ಬೆಂಗಳೂರು ಅ.16: ಮಚ್ಚಿನಿಂದ ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ (Attack) ಮಾಡಿರುವ ಘಟನೆ ಸುಬ್ರಹ್ಮಣ್ಯನಗರದ ಗಾಯತ್ರಿ ನಗರದಲ್ಲಿ ತಡರಾತ್ರಿ ನಡೆದಿದೆ. ಅಭಿಗೌಡ ಆ್ಯಂಡ್ ಗ್ಯಾಂಗ್ ಹಲ್ಲೆ ಮಾಡಿದೆ. ಗಾಯತ್ರಿ ನಗರದಲ್ಲಿ ಗಣೇಶ ಕೂಡಿಸುವ ವಿಚಾರಕ್ಕೆ ಅಭಿಗೌಡ ಮತ್ತು ರಾಕೇಶ್ ಎಂಬಾತನ ನಡುವೆ ಬಹಳ ದಿನಗಳಿಂದ ವೈಷಮ್ಯವಿದೆ. ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿರುತ್ತದೆ.
ನಿನ್ನೆ (ಅ.15) ರಾಕೇಶ್ ಮನೆಗೆ ನುಗ್ಗಿ ಹಲ್ಲೆ ನಡೆಸಲು ಅಭಿಗೌಡ ಪ್ಲಾನ್ ಮಾಡಿದ್ದನು. ಆದರೆ ಅಭಿಗೌಡ ರಾಕೇಶ್ ಮನೆ ಬದಲು ಆತನ ಪಕ್ಕದ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಇದರಿಂದ ಮಹಿಳೆಯ ಕೈಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿದು ವಾಹನ ಚಲಾಯಿಸಿದ್ದಲ್ಲದೇ, ತಪಾಸಣೆಗೆ ಬಂದ ಮಲ್ಲೇಶ್ವರಂ ಸಂಚಾರ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ ಯುವಕರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಲಾಗಿದೆ. ಶ್ರೀರಾಮಪುರ ಮೆಟ್ರೋ ನಿಲ್ದಾಣದ ಬಳಿ ತಡರಾತ್ರಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಕುಡಿದು ಕಾರು ಚಲಾಯಿಸುತ್ತಿದ್ದ ಯುವಕರನ್ನು ತಡೆದಿದ್ದಾರೆ.
ಇದನ್ನೂ ಓದಿ: ರಾಮನಗರ: ಮಳೆಯಲ್ಲೇ ಬಿತ್ತು ರೌಡಿಶೀಟರ್ ಹೆಣ! ಅಕ್ರಮ ಸಂಬಂಧಕ್ಕಾಗಿಯೇ ನಡೀತಾ ಹತ್ಯೆ?
ತಪಾಸಣೆ ವೇಳೆ ಯುವಕರಿದ್ದ ಕಾರಿನಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ಪ್ರಶ್ನಿಸುತ್ತಿದ್ದಂತೆ ಯುವಕರು ಮದ್ಯದ ಬಾಟಲಿಗಳನ್ನು ಕಾರಿನಿಂದ ಹೊರಗೆ ಎಸೆದು ಗಲಾಟೆ ಮಾಡಿದ್ದಾರೆ. ಅಲ್ಲದೆ ಪೊಲೀಸರನ್ನು ತಳ್ಳಿ ಕಾರು ಸಮೇತ ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಯುವಕರನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಅಡ್ಡಹಾಕಿದ್ದಾರೆ. ನಂತರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ