ಕ್ರಿಕೆಟ್​​ ವಿಚಾರಕ್ಕೆ ಶುರುವಾದ ಗಲಾಟೆ ಸಾವಿನಲ್ಲಿ ಅಂತ್ಯ: ನಡೆದಿದ್ದು ಅಪಘಾತವೋ? ಕೊಲೆಯೋ?

ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಕ್ರಿಕೆಟ್ ವಿಚಾರಕ್ಕೆ ಆರಂಭವಾದ ಗಲಾಟೆ ಯುವಕನ ಸಾವಿನಲ್ಲಿ ಅಂತ್ಯವಾಗಿದೆ. ಮದ್ಯದ ನಶೆಯಲ್ಲಿ ಇಬ್ಬರ ನಡುವೆ ಕಿರಿಕ್ ನಡೆದು, ಚಲಿಸುತ್ತಿದ್ದ ಕಾರಿನ ವಿಂಡೋ ಹಿಡಿದು ಯುವಕ ನೇತಾಡುತ್ತಿದ್ದ. ಈ ವೇಳೆ ಮತ್ತೋರ್ವ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಪರಿಣಾಮ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದರೆ ಮತ್ತೊಬ್ಬ ಆಸ್ಪತ್ರೆ ಸೇರಿದ್ದಾನೆ. ಮೃತ ಯುವಕನ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿದ್ದು, ತನಿಖೆ ಮುಂದುವರಿದಿದೆ.

ಕ್ರಿಕೆಟ್​​ ವಿಚಾರಕ್ಕೆ ಶುರುವಾದ ಗಲಾಟೆ ಸಾವಿನಲ್ಲಿ ಅಂತ್ಯ: ನಡೆದಿದ್ದು ಅಪಘಾತವೋ? ಕೊಲೆಯೋ?
ಮೃತ ಯುವಕ ಮತ್ತು ಅಪಘಾತವಾದ ಕಾರು
Edited By:

Updated on: Jan 26, 2026 | 5:47 PM

ಆನೇಕಲ್​​, ಜನವರಿ 26: ಕ್ರಿಕೆಟ್​​ ವಿಚಾರಕ್ಕೆ ಶುರುವಾದ ಗಲಾಟೆ ಯುವಕನೋರ್ವನ ಸಾವಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ. ಹೆಬ್ಬಗೋಡಿ ನಿವಾಸಿ ಪ್ರಶಾಂತ್(28) ಮೃತ ದುರ್ದೈವಿಯಾಗಿದ್ದಾನೆ. ಮದ್ಯದ ನಶೆಯಲ್ಲಿ ಇಬ್ಬರು ಯುವಕರ ನಡುವೆ ಕಿರಿಕ್​​ ಆಗಿದೆ ಎನ್ನಲಾಗಿದ್ದು, ಪ್ರಶಾಂತ್​​ ಮತ್ತು ರೋಷನ್​​ ಹೆಗ್ಡೆ ಎಂಬವರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ರೋಷನ್​​ ಕಾರು ಹತ್ತಿ ಹೊರಟರೂ ಪ್ರಶಾಂತ್​​ ಆತನ ಕಾರಿನ ಫೂಟ್​​ ಬೋರ್ಡ್​​ ಮೇಲೆ ಹತ್ತಿ ಕಿರಿಕ್​​ ಮುಂದುವರಿಸಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ರೊಚ್ಚಿಗೆದ್ದ ರೋಷನ್​ ಅಡ್ಡಾದಿಟ್ಟಿ ಕಾರು ಚಾಲನೆ ಮಾಡಿದ್ದು, ನಿಯಂತ್ರಣ ತಪ್ಪಿದ ಕಾರು ಗೋಡೆಗೆ ಉಜ್ಜಿ ಬಳಿಕ ಮರಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಪ್ರಶಾಂತ್​​​​ ಮೃತಪಟ್ಟಿದ್ದರೆ, ರೋಷನ್​​ಗೆ ಗಾಯಗಳಾಗಿವೆ.

ಇನ್ನು ಅಪಘಾತದ ವೇಳೆ ಗಂಭೀರ ಗಾಯಗೊಂಡಿದ್ದ ಪ್ರಶಾಂತ್​​ ಸ್ಥಳದಲ್ಲೇ ಮೃತಪಟ್ಟಿದ್ದರೆ, ರೋಷನ್​​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಪಘಾತದ ಕೊನೆಯ ಕ್ಷಣಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾರು ನಿಲ್ಲಿಸುವಂತೆ ಪ್ರಶಾಂತ್​​ ಹೇಳಿದ್ದರೂ ರೋಷನ್​​ ವೇಗವಾಗಿ ಕಾರು ಚಾಲನೆ ಮಾಡಿದ್ದಾನೆ. ಅಪಘಾತ ನಡೆಯುವ ವೇಳೆ ಪ್ರಶಾಂತ್​​ ಕಾರಿನ ಎಡಭಾಗದ ಕಿಡಕಿ ಹಿಡಿದು ನೇತಾಡುತ್ತಿದ್ದ. ಹೀಗಾಗಿ ಮರ ಮತ್ತು ಕಾಂಪೌಂಡ್​ ಗೋಡೆಯ ನಡುವೆ ಸಿಲುಕಿದ್ದ ಪ್ರಶಾಂತ್​​ ತಲೆಗೆ ಗಂಭೀರ ಗಾಯವಾಗಿತ್ತು ಎನ್ನಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ? ಯುವತಿ ಕುಟುಂಬಸ್ಥರಿಂದ ಗಂಭೀರ ಆರೋಪ

ಮಗ ಪ್ರಶಾಂತ್​​ ಸಾವಿನಿಂದಾಗಿ ತಾಯಿ ಕಂಗಾಲಾಗಿದ್ದು, ಇದು ಅಪಘಾತದ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಕ್ರಿಕೆಟ್ ಬಗ್ಗೆ ಮಗ ಪ್ರಶಾಂತ್ ಹುಚ್ಚು ಪ್ರೀತಿ ಹೊಂದಿದ್ದ. ಕಮ್ಮಸಂದ್ರದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್​​ನಲ್ಲಿ ಪ್ರಶಾಂತ್ ಆಟವಾಡಿದ್ದ ಕ್ರಿಕೆಟ್ ತಂಡ ಸೋತಿತ್ತು. ಈ ವೇಳೆ ಅಲ್ಲಿದ್ದ ರೋಷನ್ ಮತ್ತು ಪ್ರಶಾಂತ್ ನಡುವೆ ಕಿರಿಕ್ ಆಗಿತ್ತು. ಆದಾದ ಬಳಿಕ ಮನೆಗೆ ಬಂದಿದ್ದ ಪ್ರಶಾಂತ್, ಕ್ರಿಕೆಟ್ ಟೂರ್ನಮೆಂಟ್ ಸೋತಿರೋದಾಗಿ ಬೇಸರದಿಂದ ಹೇಳಿಕೊಂಡಿದ್ದ. ನಿನ್ನೆ ಕಮ್ಮಸಂದ್ರದ ಮೈದಾನಕ್ಕೆ ಹೋಗಿದ್ದ ವೇಳೆ ಮತ್ತೆ ಪ್ರಶಾಂತ್ ಮತ್ತು ರೋಷನ್ ನಡುವೆ ಗಲಾಟೆ ಆಗಿದೆ. ಗಲಾಟೆ ಬಳಿಕ ಕಾರಿನಲ್ಲಿ ತಪ್ಪಿಸಿಕೊಂಡು ಹೋಗಲು ರೋಷನ್ ಯತ್ನಿಸಿದ್ದು, ಕಾರು ನಿಲ್ಲಿಸಿದ್ದರೆ ಪ್ರಶಾಂತ್ ಬದುಕುಳಿಯುತ್ತಿದ್ದ. ಹೀಗಾಗಿ ಕೊಲ್ಲುವ ಉದ್ದೇಶದಿಂದಲೇ ಅಪಘಾತ ಮಾಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಿದಾರೆ. ಮೃತ ಪ್ರಶಾಂತ್ ತಾಯಿ ನೀಡಿರುವ ದೂರಿನ ಅನ್ವಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:40 pm, Mon, 26 January 26