ಎಗ್ ರೈಸ್ ಜೊತೆ ಕಬಾಬ್​ ಕೇಳಿದ ಯುವಕ; ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಚಾಕುವಿನಿಂದ ಇರಿದು ಕೊಂದ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 19, 2023 | 4:24 PM

ಆತ ಸದಾಕಾಲ ಗಾಂಜಾ ನಶೆಯಲ್ಲಿ ಇರುತ್ತಿದ್ದ ಯುವಕ. ಅದೇ ನಶೆಯಲ್ಲಿ ನಿನ್ನೆ(ಸೆ.18) ರಾತ್ರಿ ಎಗ್ ರೈಸ್ ತಿನ್ನೋಕೆ ಬಂದಿದ್ದ. ಎಗ್ ರೈಸ್ ತಿನ್ನುವ ವೇಳೆ ಚಿಕನ್‌ ‌ಕಬಾಬ್ ಕೇಳಿದ್ದ, ಅದಕ್ಕೆ ಇಲ್ಲ ಖಾಲಿಯಾಗಿದೆ ಎಂದಿದ್ದಕ್ಕೆ ಶುರುವಾಗಿತ್ತು ಜಗಳ. ಇಷ್ಟಕ್ಕೆ ಎಗ್ ರೈಸ್ ಮಾಲೀಕನ‌ ಕತ್ತಿಗೆ ಚಾಕು ಇರಿದು ಕೊಲೆ‌ ಮಾಡಿದ್ದಾನೆ.

ಎಗ್ ರೈಸ್ ಜೊತೆ ಕಬಾಬ್​ ಕೇಳಿದ ಯುವಕ; ಇಲ್ಲ ಎಂದಿದ್ದಕ್ಕೆ ಅಂಗಡಿ ಮಾಲೀಕನನ್ನೇ ಚಾಕುವಿನಿಂದ ಇರಿದು ಕೊಂದ
ಮೃತ ವ್ಯಕ್ತಿ
Follow us on

ಬಾಗಲಕೋಟೆ, ಸೆ.19: ಕೇವಲ ಎಗ್ ರೈಸ್ ಜೊತೆ ಚಿಕನ್ ಕಬಾಬ್ ಕೊಡಲಿಲ್ಲ ಎಂಬ ಕಾರಣಕ್ಕೆ ಅಮಾಯಕನ‌ ಕೊಲೆ‌ ಮಾಡಲಾಗಿರುವ ಘಟನೆ ಬಾಗಲಕೋಟೆ (Bagalkote) ‌ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಢ ಪಟ್ಟಣದಲ್ಲಿ ನಡೆದಿದೆ. ಗೈಬುಸಾಬ್ ಮುಲ್ಲಾ(29)ಮೃತ ರ್ದುದೈವಿ. 22 ವರ್ಷದ ಮುಸ್ತಫಾ ಜಂಗಿ ಎಂಬ ಆರೋಪಿ ಕೊಲೆ ಮಾಡಿದ್ದಾನೆ. ಹೌದು, ಅಮೀನಗಢ ಪಟ್ಟಣದ ಬಸ್ ನಿಲ್ದಾಣದ ಬಳಿ ಎಗ್ ರೈಸ್ ಅಂಗಡಿ ಮುಂದೆ ನಿನ್ನೆ(ಸೆ.18) ರಾತ್ರಿ ಗಾಂಜಾ ನಶೆಯಲ್ಲಿ ಬಂದಿದ್ದ ಮುಸ್ತಫಾ ಮೊದಲು ಎಗ್​ ರೈಸ್ ಕೇಳಿ ತಿನ್ನುತ್ತಾ ಚಿಕನ್ ಕಬಾನ್ ಕೇಳಿದ್ದಾನೆ. ಆವಾಗ ಗೈಬುಸಾಬ್ ಖಾಲಿಯಾಗಿದೆ ಅಂದಿದಷ್ಟೇ ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಾನೆ.

ಕಬಾಬ್​ ಇಲ್ಲ ಎಂದಿದಕ್ಕೆ ಕೊಲೆ

ಬಳಿಕ ಮಾತಿಗೆ ‌ಮಾತು ಬೆಳೆದು, ಇಬ್ಬರ ನಡುವೆ ಜಗಳ ನಡೆದಿದೆ. ಆಗ ಅಕ್ಕಪಕ್ಕದವರು ಬಿಡಿಸಿದ್ದಾರೆ. ಮನೆಗೆ ಹೋಗಿ ಸಹೋದರರ ಕರೆತಂದ ಮುಸ್ತಫಾ, ಮತ್ತೆ ಗೈಬುಸಾಬ್ ಹಾಗೂ ಅಳಿಯ ಹಮೀದ್‌ ಜೊತೆ ಜಗಳ ಶುರು ಮಾಡಿದ್ದಾನೆ‌. ನೋಡ ನೋಡುತ್ತಿದ್ದಂತೆ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಗೈಬುಸಾಬ್​ನನ್ನು ಕಳೆದುಕೊಂಡ ಕುಟುಂಬಸ್ಥರು, ಸ್ಥಳೀಯರು ಮುಸ್ತಫಾಗೆ ಕಠಿಣ ಶಿಕ್ಷೆಯಾಗಬೇಕು. ಜೊತೆಗೆ ಪಟ್ಟಣದಲ್ಲಿ ನಡೆಯುತ್ತಿರುವ ಗಾಂಜಾ ಹಾವಳಿ ತಡೆಗಟ್ಟಬೇಕು ಅಂತಿದ್ದಾರೆ.

ಇದನ್ನೂ ಓದಿ:ಪ್ರೇಯಸಿಯ ಮಾಜಿ ಲವ್ವರ್​ನಿಂದ ಹಾಲಿ ಲವ್ವರ್ ಕೊಲೆ‌: ಕಿರಣ್ ಅಂಡ್ ಟೀಮ್ ಅಂದರ್

ಇನ್ನು ಮೃತ ಗೈಬುಸಾಬ್ ಎಸ್.ಡಿ.ಪಿ.ಐ ಕಾರ್ಯಕರ್ತ ಕೂಡ ಆಗಿದ್ದಾನೆ. ಮೂಲತಃ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ನಿವಾಸಿ. ಆದರೆ, ಪತ್ನಿಯ ತವರು‌ಮನೆ ಅಮೀನಗಢ ಪಟ್ಟಣದಲ್ಲಿ ಅಳಿಯ ಹಮೀದ್ ಜೊತೆ ಎಗ್ ರೈಸ್ ವ್ಯವಹಾರ ಮಾಡುತ್ತಿದ್ದ. ಪತ್ನಿ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಅಂತಹ ವ್ಯಕ್ತಿಯನ್ನು ಈ ಪಾಪಿ ಮುಸ್ತಫಾ‌ ಕೊಲೆ ಮಾಡಿದ್ದು, ಪತ್ನಿ‌-ಮಕ್ಕಳು ಅನಾಥರಾಗಿದ್ದಾರೆ.

ಗಾಂಜಾಗೆ ಅಡಿಕ್ಟ್​ ಆಗಿದ್ದ ಆರೋಪಿ ಮುಸ್ತಫಾ

ಮುಸ್ತಫಾ ಜಂಗಿ ಗಾಂಜಾಗೆ ಅಡಿಕ್ಟ್ ಆಗಿದ್ದ. ಜೊತೆಗೆ ಈ ಹಿಂದೆ 2012 ರಲ್ಲಿ ಬೈಕ್‌ ಕಳ್ಳತನದಲ್ಲಿ ಬಂಧಿತನಾಗಿದ್ದ. ನಂತರ ಉಡುಪಿಯಲ್ಲಿ ಡ್ರಗ್ ಸೇವನೆ ಕೇಸಲ್ಲಿ ಸಿಲುಕಿ ಹಾಕಿಕೊಂಡಿದ್ದ. ಗಾಂಜಾ ನಶೆಯಲ್ಲಿಯೇ ಸದಾ ತೇಲಾಡುತ್ತಿದ್ದ ಇತ. ಒಬ್ಬ ಬಡ ಎಗ್ ರೈಸ್ ವ್ಯಾಪಾರಿಯನ್ನು ಬಲಿ ಪಡೆದಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಪಾಪಿಯನ್ನು ಬೆಳಿಗ್ಗೆ ಆಗುವಷ್ಟರಲ್ಲೇ ಪೊಲೀಸರು ಬಂಧಿಸಿದ್ದಾರೆ.

ಘಟನೆಗೆ ಚಿಕನ್ ವಿಚಾರದಲ್ಲಿ ಶುರುವಾದ ಜಗಳ ಒಂದೇ ಕಾರಣನಾ? ಅಥವಾ ಬೇರೆ ಏನಾದರೂ ಇದೆಯಾ ಎಂದು ತನಿಖೆ ನಡೆಸಿದ್ದಾರೆ. ಜೊತೆಗೆ ಗಾಂಜಾ ಬಗ್ಗೆಯೂ ಕಠಿಣ ಕ್ರಮ ಕೈಗೊಳ್ಳೋದಾಗಿ ಪೊಲೀಸರು ಹೇಳಿದ್ದು, ಒಟ್ಟಿನಲ್ಲಿ ಕೇವಲ ಚಿಕನ್ ಕಬಾಬ್ ಗೋಸ್ಕರ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇದಕ್ಕೆ ಪಟ್ಟಣದಲ್ಲಿನ ಗಾಂಜಾ ಹಾವಳಿಯೇ ಮುಖ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಪೊಲೀಸರು ಗಾಂಜಾ ಹಾವಳಿಗೆ ಕಡಿವಾಣ ಹಾಕಬೇಕಿದೆ.

ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Tue, 19 September 23