ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಹತ್ಯೆ ಕೇಸ್: ಪೊಲೀಸರ ಮುಂದೆ ಸ್ಫೋಟಕ ಅಂಶ ಬಾಯ್ಬಿಟ್ಟ ಹಂತಕ ಕಿರಣ್

Pratima Murder Case: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಸ್ಫೋಟಕ ಅಂಶಗಳು ಬೆಳಕಿಗೆ ಬರುತ್ತಿವೆ. ಹಂತಕ ಕಿರಣ್ ಪೊಲೀಸ್​ ವಿಚಾರಣೆ ವೇಳೆ ಒಂದೊಂದೇ ಅಂಶವನ್ನು ಬಾಯ್ಬಿಡುತ್ತಿದ್ದಾರೆ. ಇದೀಗ ಕೊಲೆ ಹಿಂದಿನ ರಹಸ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.

ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಹತ್ಯೆ ಕೇಸ್: ಪೊಲೀಸರ ಮುಂದೆ ಸ್ಫೋಟಕ ಅಂಶ ಬಾಯ್ಬಿಟ್ಟ ಹಂತಕ ಕಿರಣ್
ಕಿರಣ್(ಆರೋಪಿ), ಪ್ರತಿಮಾ(ಮೃತ ಅಧಿಕಾರಿ)
Updated By: ರಮೇಶ್ ಬಿ. ಜವಳಗೇರಾ

Updated on: Nov 06, 2023 | 2:20 PM

ಬೆಂಗಳೂರು, (ನವೆಂಬರ್ 06): ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಸ್ಫೋಟಕ ಅಂಶಗಳು ಬೆಳಕಿಗೆ ಬರುತ್ತಿವೆ. ಹಂತಕ ಕಿರಣ್ ಪೊಲೀಸ್​ ವಿಚಾರಣೆ ವೇಳೆ ಒಂದೊಂದೇ ಅಂಶವನ್ನು ಬಾಯ್ಬಿಡುತ್ತಿದ್ದಾರೆ. ಇದೀಗ ಕೊಲೆ ಹಿಂದಿನ ರಹಸ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ. ಸರ್ಕಾರಿ ಕೆಲಸದಲ್ಲಿ ಇದ್ದೇನೆ ಎಂದು ಮನೆಯವರು, ಸಂಬಂಧಿಗಳಿಗೆ ಹೇಳಿಕೊಂಡಿದ್ದ. ಅಲ್ಲದೇ ಪತ್ನಿಗೂ ಸಹ ತನ್ನದು ಸರ್ಕಾರಿ ಕೆಲಸ ಎಂದು ಹೇಳಿ ಬಿಲ್ಡಪ್ ತೆಗೆದುಕೊಡಿದ್ದ. ಆದ್ರೆ, ಕೆಲಸದಿಂದ ತೆಗೆಯುತ್ತಿದ್ದಂತೆ ಪತ್ನಿ ಕಿರಣ್​ನನ್ನು ತೊರೆದು ಹೋಗಿ ತವರು ಮನೆ ಸೇರಿದ್ದಳು. ಇದರಿಂದ ಕೋಪಗೊಂಡು ಪ್ರತಿಮಾರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಕಂಟ್ರಾಕ್ಟ್ ಕೆಲಸದಲ್ಲಿ ಇದ್ದರೂ, ಸರ್ಕಾರಿ ಕೆಲಸ ಎಂದಿದ್ದ

ಕಂಟ್ರಾಕ್ಟ್ ಕೆಲಸದಲ್ಲಿ ಇದ್ದರೂ, ಸರ್ಕಾರಿ ಕೆಲಸ ಎಂದು ಮನೆ ಮಂದಿಗೆಲ್ಲ ಸುಳ್ಳು ಹೇಳಿಕೊಂಡು ಬಂದಿದ್ದ. ಆದ್ರೆ, ಪ್ರತಿಮಾ ಅವರು ಏಕಾಏಕಿ ಕಿರಣ್​ನನ್ನು ಕೆಲಸದಿಂದ ತೆಗೆದಿದ್ದರು. ಇದರಿಂದ ಕಿರಣ್​​ನ ನಿಜವಾದ ಬಂಡವಾಳ ಬಟಾಬಯಲಾಗಿದೆ. ಇದರಿಂದ ಹೆಂಡತಿ ಸಹ ಏಕೆ ಸುಳ್ಳು ಹೇಳಿದ್ದು ಎಂದು ಮುನಿಸಿಕೊಂಡು ಕಿರಣ್​ನನ್ನು ತೊರೆದು ತವರು ಮನೆ ಸೇರಿದ್ದಳು. ಇದರಿಂದ ರೊಚ್ಚಿಗೆದ್ದಿದ್ದ ಕಿರಣ್​, ಶನಿವಾರ (ನವೆಂಬರ್  04) ಒಂದು ನಿರ್ಧಾರಕ್ಕೆ ಬಂದಿದ್ದ. ಏನಾದರೂ ಮಾಡಿ ಕೆಲಸ ವಾಪಸ್ ತೆಗೆದುಕೊಳ್ಳಬೇಕು. ಇಲ್ಲ ಪ್ರತಿಮಾಳನ್ನ ಮುಗಿಸಬೇಕು ಎಂದು ಡಿಸೈಡ್ ಮಾಡಿದ್ದ.

ಅದರಂತೆ ಕಿರಣ್ ಶನಿವಾರ, ಪ್ರತಿಮಾ ಮನೆಗೆ ತೆರಳಿ ವಾಪಸ್​ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದ. ಆದ್ರೆ, ಇದಕ್ಕೆ ಪ್ರತಿಮಾ ನಿರಾಕರಿಸಿದ್ದರು. ಇದರಿಂದ ರೊಚ್ಚಿಗೆದ್ದ ಕಿರಣ್​, ಮನೆಯ ಕಿಚನ್ ನಲ್ಲಿದ್ದ ಚಾಕು ತೆಗೆದುಕೊಂಡು ಪ್ರತಿಮಾರನ್ನು ಕೊಲೆ ಮಾಡಿದ್ದಾನೆ. ಬಳಿಕ ಆ ಚಾಕುವನ್ನು ಜೆಪಿ ನಗರ ಬಳಿ ಎಸೆದಿದ್ದೇನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪ್ರತಿಮಾ ಹತ್ಯೆ ಪ್ರಕರಣ: ಕೆಲಸದಿಂದ ತೆಗೆಯಬೇಡಿ ಎಂದು ಕಾಲು ಹಿಡಿದುಕೊಳ್ಳಲು ಬಂದವನೇ ಗಣಿ ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರಾಣ ತೆಗೆದ

ಹಂತಕ ಕಿರಣ್ ಪೊಲೀಸರಿಗೆ ಸಿಕ್ಕಿದ್ದೇಗೆ?

ಬೆಂಗಳೂರಿನ ಕೋಣನಕುಂಟೆ ನಿವಾಸಿಯಾಗಿರುವ ಅರೋಪಿ ಕಿರಣ್​ ಕೊಲೆ ಮಾಡಿ ಬಳಿಕ ಇಬ್ಬರು‌ ಸ್ನೇಹಿತರ ಜತೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ. ಕೊಲೆ ಬಗ್ಗೆ ಜೊತೆಗಿದ್ದ ಸ್ನೇಹಿತರಿಗೂ ಯಾವುದೇ ಮಾಹಿತಿ ನೀಡಿರಲಿಲ್ಲ. ಇನ್ನು ಎರಡು ಮೊಬೈಲ್​​ಗಳನ್ನು ಬಳಸುತ್ತಿದ್ದ ಕಿರಣ್, ಒಂದು ಫೋನ್ ಮನೆಯಲ್ಲಿ ಸ್ವಿಚ್ ಆಫ್ ಮಾಡಿಟ್ಟು, ಇನ್ನೊಂದು ಫೋನ್ ತೆಗೆದುಕೊಂಡು ಹೋಗಿದ್ದ. ಆದ್ರೆ, ಅದನ್ನು ಸ್ವಿಚ್ ಆಫ್ ಮಾಡಿದ್ದ. ನಂತರ ಶನಿವಾರ (ಕೊಲೆ ಮಾಡಿದ ದಿನ) ರಾತ್ರಿ 10.30ರ ನಂತರ ಮೊಬೈಲ್​ ಆನ್ ಮಾಡಿದ್ದ.

ಇತ್ತ ಪೊಲೀಸರು ಪ್ರತಿಮಾ ಜತೆ ಸಂಪರ್ಕದಲ್ಲಿದ್ದವರ CDR ಕಲೆ ಹಾಕಿದ್ದ ವೇಳೆಯೇ ಕಿರಣ್​ ಮೊಬೈಲ್ ಆನ್​ ಆಗಿತ್ತು. ನಂತರ ಪೊಲೀಸರು ಕಿರಣ್​ ಮೊಬೈಲ್ ಸಿಗ್ನಲ್ ಎಲ್ಲಿಯದ್ದು ಎಂದು ನೋಡಿದಾಗ ಮಲೆ ಮಹದೇಶ್ವರ ಬೆಟ್ಟದಲ್ಲಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರು ಚಾಮರಾಜನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಸಹಾಯದೊಂದಿಗೆ ಆರೋಪಿ ಕಿರಣ್​ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Mon, 6 November 23