ಹಾಸನ: ನಿರ್ಮಾಣ ಹಂತದಲ್ಲಿದ್ದ ದೇವರ ವಿಗ್ರಹಗಳ ಮೇಲೆ ದಾಳಿ ಮಾಡಿ ಕಿಡಿಗೇಡಿಗಳು ವಿರೂಪಗೊಳಿಸಿರುವಂತಹ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮಾಲೇಕಲ್ಲು ಗ್ರಾಮದಲ್ಲಿ ನಡೆದಿದೆ. ಐತಿಹಾಸಿಕ ಮಾಲೇಕಲ್ಲು ತಿರುಪತಿ ಬೆಟ್ಟದ ಬಳಿ, ನಿರ್ಮಾಣ ಹಂತದಲ್ಲಿರುವ ದೇವರ ವಿಗ್ರಹಗಳನ್ನು ದುಷ್ಕರ್ಮಿಗಳು ನಿನ್ನೆ ಸಂಜೆ ದಾಳಿ ವಿರೂಪಗೊಳಿಸಿದ್ದಾರೆ. ಬೆಟ್ಟದ ಈಜುಕೊಳ ಹಿಂಭಾಗ, ಶ್ರೀನಿವಾಸ ಕಲ್ಯಾಣ ಮ್ಯೂಸಿಯಂ ನಿರ್ಮಾಣಕ್ಕೆಂದು ನಿರ್ಮಾಣ ಹಂತದಲ್ಲಿದ್ದ ದೇವರ ವಿಗ್ರಹಗಳನ್ನ ಭಗ್ನಗೊಳಿಸಲಾಗಿದೆ. ವಿಗ್ರಹಗಳ ಕೈ, ಕಾಲು ಸೇರಿದಂತೆ ಹಲವು ಭಾಗಗಳನ್ನು ವಿರೂಪಗೊಳಿಸಿ ಪರಾರಿಯಾಗಿದ್ದು, ಸುದ್ದಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ, ಡಿವೈಎಸ್ಪಿ ಅಶೋಕ್, ಗ್ರಾಮಾಂತರ ವೃತ್ತ ಸಿಪಿಐ ವಸಂತ್.ಕೆ.ಎಂ. ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅರಸೀಕೆರೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಇದನ್ನೂ ಓದಿ: Ajwain health benefits: ಅಜೀರ್ಣಕ್ಕೆ ಪ್ರಕೃತಿ ನೀಡಿದ ವರದಾನವೇ ಒಂದು ಚಮಚ ಓಮು ಕಾಳಿನ ಚೂರ್ಣ!
ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಶನೈಶ್ಚರಸ್ವಾಮಿ ಗುಡ್ಡಪ್ಪ ವಶ
ಮೈಸೂರು: ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಶನೇಶ್ವರ ಸ್ವಾಮಿ ಗುಡ್ಡಪ್ಪ ವೆಂಕಟನಾಯಕ (27)ನನ್ನು ವಶಕ್ಕೆ ಪಡೆದಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಿಂದ ದೇವಸ್ಥಾನದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಗಾಂಜಾ ವಶಕ್ಕೆ ಪಡೆಯಲಾಗಿದೆ. ನಂಜನಗೂಡು ತಾಲೂಕಿನ ನೆಲ್ಲಿತಾಳಪುರ ಗ್ರಾಮದ ದೇಗುಲವಾದ ಸತ್ಯ ಶನೇಶ್ವರ ಸ್ವಾಮಿ ದೇವಸ್ಥಾನದ ಗುಡ್ಡಪ್ಪ. ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಂಗ್ರಹ ಆರೋಪ ಮಾಡಲಾಗಿದೆ. 105 ಗ್ರಾಂ ಒಣ ಗಾಂಜಾ ವಶಕ್ಕೆ ಪಡದು ವೆಂಕಟನಾಯಕ ವಿರುದ್ದ ಎಸ್.ಡಿ.ಪಿ.ಎಸ್.ಕಾಯ್ದೆ ಅಡಿ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಾವಿಯಲ್ಲಿ ಮುಳುಗಿ ಬಾಲಕಿಯರು ಸಾವು
ರಾಯಚೂರು: ಬಾವಿಯಲ್ಲಿ ಈಜಲು ಹೋಗಿ ಬಾಲಕಿಯರಿಬ್ಬರು ಸಾವನ್ನಪ್ಪಿದ ಘಟನೆ ರಾಯಚೂರು ತಾಲೂಕಿನ ಯರಗೇರಾ ಗ್ರಾಮದಲ್ಲಿ ನಡೆದಿದೆ. ತನಾಜ್ (16) ಹಾಗೂ ಮುಸ್ಕಾನ್ (18) ಸಾವನ್ನಪ್ಪಿದ ದುರ್ದೈವಿಗಳು. ರಾಯಚೂರು ನಗರದ ನಿವಾಸಿಗಳಾಗಿರುವ ಇವರು ನಿನ್ನೆ ಯರಗೇರಾ ಗ್ರಾಮದ ಅತ್ತೆಮನೆಗೆ ಹೋಗಿದ್ದರು. ಅದರಂತೆ ಸ್ನೇಹಿತರ ಜೊತೆ ಈಜಲು ಹೋಗಿದ್ದಾರೆ. ಈ ವೇಳೆ ಈಜು ಬಾರದೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.