ಕೊಲೆಯಾಗಿ ಹೋದ ಬೆಂಗಳೂರಿನಿಂದ ತನ್ನೂರಿಗೆ ಮರಳಿದ ಕೆ.ಆರ್.ಟಿ.ಸಿ ಬಸ್ ಚಾಲಕ
ಯಾರೊಂದಿಗು ದ್ವೇಷ ಕಟ್ಟಿಕೊಳ್ಳದವ, ಯಾರೊಂದಿಗು ಹಣಕಾಸಿನ ವ್ಯವಹಾರವನ್ನು ಕೂಡ ಹೊಂದಿರದ ಕೆ.ಆರ್.ಟಿ.ಸಿ ಬಸ್ ಚಾಲಕನ ಸಾವಿನ ಕಾರಣ ಮಾತ್ರ ನಿಗೂಢ
ಯಾರೊಂದಿಗು ದ್ವೇಷ ಕಟ್ಟಿಕೊಳ್ಳದವ, ಯಾರೊಂದಿಗು ಹಣಕಾಸಿನ ವ್ಯವಹಾರವನ್ನು ಕೂಡ ಹೊಂದಿರದ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಿಧನೂರು ಗ್ರಾಮದ ಕೆ.ಆರ್.ಟಿ.ಸಿ ಬಸ್ ಚಾಲಕ ಬರ್ಬರವಾಗಿ ಕೊಲೆಯಾಗಿದ್ದಾನೆ. ಶಿವಶರಣಪ್ಪ ಹೇರೂರು (40) ಕೆ.ಆರ್.ಟಿ.ಸಿ ಬಸ್ ಚಾಲಕನಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಸಸ್ಪೆಂಡ್ ಆಗಿದ್ದನಂತೆ. ಈ ಸಂಬಂಧ ಬೆಂಗಳೂರಿಗೆ ಹೋಗಿ ಅಮಾನತ್ತು ಆದೇಶ ರದ್ದುಗೊಳಿಸಿಕೊಂಡು ಅ.12 ರಂದು ಗ್ರಾಮಕ್ಕೆ ಬಂದಿದ್ದನಂತೆ. ಬೆಂಗಳೂರಿನಿಂದ ಮಧ್ಯಾಹ್ನ ತನ್ನೂರಿಗೆ ಬಂದಿದ್ದ ಶಿವಶರಣಪ್ಪನನ್ನು ಗ್ರಾಮದ ಬಲಭೀಮ ಎಂಬುವ ವ್ಯಕ್ತಿ ತನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದನಂತೆ. ಸಂಜೆ ಮನೆಯಿಂದ ಹೋಗಿದ್ದ ಶಿವಶರಣಪ್ಪ, ಅಕ್ಟೋಬರ್ 13 ರಂದು ಮುಂಜಾನೆ ಶವವಾಗಿ ಪತ್ತೆಯಾಗಿದ್ದನು.
ಅಷ್ಟಕ್ಕಾದರೂ ಶಿವಶರಣಪ್ಪ ಸಾವನ್ನಪ್ಪಿದ್ದು ಹೇಗೆ?
ಅ.12 ರಂದು ಆತನನ್ನು ಕರೆದುಕೊಂಡು ಹೋಗಿದ್ದ ಕೆಲವರು ಪಾರ್ಟಿ ಮಾಡಿ, ಚೆನ್ನಾಗಿ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡ ರೇವೂರು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆ ನಡೆದು ಬರೋಬ್ಬರಿ 12 ದಿನಗಳು ಕಳೆದರೂ ಕೊಲೆಯನ್ನು ಯಾವ ಕಾರಣಕ್ಕಾಗಿ ಮಾಡಿದ್ದಾರೆ ಅನ್ನೋದೆ ನಿಗೂಢವಾಗಿದೆ. ಶಿವಶರಣಪ್ಪನನ್ನು ಒಬ್ಬರೇ ಕೊಲೆ ಮಾಡಲು ಸಾಧ್ಯವಿಲ್ಲಾ, 3-4 ಜನರು ಸೇರಿಕೊಂಡೆ ಕೊಲೆ ಮಾಡಿದ್ದಾರೆ ಅಂತಿದ್ದಾರೆ ಕುಟುಂಬದವರು. ಮೊದಲು ಮಾರಕಾಸ್ತ್ರದಿಂದ ಅನೇಕ ಕಡೆ ಇರದಿರುವ ದುಷ್ಕರ್ಮಿಗಳು, ನಂತರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಕುಟುಂಬದವರು ಹೇಳುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶರಣಪ್ಪನನ್ನು ಕರೆದುಕೊಂಡು ಹೋಗಿದ್ದ ಭಲಬೀಮ ಸೇರಿದಂತೆ ಅನೇಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಕೊಲೆಗೆ ಅಸಲಿ ಕಾರಣವೇನು ಅನ್ನೋದು ಗೊತ್ತಾಗುತ್ತಿಲ್ಲಾ. ಜೊತೆಗೆ ಕೊಲೆಯನ್ನು ಯಾರೆಲ್ಲಾ ಸೇರಿ ಮಾಡಿದ್ದಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಶಿವಶರಣಪ್ಪ ಕೊಲೆಯಾಗಿ ಎರಡುವಾರ ಕಳೆದರೂ ಕೂಡ ಇವರೇ ಕೊಲೆ ಮಾಡಿದ್ದಾರೆ, ಇದೇ ಕಾರಣಕ್ಕೆ ಕೊಲೆ ನಡೆದಿದೆ ಅನ್ನೋದು ಗೊತ್ತಾಗುತ್ತಿಲ್ಲಾ. ಪೊಲೀಸರಿಗೆ ಸರ್ಕಾರಿ ಬಸ್ ಚಾಲಕನ ಕೊಲೆ ಪ್ರಕರಣ ತೀರ್ವ ಕಗ್ಗಂಟಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವರದಿ- ಸಂಜಯ್.ಟಿವಿ9 ಕಲಬುರಗಿ
Published On - 10:13 pm, Tue, 25 October 22