಾ?

ಇದೇ ಕಂಪನಿಯು ಗ್ಯಾಸ್ ಟರ್ಬೈನ್ ಎಂಜಿನ್ ಅನ್ನೂ ಅಭಿವೃದ್ಧಿಪಡಿಸಲು ಹೊರಟಿದೆ. ಇವೆರಡೂ ಕಾರ್ಯಗಳು ಯಶಸ್ವಿಯಾದಲ್ಲಿ ಭಾರತದ ಏರೋಸ್ಪೇಸ್ ಉದ್ಯಮ ಇಡೀ ವಿಶ್ವವನ್ನೇ ಬೆರಗುಳಿಸಬಹುದು. ವಿಮಾನಗಳು ಪ್ರತೀ ಪಟ್ಟಣಗಳನ್ನೂ ತಲುಪಬಹುದು. ಪೂರ್ಣವಾಗಿ ವಿಮಾನದ ತಯಾರಿಕೆ ಮಾಡಬಹುದು.

ಬೆಂಗಳೂರಿನಲ್ಲಿ ಎಲ್​ಎಟಿ ಎರೋಸ್ಪೇಸ್​ನ ರಿಸರ್ಚ್ ಸೆಂಟರ್ ಸ್ಥಾಪನೆಯಾಗಿದೆ. ಇಲ್ಲಿ ಬಹಳಷ್ಟು ಎಂಜಿನಿಯರುಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಗ್ಯಾಸ್ ಟರ್ಬೈನ್ ಎಂಜಿನ್ ತಯಾರಿಸಲು ಡಿಆರ್​ಡಿಒ ಈ ಹಿಂದೆ ಪ್ರಯತ್ನ ಮಾಡಿದ್ದಿದೆ. ಕಾವೇರಿ ಎಂಜಿನ್ ತಯಾರಿಸಲಾಯಿತಾದರೂ ಅದು ಯಶಸ್ವಿಯಾಗಲಿಲ್ಲ. ಈಗ ಎಲ್​ಎಟಿ ಏರೋಸ್ಪೇಸ್ ಪ್ರಯತ್ನ ಅಡಿ ಇಟ್ಟಿದೆ.

ಗೋಯಲ್ ಲಿಂಕ್ಡ್​ಇನ್ ಪೋಸ್ಟ್

‘ನೀವೆಂದಾದರೂ ಟರ್ಬೈನ್, ರೋಟರ್, ಕಂಟ್ರೋಲ್ ಸಿಸ್ಟಂ ಅಥವಾ ಆ ರೀತಿಯಂತಹದ್ದೇನಾದರೂ ನಿರ್ಮಿಸಿದ್ದರೆ, ಮತ್ತು ಹೊಸ ಇತಿಹಾಸ ನಿರ್ಮಾಣದಲ್ಲಿ ಪಾಲುದಾರನಾಗಲು ಬಯಸುತ್ತಿದ್ದರೆ ನಮ್ಮನ್ನು ಸಂಪರ್ಕಿಸಿ’ ಎಂದು ದೀಪಿಂದರ್ ಗೋಯಲ್ ತಮ್ಮ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಪ್ರಾಜೆಕ್ಟ್ ವಿಷ್ಣು; ಸೆಕೆಂಡ್​ಗೆ 2-3 ಕಿಮೀ ವೇಗವಾಗಿ ಹೋಗಬಲ್ಲ ಹೊಸ ಕ್ಷಿಪಣಿ ಸದ್ಯದಲ್ಲೇ

‘ಬ್ಯುಸಿನೆಸ್ ಜನರಿಂದ ಅನುಮೋದನೆಗೆ ಕಾಯಬೇಕಿಲ್ಲ. ಮೀಟಿಂಗ್ ಮೇಲೆ ಮೀಟಿಂಗ್ ಮಾಡಬೇಕಿಲ್ಲ. ಪ್ರಾಬ್ಲಮ್ ಸಾಲ್ವಿಂಗ್ ಮಾಡುವುದು, ಬೆಂಚ್ ಟೆಸ್ಟ್ ಮಾಡುವುದು, ಸಪ್ಲಯರ್​ಗಳ ಜೊತೆ ಕೆಲಸ ಮಾಡುವುದು, ಹಾರ್ಡ್​ವೇರ್ ಅನ್ನು ಮೊದಲಿಂದ ನಿರ್ಮಿಸುವುದು ಇವೆಲ್ಲವೂ ಆಗುತ್ತಿರುತ್ತದೆ’ ಎಂದು ಅವರು ಬರೆದಿದ್ದಾರೆ.

ಕೆಲವೇ ದೇಶಗಳಿಗೆ ಗೊತ್ತು ಈ ಎಂಜಿನ್

ಅಂದಹಾಗೆ, ಹ್ಯಾಸ್ ಟರ್ಬೈನ್ ಎಂಜಿನ್ ತಯಾರಿಸುವುದು ಅಷ್ಟು ಸುಲಭದ್ದಲ್ಲ. ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್, ಜರ್ಮನಿ, ಯುಕೆ ಮತ್ತು ಜಪಾನ್ ದೇಶಗಳ ಕೆಲ ಕಂಪನಿಗಳು ಮಾತ್ರವೇ ಈ ಎಂಜಿನ್ ತಯಾರಿಸುತ್ತವೆ. ಭಾರತದಲ್ಲಿ ಸದ್ಯ ವಿಮಾನ ತಯಾರಿಸಲು ಯತ್ನಗಳಾಗುತ್ತಿವೆಯಾದರೂ ಎಂಜಿನ್ ಅನ್ನು ಆಮದು ಮಾಡಿಕೊಳ್ಳಬೇಕು. ಈಗ ಎಲ್​ಎಟಿ ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಭಾರತ ಪೂರ್ಣ ಸ್ವಾವಲಂಬನೆ ಪಡೆಯಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ