ಬುಡಕಟ್ಟು ಜನಾಂಗದೊಂದಿಗೆ ಸಸ್ಯಶಾಸ್ತ್ರಜ್ಞರೊಬ್ಬರು ಇಂಗ್ಲಿಷ್ ನಲ್ಲಿ ಮಾತಾಡಿದಾಗ ಅವರು ಅಪಾರ್ಥ ಮಾಡಿಕೊಂಡು ರುಂಡ ಚೆಂಡಾಡಿದರು!

ಇಂಡೋನೆಷ್ಯಾದ ಕೆಲವು ಪ್ರಾಂತ್ಯಗಳಲ್ಲಿ ಪೊಟೊಂಗ್ ಕಪಾಲ ಹೆಸರಿನಲ್ಲಿ ಜನಗಳು ಒಂದು ಸಂಸ್ಕಾರವನ್ನು ಆಚರಿಸುತ್ತಿದ್ದರು. ಪೊಟೊಂಗ್ ಕಪಾಲ ಅಂದರೆ ಒಬ್ಬನ ತಲೆ ಕತ್ತರಿಸುವುದು. ರಾಬಿನ್ಸನ್ ಟೆಂಡರ್ ಕೊಕೊನಟ್ ಅಂತ ಹೇಳಿದ್ದು ಎಳೆನೀರಿನ ಕಾಯಿಗಳನ್ನು ಕತ್ತರಿಸುತ್ತಿದ್ದ ಯುವಕನಿಗೆ ಪೊಟೊಂಗ್ ಕಪಾಲ ಅಂತ ಕೇಳಿಸಿರುತ್ತದೆ.

ಬುಡಕಟ್ಟು ಜನಾಂಗದೊಂದಿಗೆ ಸಸ್ಯಶಾಸ್ತ್ರಜ್ಞರೊಬ್ಬರು ಇಂಗ್ಲಿಷ್ ನಲ್ಲಿ ಮಾತಾಡಿದಾಗ ಅವರು ಅಪಾರ್ಥ ಮಾಡಿಕೊಂಡು ರುಂಡ ಚೆಂಡಾಡಿದರು!
ಡಾ ಚಾರ್ಲ್ಸ್ ಬಡ್ ರಾಬಿನ್ಸನ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Nov 23, 2022 | 8:28 AM

ನೀವು ವಿದೇಶ ಪ್ರವಾಸಕ್ಕೆ (foreign trip) ಹೋಗಬೇಕಾದರೆ ಭೇಟಿ ನೀಡಲಿರುವ ದೇಶದ ಆಚಾರ ವಿಚಾರಗಳನ್ನು ತಿಳಿದುಕೊಂಡಿರುವುದು ಖಂಡಿತವಾಗಿಯೂ ನೆರವಾಗುತ್ತದೆ. ನಮ್ಮದಲ್ಲದ ದೇಶದಲ್ಲಿ ನಾವು ಎಣಿಸಿದಂತೆಯೇ ಎಲ್ಲವೂ ನಡೆಯುವುದಿಲ್ಲ. ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವು ಇವತ್ತು ಹೇಳುತ್ತಿರುವ ಕತೆ ಇದೇ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಡಾ ಚಾರ್ಲ್ಸ್ ಬಡ್ ರಾಬಿನ್ಸನ್ (Dr Charles Budd Robinson) ಹೆಸರಿನ ಖ್ಯಾತ ಸಸ್ಯಶಾಸ್ತ್ರಜ್ಞ ನಾವು ಮೇಲೆ ಹೇಳಿದ ಅಂಶಕ್ಕೆ ಹೆಚ್ಚು ಮಹತ್ವ ನೀಡಿರಲಿಲ್ಲ ಅನಿಸುತ್ತ್ತೆ. ಕೆನಡಾ ಮೂಲದ ರಾಬಿನ್ಸನ್ ಅವರಿಗೆ ಸಸ್ಯಗಳನ್ನು ಅರಸುತ್ತಾ ದೇಶ-ವಿದೇಶಗಳನ್ನು ಸುತ್ತುವ ಹವ್ಯಾಸವಿತ್ತು. ಅಂಥ ರಾಬಿನ್ಸನ್ 1910ರ ದಶಕದಲ್ಲಿ ಇಂಡೋನೇಷ್ಯಾಗೆ (Indonesia) ಬಂದಿದ್ದರು. ಮಲುಕು ನಡುಗಡ್ಡೆಗಳಲ್ಲಿ ಹೊಸ ಹೊಸ ಸಸ್ಯಗಳನ್ನು ಪತ್ತೆ ಮಾಡುವುದು ಅವರ ಉದ್ದೇಶವಾಗಿತ್ತು.

ಜನಕ್ಕೆ ಅವರು ಇಂಡೋನೇಷ್ಯಾಗೆ ಹೋಗಿದ್ದಷ್ಟೆ ಗೊತ್ತು. ಅಂದರೆ, ಅವರ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಅವರನ್ನು ಜೀವಂತವಾಗಿ ಪುನಃ ನೋಡಲೇ ಇಲ್ಲ. ಸಮುದ್ರ ತೀರದಲ್ಲಿ ರುಂಡ-ಮುಂಡ ಬೇರೆಯಾದ ಅವರ ದೇಹ ಸಿಕ್ಕಿತ್ತು. ಆ ನಡುಗಡ್ಡೆಯಲ್ಲಿ ಬುಡಕಟ್ಟು ಜನಾಂಗಗಳು ವಾಸಿಸುತ್ತಿದ್ದವು ಈಗಲೂ ವಾಸವಾಗಿವೆ.

ಅಸಲಿಗೆ ನಡೆದ ಸಂಗತಿಯೇನು ಗೊತ್ತಾ? ರಾಬಿನ್ಸನ್ ಮಲಾಕು ನಡುಗಡ್ಡೆಯಲ್ಲಿ ಅಲೆದಾಡುತ್ತಿದ್ದಾಗ, ಬೊಯೆಟೆನಿಸೆ ಬುಡಕಟ್ಟು ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲೊಬ್ಬ ಯುವಕ ತೆಂಗಿನ ಮರವೇರಿ ಕಾಯಿ ಕತ್ತರಿಸುತ್ತಿರುವುದನ್ನು ಕಂಡು ಇಂಗ್ಲಿಷ್ ಭಾಷೆಯಲ್ಲಿ ‘ನಂಗೊಂದು ಟೆಂಡರ್ ಕೊಕೊನಟ್ ಕೊಡು’ ಅಂತ ಕೇಳಿದ್ದಾರೆ. ಯಾವತ್ತೂ ಬಿಳಿ ಜನರನ್ನು ನೋಡಿರದಿದ್ದ ಯುವಕ ರಾಬಿನ್ಸನ್ ರನ್ನು ನೋಡಿ ಹೆದರಿ ಗಾಬರಿಯಾಗಿದ್ದಾನೆ. ಅವರು ಹೇಳಿದ್ದು ಕೇಳಿದ ಬಳಿಕ ಅವನಿಗೆ ಮತ್ತಷ್ಟು ಹೆದರಿಕೆಯಾಗಿ ಸರಸರನೆ ಗಿಡದಿಂದ ಇಳಿದು ಮನೆಕಡೆ ಓಡಿದ್ದಾನೆ. ಅವನ ಗಾಬರಿ ಹೆಚ್ಚಲು ಕಾರಣವೇನು ಗೊತ್ತಾ? ಬೊಯೆಟೆನಿಸೆ ಬುಡಕಟ್ಟು ಭಾಷೆಯಲ್ಲಿ ಕೊಕೊನಟ್ ಅಂದರೆ ತಲೆ ಕಡಿಯುವವ ಅಂತ ಅರ್ಥ!

ಅಮಾಯಕ ರಾಬಿನ್ಸನ್ ಯುವಕನನ್ನು ಹಿಂಬಾಲಿಸಿಕೊಂಡು ಅವನ ಮನೆಗೆ ಹೋಗಿದ್ದಾರೆ. ಅಲ್ಲಿಗೆ ತಲುಪಿದ ಬಳಿಕ ಸಂಜ್ಞೆ ಮಾಡುತ್ತಾ ಕುಡಿಯಲು ನೀರು ಕೇಳಿದಾಗ ಒಬ್ಬ ಮಹಿಳೆ ಮಣ್ಣಿನ ಪಾತ್ರೆಯಲ್ಲಿ ಅವರಿಗೆ ನೀರು ಕೊಟ್ಟಿದ್ದಾಳೆ.

ಬಿಳಿಬಣ್ಣದ ರಾಬಿನ್ಸನ್ ರನ್ನು ಕಂಡು ಅಲ್ಲಿದ್ದ ಜನರೆಲ್ಲ ಭಯಂಕರ ಹೆದರಿದ್ದಾರೆ. ಆ ಜಮಾನಾದಲ್ಲಿ ಬಿಳಿಯರು ಬಂದು ಬುಡಕಟ್ಟು ಜನಾಂಗದವರು ಕೊಲ್ಲುತ್ತಾರೆ ಎಂಬ ಗಾಳಿಸುದ್ದಿಗಳು ಮಲಾಕು ನಡೆಗಡ್ಡೆಗಳಲ್ಲಿ ವಿಪರೀತವಾಗಿ ಹರಡುತ್ತಿದ್ದವು.

ಇಂಡೋನೆಷ್ಯಾದ ಕೆಲವು ಪ್ರಾಂತ್ಯಗಳಲ್ಲಿ ಪೊಟೊಂಗ್ ಕಪಾಲ ಹೆಸರಿನಲ್ಲಿ ಜನಗಳು ಒಂದು ಸಂಸ್ಕಾರವನ್ನು ಆಚರಿಸುತ್ತಿದ್ದರು. ಪೊಟೊಂಗ್ ಕಪಾಲ ಅಂದರೆ ಒಬ್ಬನ ತಲೆ ಕತ್ತರಿಸುವುದು. ರಾಬಿನ್ಸನ್ ಟೆಂಡರ್ ಕೊಕೊನಟ್ ಅಂತ ಹೇಳಿದ್ದು ಎಳೆನೀರಿನ ಕಾಯಿಗಳನ್ನು ಕತ್ತರಿಸುತ್ತಿದ್ದ ಯುವಕನಿಗೆ ಪೊಟೊಂಗ್ ಕಪಾಲ ಅಂತ ಕೇಳಿಸಿರುತ್ತದೆ. ಹಾಗಾಗಿ ಬುಡಕಟ್ಟು ಜನ ರಾಬಿನ್ಸನ್ ತಮ್ಮನ್ನು ತಲೆ ಕತ್ತರಿಸಲು ಬಂದಿದ್ದಾನೆ ಅಂತ ಭಾವಿಸಿದ್ದಾರೆ.

ಎಲ್ಲ ಬುಡಕಟ್ಟು ಜನಾಂಗಗಳಿಗೆ ಒಬ್ಬ ಮುಖಂಡನಿರುತ್ತಾನೆ. ನಾವು ಚರ್ಚಿಸುತ್ತಿರುವ ಬುಡಕಟ್ಟು ಜನಾಂಗಕ್ಕೂ ಒಬ್ಬ ಮುಖಂಡನಿದ್ದ. ಅವನು ರಾಬಿನ್ಸನ್ ಅವರನ್ನು ಹಿಡಿದು ಕಟ್ಟಿ ಹಾಕಲು ಹೇಳಿ ಗುಡಿಸಲಿನಂತಿದ್ದ ಮನೆಯೊಳಗೆ ಹೋಗಿ ಕೈಯಲ್ಲಿ ಒಂದು ಕೊಡಲಿ ಹಿಡಿದು ಹೊರಬಂದಿದ್ದಾನೆ. ನಂತರ ತನ್ನ ಜನರನ್ನು ಉದ್ದೇಶಿಸಿ ಹೀಗೆ ಹೇಳಿದ್ದಾನೆ: ನಾನು ಹೇಳುವುದನ್ನು ಸರಿಯಾಗಿ ಕೇಳಿಸಿಕೊಳ್ಳಿ. ಯುರೋಪ್ ನಿಂದ ಬಂದಿರುವ ಈ ಬಿಳಿವ್ಯಕ್ತಿ ನಮ್ಮ ತಲೆಗಳನ್ನು ಕತ್ತರಿಸಲು ಬಂದಿದ್ದಾನೆ. ನಿಮ್ಮೆಲ್ಲರ ಜೀವ ಉಳಿಸಲು ನಾನು ಅವನನ್ನು ಕೊಲ್ಲುತ್ತೇನೆ’ ಎಂದು ಹೇಳಿದವನೇ ಬೇರೆ ಐವರ ಸಹಾಯದಿಂದ ರಾಬಿನ್ಸನ್ ಅವರ ರುಂಡ ಕತ್ತರಿಸಿಬಿಟ್ಟಿದ್ದಾನೆ!

ರಾಬಿನ್ಸನ್ ಧರಿಸಿದ್ದ ವಾಚ್, ಚಿನ್ನದ ಸರ, ಉಂಗುರ ಯಾವುದನ್ನೂ ಬಿಚ್ಚಿಕೊಳ್ಳದೆ ಅವರ ದೇಹವನ್ನು ತೆಂಗಿನ ಎಲೆಗಳಲ್ಲಿ ಸುತ್ತಿ ಅದಕ್ಕೆ ಕಲ್ಲುಗಳನ್ನು ಕಟ್ಟಿ ಸಮುದ್ರದಲ್ಲಿ ಮುಳುಗಿಸಿದ್ದಾರೆ.

ಹಾಗಾಗೇ ಹೇಳಿದ್ದು, ನಮಗೆ ಗೊತ್ತಿರದ ಸ್ಥಳಗಳಿಗೆ ಹೋಗುವಾಗ ಅಲ್ಲಿನ ಆಚಾರ ವಿಚಾರಗಳ ಬಗ್ಗೆ ಗೊತ್ತಿರಬೇಕು.

ಇನ್ನಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada