Bangalore: ಪಟಾಕಿ ಮೈಮೇಲೆ ಎಸೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಮೂಳೆ ಮುರಿಯುವಂತೆ ಥಳಿಸಿದ ಗ್ಯಾಂಗ್
ಪಟಾಕಿ ಹಚ್ಚಿ ಮೈ ಮೇಲೆ ಎಸೆದಿದ್ದಲ್ಲದೆ ಅದನ್ನು ಪ್ರಶ್ನಿಸಿದ್ದಕ್ಕೆ ಮೂಳೆ ಮುರಿಯುವಂತೆ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂವರನ್ನು ಬಂಧಿಸಿದ ಪೊಲೀಸರು.
ಬೆಂಗಳೂರು: ದೀಪಾವಳಿಯಂದು ಪಟಾಕಿ ಸಿಡಿಸುವಾಗ ಹುಚ್ಚಾಟ ಮೆರೆಯುವುದು ಸಾಮಾನ್ಯ. ಆದರೆ ಇಲ್ಲೊಂದು ಗ್ಯಾಂಗ್ ರಸ್ತೆಯಲ್ಲಿ ಓಡಾಡುವವರ ಮೈ ಮೇಲೆ ಪಟಾಕಿ ಹಚ್ಚಿ ಎಸೆದು ವಿಕೃತ ಆನಂದವನ್ನು ಪಡೆಯುತ್ತಿದ್ದಾರೆ. ಅದೇ ರೀತಿ ಕಿಡಿಗೇಡಿಗಳು ವ್ಯಕ್ತಿಯೊಬ್ಬನ ಮೇಲೆ ಪಟಾಕಿ ಹಚ್ಚಿ ಎಸೆದಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಕುತ್ತಿಗೆಯ ಮೂಳೆ ಮುರಿಯುವಂತೆ ಥಳಿಸಿದ ಅಮಾನವೀಯ ಘಟನೆಯೊಂದು ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ನೀಡಿದ ದೂರಿನ ಮೇರೆಗೆ ನಗರದ ಜ್ಞಾನಭಾರತಿ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮಾರುತಿ ನಗರದಲ್ಲಿ ತಡರಾತ್ರಿ ಒಂದು ಗ್ಯಾಂಗ್ ಪಟಾಕಿ ಸಿಡಿಸುತ್ತಿದ್ದರು. ಈ ಗ್ಯಾಂಗ್ನಲ್ಲಿ ಏಳರಿಂದ ಎಂಟು ಮಂದಿ ಇದ್ದರು. ಯಾರಿಗೂ ತೊಂದರೆ ನೀಡದೆ ಪಟಾಕಿ ಸಿಡಿಸಿದ್ದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈ ಗ್ಯಾಂಗ್ ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ಧರ ಮೇಲೆ ಪಟಾಕಿ ಹಚ್ಚಿ ಎಸೆದು ಪುಂಡಾಟ, ವಿಕೃತಾನಂದ ಪಡೆಯುತ್ತಿದ್ದರು. ಅದೇ ರೀತಿ ಕಿಡಿಗೇಡಿಗಳ ಪುಂಡಾಟಕ್ಕೆ ಒಳಗಾದ ವ್ಯಕ್ತಿಯೊಬ್ಬರು ಕಿಡಿಗೇಡಿಗಳನ್ನು ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ಥಳಿಸುವುದೇ? ಇದೇ ಆತನಿಗೆ ಮುಳವಾಯ್ತೇ?
ಕಿಡಿಗೇಡಿಗಳು ಪಟಾಕಿ ಹಚ್ಚಿ ಮಹಾದೇವಸ್ವಾಮಿ ಎಂಬವರ ಮೈಮೇಲೆ ಎಸೆದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಿಡಿಗೇಡಿಗಳು ಆಕ್ರೋಶಗೊಂಡಿದ್ದಾರೆ. ಅದರಂತೆ ಮಹಾದೇವಸ್ವಾಮಿ ಅವರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಘಟನೆಯಲ್ಲಿ ಮಹಾದೇವಸ್ವಾಮಿ ಅವರ ಕುತ್ತಿಗೆಯ ಮೂಳೆ ಮುರಿದಿದೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾದ ಮಹಾದೇವಸ್ವಾಮಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 am, Wed, 26 October 22