ಹೊಸ ಚಪ್ಪಲಿ ತರ್ತೀನಿ ಎಂದು ಮಡದಿಗೆ ಹೇಳಿ ಹೋದವ ನಡುರಸ್ತೆಯಲ್ಲೇ ಹೆಣವಾಗಿದ್ದ
20 ದಿನಗಳ ಹಿಂದೆ ಹಾಡು ಹಗಲೇ ಮರ್ಡರ್ ಅಟ್ಯಾಕ್ನಿಂದ ತಪ್ಪಿಸಿಕೊಂಡವ ಈಗ ಅನಮಾನಸ್ಪದವಾಗಿ ಸಾವನ್ನಪ್ಪಿರುವುದು ದುರಂತ
ಆತನ ಮೇಲೆ ಕೇವಲ 20 ದಿನಗಳ ಹಿಂದೆ ಹಾಡು ಹಗಲೇ ಮರ್ಡರ್ ಅಟ್ಯಾಕ್ ಆಗಿತ್ತು. ಲಾಂಗು ಮಚ್ಚಿನಿಂದ ಅಟ್ಯಾಕ್ ಮಾಡಿದ್ದ ಪುಂಡರ ಪಡೆಯಿಂದ ಹೇಗೋ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದನು ರೌಡಿಶೀಟರ್. ರೌಡಿಶೀಟರ್ ಮಡದಿ ಮನೆಯಲ್ಲೇ ಸೆಟಲ್ ಆಗಿದ್ದು, ನಿನ್ನೆ (ಅ.24) ಹಬ್ಬವೆಂದು ಹೊಸ ಚಪ್ಪಲಿ ತರ್ತೀನಿ ಎಂದು ಮಡದಿಗೆ ಹೇಳಿ ಹೋದವನು ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಬೆಳಿಗ್ಗೆ ಎದ್ದು ನೋಡಿದರೆ ನಡು ರಸ್ತೆಯಲ್ಲಿ ರೌಡಿ ಶೀಟರ್ ಕಪ್ಪೆ ಕುಮಾರ್ ಮೃತದೇಹ ಪತ್ತೆಯಾಗಿತ್ತು. ಕಪ್ಪೆ ಕುಮಾರ್ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ .
ಕಪ್ಪೆ ಕುಮಾರ್ ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಮಾಚಬೂವನಹಳ್ಳಿ ಗ್ರಾಮದವನು. 15 ವರ್ಷಗಳ ಹಿಂದೆ ಹಿರಿಸಾವೆಯ ಪ್ರಶಾಂತಿ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದನು. ಅಪ್ಪಿ ಆಲಿಯಾಸ್ ಮಂಜ ಮತ್ತು ಕಪ್ಪೆ ಕುಮಾರ್ ಸ್ನೇಹಿತರು. ಕಪ್ಪೆ ಕುಮಾರ್ ಇತ್ತೀಚಿಗೆ ಬೈಕ್ವೊಂದನ್ನು ಖರೀದಿಸಿದ್ದನು. ಬೈಕ್ನ ಹಣ ಕೊಡೊ ವಿಚಾರವಾಗಿ ಅಪ್ಪಿ ಜೊತೆಗೆ ಕಪ್ಪೆ ಕುಮಾರ್ನ ಕಿರಿಕ್ ಆಗಿತ್ತು. ಆಗಿನಿಂದ ಇಬ್ಬರು ಪರಸ್ಪರ ಎದುರಾಳಿ ಟೀಂ ಆಗಿ ಬದಲಾಗಿದ್ದರು.
ಅದು ಅ.5 ಸರಿಯಾಗಿ 20 ದಿನಗಳ ಹಿಂದೆ ಅಪ್ಪಿ ಆಲಿಯಾಸ್ ಮಂಜ, ರಾಜಾಹುಲಿ ಆಲಿಯಾಸ್ ನಂದೀಶ್ ಮತ್ತು ಇತರೆ ಮೂವರಿದ್ದ ಗ್ಯಾಂಗ್ ಕಾರಿನಲ್ಲಿ ಬಂದು, ಹಿರಿಸಾವೆಯ ಬಾರ್ ಬಳಿ ನಿಂತಿದ್ದ ಕಪ್ಪೆ ಕುಮಾರ್ನ ಮೇಲೆ ಲಾಂಗ್ ಬೀಸಿದ್ದರು. ಕೂಡಲೇ ಕುಮಾರ್ ಹೇಗೋ ಅಲ್ಲಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದನು. ಆದರೆ ಗಾಲಾಟೆಯಲ್ಲಿ ಎರಡು ಕಾಲುಗಳಿಗೆ ಪೆಟ್ಟಾಗಿ ಚಿಕಿತ್ಸೆ ಪಡೆದು ಕೆಲ ದಿನಗಳಿಂದ ಹಿರಿಸಾವೆಯ ತನ್ನ ಮಡದಿ ಮನೆಯಲ್ಲಿ ವಾಸವಾಗಿದ್ದನು. ಕುಮಾರ್ ಮೇಲೆ ಆತನ ಸ್ನೇಹಿತರೇ ಅಟ್ಯಾಕ್ ಮಾಡಿದ ಪ್ರಕರಣದಲ್ಲಿ ಐವರ ವಿರುದ್ದ ಪ್ರಕರಣ ದಾಖಲಾಗಿ ಹಲವರ ಬಂಧನ ಕೂಡ ಆಗಿತ್ತು.
ಆದರೆ ಇದೆಲ್ಲವೂ ಆಗಿ 20 ದಿನದಲ್ಲಿ ಕುಮಾರ್ ಪ್ರಾಣ ಬಿಟ್ಟಿದ್ದಾನೆ. ಸಂಬಂಧಿ ಚೇತನ್ ಜೊತೆಗೆ ಚಪ್ಪಲಿ ತರೋಕೆ ಹೋದವನು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಹಿರಿಸಾವೆ ಪೊಲೀಸರು ತನಿಖೆ ಕೈಗೊಂಡಿದ್ದು, ಹಿರಿಸಾವೆ ಸುತ್ತಮುತ್ತ ಈ ರೀತಿಯ ಗಲಾಟೆಗಳು ಹೆಚ್ಚಾಗುತ್ತಲೇ ಇದ್ದು ಈ ಬಗ್ಗೆ ಪೊಲೀಸರು ಕಠಿಣ ಕ್ರಮ ವಹಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ-ಮಂಜುನಾಥ್.ಕೆ.ಬಿ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ