Crime News: ಹೆಂಡತಿ ಎದುರು ಗಂಡನಿಗೆ ಆವಾಜ್; ರೌಡಿಶೀಟರ್ನಿಂದ ಬಾಲಕನ ಕೊಲೆ
ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್ನಿಂದ ಬಾಲಕ ವಿನಯ್ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ನಲ್ಲಿ ಗುಂಡ್ಯ ಮೀಸಲು ಅರಣ್ಯದಲ್ಲಿ ವಿನಯ್ ಶವ ಪತ್ತೆಯಾಗಿದೆ.
ಹಾಸನ: ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್ನಿಂದ ಬಾಲಕ ವಿನಯ್ ಕೊಲೆಯಾದ (Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ (Hassan) ಜಿಲ್ಲೆಯ ಸಕಲೇಶಪುರ (Sakaleshpura) ತಾಲೂಕಿನ ಶಿರಾಡಿಘಾಟ್ನಲ್ಲಿ (Shiradi Ghat) ಗುಂಡ್ಯ ಮೀಸಲು ಅರಣ್ಯದಲ್ಲಿ ವಿನಯ್ ಶವ ಪತ್ತೆಯಾಗಿದೆ. ಹಾಸನದಲ್ಲಿ ಬಾಲಕನನ್ನು ಕೊಲೆಗೈದು 80 ಕಿ.ಮೀ. ದೂರ ಸಾಗಿಸಿ ಶಿರಾಡಿಘಾಟ್ನ ಜಲಪಾತದಲ್ಲಿ ವಿನಯ್ ಶವ ಹಂತಕರು ಎಸೆದಿದ್ದರು. ಈ ಸಂಬಂಧ ನಿನ್ನೆಯಿಂದ (ಜುಲೈ 11) ಶೋಧ ನಡೆಸುತ್ತಿದ್ದು, ಇಂದು ಪೊಲೀಸರಿಗೆ ವಿನಯ್ ಶವ ಸಿಕ್ಕಿದೆ.
ಶವ ಪತ್ತೆಯಾದ ಸ್ಥಳಕ್ಕೆ ಎಸ್ಪಿ ಹರಿರಾಂ ಶಂಕರ್ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪಬ್ನ ಲಿಫ್ಟ್ನಲ್ಲಿ ಕೆಳಗಿಳಿಯುವ ವಿಚಾರಕ್ಕೆ ರೌಡಿಶೀಟರ್ ರಾಕೇಶ್, ವಿನಯ್ ನಡುವೆ ಜಗಳವಾಗಿತ್ತು. ಹೆಂಡತಿ ಎದುರೇ ವಿನಯ್ (17) ಆವಾಜ್ ಹಾಕಿದನೆಂದು ಮರುದಿನ ಹಲ್ಲೆ ನಡೆಸಿ ಕೊಲೆಗೈದು ಎಸೆದಿದ್ದರು. ವಿನಯ್ ಕಾಣೆಯಾಗಿದ್ದಾನೆಂದು ವಿನಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಪಬ್ನಲ್ಲಿ ಗಲಾಟೆ ಮಾಡಿದ್ದವರನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ರೌಡಿಶೀಟರ್ ರಾಕೇಶ್ ಸೇರಿ 8 ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ವಿನಯ್ ಕೊಲೆ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ದಿನಸಿ ಖರೀದಿಸಲು ಬಂದು ಅಂಗಡಿಯಲ್ಲಿದ್ದ ಮಹಿಳೆಯ ಮಾಂಗಲ್ಯಸರ ಕದ್ದ ದುಷ್ಕರ್ಮಿಗಳು
ತುಮಕೂರು: ದಿನಸಿ ಖರೀದಿಸುವ ಸೋಗಿನಲ್ಲಿ ಬಂದು ಮೂವರು ಅಂಗಡಿಯಲ್ಲಿದ್ದ ರೂಪಾ ಎಂಬುವರ ಮುಖಕ್ಕೆ ಖಾರದಪುಡಿ ಎರಚಿ ಮಾಂಗಲ್ಯಸರ ಕದ್ದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಕಟ್ಟೆಗೊಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಾಜಿ ಶಾಸಕನ ಮನೆ ಹಿಂದಿನ ಖಾಲಿ ಸೈಟ್ನಲ್ಲಿ ಗಾಂಜಾ ಗಿಡ ಪತ್ತೆ
ಬೆಂಗಳೂರು: ಬೆಂಗಳೂರಿನ ಆರ್.ಟಿ.ನಗರದ ಖಾಲಿ ನಿವೇಶನದಲ್ಲಿ ಗಾಂಜಾ ಗಿಡ ಪತ್ತೆಯಾಗಿದೆ. ಕಿಡಿಗೇಡಿಗಳು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮನೆಯ ಹಿಂಭಾಗ ಖಾಲಿ ನಿವೇಶನದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದರು. ಈ ಬಗ್ಗೆ ಬೇಳೂರು ಗೋಪಾಲಕೃಷ್ಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಆರ್.ಟಿ.ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಂಜಾ ಗಿಡಗಳನ್ನು ತೆರವುಗೊಳಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಖಾಲಿ ನಿವೇಶನದ ಮಾಲೀಕರ ಮಾಹಿತಿ ಕಲೆಹಾಕುತ್ತಿದ್ದಾರೆ. ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಾವೇರಿ ನದಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
ಮಂಡ್ಯ: ಕಾವೇರಿ ನದಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂ ಬಳಿ ನಡೆದಿದೆ. ಬಿಕಾಂ ವಿದ್ಯಾರ್ಥಿ ಸೃಜನ್ (20) ಮೃತ ಯುವಕ. ಮೈಸೂರಿನ ಪಡುವಾರಹಳ್ಳಿ ಬಡಾವಣೆ ಸೃಜನ್ ಸ್ನೇಹಿತರೊಂದಿಗೆ KRS ಜಲಾಶಯ ಹಾಗೂ ಕಾವೇರಿ ನದಿ ನೋಡಲು ಬಂದಿದ್ದನು.
ಭೋರ್ಗರೆಯುತ್ತಿರುವ ಕಾವೇರಿ ನದಿ ನೋಡುತ್ತಿದ್ದಂತೆ ಸೃಜನ್ ನದಿಗೆ ಹಾರಿದ್ದಾನೆ. ಸೃಜನ್ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ. ಬಳಿಕ ಸ್ನೇಹಿತರು ಸೃಜನ್ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. KRS ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಕಲಿ ನಂಬರ್ ಪ್ಲೇಟ್ ಅಳವಡಿಸಿ ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಅಳವಡಿಸಿ ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಸಯ್ಯದ್ ಅಬ್ತಾಬ್ ಬಂಧಿತ ಆರೋಪಿ. ಬೈಕ್ EMI ಪಾವತಿಸದೆ, ಟ್ರಾಫಿಕ್ ಉಲ್ಲಂಘನೆಯ ದಂಡದಿಂದ ತಪ್ಪಿಸಿಕೊಳ್ಳಲು ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಓಡಾಟ ಮಾಡುತ್ತಿದ್ದನು.
ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ನ್ಯಾಯಾಲಯದಿಂದ ಆರೋಪಿಯನ್ನ 14 ದಿನ ಪೊಲೀಸ್ ಕಸ್ಟಡಿಗೆ ಪಡೆದು ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ.