ಬಳ್ಳಾರಿ: ಗುತ್ತಿಗನೂರು ಗ್ರಾಮದಲ್ಲಿ ಹೊಟೇಲ್‌ನಲ್ಲಿ ದಲಿತರಿಗೆ ಊಟ ನೀಡಲು ನಿರಾಕರಣೆ, ಅಸ್ಪೃಶ್ಯತೆ ವಿಡಿಯೋ ವೈರಲ್
ಧಾರವಾಡದಲ್ಲಿ ಹೋಟೆಲ್, ಕಟಿಂಗ್, ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರ್ಬಂಧಿಸಿದ ಸುದ್ದಿಯಾಗಿತ್ತು. ಇತ್ತೀಚೆಗೆ ಬಳಿಕ ದಲಿತ ಯುವಕ ಗ್ರಾಮಕ್ಕೆ ಪ್ರವೇಶಿಸಿದಕ್ಕೆ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಗೊಲ್ಲರ ಬೀದಿಯಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ, ಬಳ್ಳಾರಿಯಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದು ಬಹಿರಂಗವಾಗಿದೆ. ಹೊಟೇಲ್‌ನಲ್ಲಿ ದಲಿತ ಯುವಕರಿಗೆ ಊಟ ನೀಡಲು ಮಹಿಳೆ ನಿರಾಕರಿಸಿದ ಘಟನೆ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ನಡೆದಿದೆ.
ಬಳ್ಳಾರಿ, ಜ.19: ಧಾರವಾಡದಲ್ಲಿ ಹೋಟೆಲ್, ಕಟಿಂಗ್ ಶಾಪ್ ಹಾಗೂ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಸುದ್ದಿಯಾದ ಬೆನ್ನಲ್ಲೇ ಬಳ್ಳಾರಿ (Ballari) ಅಸ್ಪೃಶ್ಯತೆ (Untouchability) ಆಚರಣೆ ಪ್ರಕರಣ ಬೆಳಕಿಗೆ ಬಂದಿದೆ. ಊಟಕ್ಕೆಂದು ಹೊಟೇಲ್ಗೆ ಬಂದ ದಲಿತ (Dalit) ಯುವಕರಿಗೆ “ಹೊಟೇಲ್ ಮುಚ್ಚುತ್ತೇನೆ, ಆದರೆ, ನಿಮಗೆ ಊಟ ಕೊಡಲ್ಲ” ಎಂದು ಮಹಿಳೆಯೊಬ್ಬಳು ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಹೊಟೇಲ್‌ನಲ್ಲಿ ಆಹಾರ ನೀಡಲು ಮಹಿಳೆ ನಿರಾಕರಣೆ ಮಾಡಿದ್ದಾರೆ. ಅಸ್ಪೃಶ್ಯತೆ ವಿರುದ್ಧ ಗರಂ ಆದ ಯುವಕರು ಹೊಟೇಲ್‌ನಲ್ಲಿ ಆಹಾರ ನೀಡದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ಪೊಲೀಸರ ಜೊತೆ ದೇವಾಲಯದೊಳಕ್ಕೆ ಪ್ರವೇಶಿಸಿದ ದಲಿತರು
ಹೊಟೇಲ್ ಬಾಗಿಲ್ ಬಂದ್ ಮಾಡುತ್ತೇನೆ. ಆದರೆ ಊಟ ಕೊಡುವುದಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ದಲಿತರಿಗೆ ನಿಂದಿಸಿದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ವಿಚಾರ ತಿಳಿದ ಕುರುಗೋಡು ತಹಶೀಲ್ದಾರ್ ರಾಘವೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರ ಬೀದಿಯಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಗೊಲ್ಲರ ಬೀದಿಗೆ ಕೆಲಸಕ್ಕೆ ಹೋಗಿದ್ದ ದಲಿತ ಯುವಕ ಮಾರುತಿ ಎಂಬವರಿಗೆ ಹಿಗ್ಗಾಮುಗ್ಗ ಥಳಿಸಲಾಗಿತ್ತು. ಹಲ್ಲೆಗೊಳಗಾದ ಯುವಕನಿಗೆ ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕೃತ್ಯ ಖಂಡಿಸಿ ದಲಿತ ಸಂಘಟನೆಗಳು ಗ್ರಾಮಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:02 am, Fri, 19 January 24