ದೀಪಾವಳಿ ದಿನದಂದೇ ಮನೆಗೆ ಆವರಿಸಿತು ಕತ್ತಲು, ಕೊಲೆಯಾಗಿ ಹೋದ ಸಾಫ್ಟ್ವೇರ್ ಎಂಜಿನಿಯರ್

ತಂದೆ-ತಾಯಿಯೊಂದಿಗೆ ಊಟ ಮಾಡಿ, ತುರ್ತು ಕೆಲಸವೆಂದು ಮನೆಯಿಂದ ಹೋದ ಮಗ ಮರಳಿ ಬಂದಿದ್ದು ಶವವಾಗಿ

ದೀಪಾವಳಿ ದಿನದಂದೇ ಮನೆಗೆ ಆವರಿಸಿತು ಕತ್ತಲು, ಕೊಲೆಯಾಗಿ ಹೋದ ಸಾಫ್ಟ್ವೇರ್ ಎಂಜಿನಿಯರ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 25, 2022 | 8:01 PM

ಬೆಳಕಿನ ಹಬ್ಬ ದೀಪಾವಳಿ ದಿನದಂದು ಎಲ್ಲರ ಮನೆಯಲ್ಲಿ ಬೆಳಕು ಆವರಿಸಿದರೆ, ಈ ಮನೆಯಲ್ಲಿ ಕತ್ತಲು ಆವರಿಸಿದೆ. ಮನೆಯ ಆಧಾರ ಸ್ತಂಭದಂತಿದ್ದ, ಮನೆಗೆ ಬೆಳಕಾಗಿ ಇದ್ದ ಮಗನನ್ನು ಕಳೆದುಕೊಂಡ ತಾಯಿ ರೋದನೆ ಹೇಳತೀರದು. ಶಿವಮೊಗ್ಗ (Shivamogga) ಗಾಂಧಿ ನಗರದ ನಿವಾಸಿ ವಿಜಯ್ ಹಬ್ಬದ ದಿನದಂದು ಕೆಲಸಕ್ಕೆ ಹೋದವ ಮನೆಗೆ ಮರಳಿ ಬಂದಿದ್ದು ಶವವಾಗಿ. ವಿಜಯ್ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದನು. ಆದರೆ ಕಳೆದ 3 ವರ್ಷದ ಹಿಂದೆ ಐಟಿ ಕಂಪನಿಯಲ್ಲಿ ಉದ್ಯೋಗ ತೊರೆದು ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತಿದ್ದನು. ನಿನ್ನೆ (ಅ.24) ರಾತ್ರಿ ಎಂದಿನಂತೆ ಕೆಲಸ ಮುಗಿಸಿ 10 ಗಂಟೆಗೆ ಮನೆಗೆ ಬಂದಿದ್ದನು. ಆದರೆ ಆತನ ತಂದೆ ತಾಯಿ ರಾತ್ರಿ ಚಲನಚಿತ್ರ ವೀಕ್ಷಣೆಗೆಂದು ಹೋಗಿದ್ದರಿಂದ ಊಟಕ್ಕಾಗಿ ತಂದೆ ತಾಯಿಗಾಗಿ ಕಾಯ್ದಿದ್ದಾನೆ.

ಸ್ವಲ್ಪ ಹೊತ್ತಿನ ನಂತರ ತಂದೆ ತಾಯಿ ಮನೆಗೆ ಬಂದ ಬಳಿಕ, ತಡರಾತ್ರಿ ಮೂವರೂ ಸೇರಿ ಊಟ ಮಾಡಿದ್ದಾರೆ. ಊಟ ಮುಗಿದ ಕೆಲವೇ ಹೊತ್ತಿನಲ್ಲಿ ವಿಜಯ್​ಗೆ ಫೋನ್ ಬಂದಿದೆ. ಆಗ ವಿಜಯ ತನ್ನ ತಂದೆ ವೆಂಕಟಾಚಲ ಅವರ ಬಳಿ ಆಸ್ಪತ್ರೆಯಿಂದ ಕರೆ ಬಂದಿದೆ ನನಗೆ ತುರ್ತು ಕೆಲಸ ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದಾನೆ. ಆದರೆ ಮನೆಯಿಂದ ತುಸು ದೂರದಲ್ಲೇ ವೆಂಕಟೇಶ್ವರ ನಗರದ ಎ.ಎನ್.ಕೆ ಮೊದಲನೇ ಅಡ್ಡ ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಯಾರೋ ದುಷ್ಕರ್ಮಿಗಳು ವಿಜಯ್​​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಅಷ್ಟಕ್ಕೂ ನಿನ್ನೆ ತಡರಾತ್ರಿ ಆಸ್ಪತ್ರೆಗೆ ಬರುವಂತೆ ವಿಜಯ್​ಗೆ ಆಸ್ಪತ್ರೆಯಿಂದ ಯಾರೂ ಕರೆ ಮಾಡಿರಲಿಲ್ಲವಂತೆ. ಹೀಗಿರುವಾಗ ತಡರಾತ್ರಿ ವಿಜಯ್​ಗೆ ಕರೆ ಮಾಡಿ ಮನೆಯಿಂದ ಹೊರಬರುವಂತೆ ಹೇಳಿದವರು ಯಾರು? ಮನೆಯಿಂದ ಸ್ವಲ್ಪ ದೂರದಲ್ಲೇ ಆತನಿಗೆ ಚಾಕುನಿಂದ ಇರಿದು ಕೊಂದವರು ಯಾರು? ವಿಜಯ್ ಯಾರ ಜೊತೆಯಾದರೂ ದ್ವೇಷ ಕಟ್ಟಿಕೊಂಡಿದ್ದನೇ? ಎಂಬ ಅನುಮಾನಗಳು ಉದ್ಭವವಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ವಿಜಯ್​ಗೆ ಮದವೆಯಾಗಿ ಏಳು ವರ್ಷವಾಗಿತ್ತು. ಆದರೆ ದಂಪತಿಗಳು ವಿಚ್ಚೇದನ ಪಡೆದಿದ್ದರು. ದಂಪತಿಗಳಿಗೆ ಒಂದು ಮಗು ಕೂಡ ಇದ್ದು, ಬೆಂಗಳೂರಿನಲ್ಲಿ ತಾಯಿ ಜೊತೆ ವಾಸವಾಗಿದೆ. ಪತ್ನಿ ಕಡೆಯವರೇನಾದರೂ ಕೊಲೆ ಮಾಡಿದ್ದಾರೆಯೇ? ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳು ವಿಜಯ್​ನನ್ನು ಮರ್ಡರ್ ಮಾಡಿ ಎಸ್ಕೇಪ್ ಆಗಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಆ ಇಬ್ಬರು ಹಂತಕರಿಗಾಗಿ ಜಯನಗರ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಖುದ್ದಾಗಿ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದಾರೆ. ಆದಷ್ಟು ಬೇಗ ಹಂತಕರನ್ನು ಬಂಧಿಸುವುದಾಗಿ ವಿಶ್ವಾಸ ನೀಡಿದ್ದಾರೆ.

ವರದಿ- ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ

Published On - 8:00 pm, Tue, 25 October 22