ಕೂಲಿ ಹಣ ನೀಡದಿದ್ದಕ್ಕೆ ಮಹಿಳೆಯ ಬರ್ಬರ ಹತ್ಯೆ; ಆರೋಪಿ ಅರೆಸ್ಟ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 25, 2024 | 4:38 PM

ಕೇವಲ ಇನ್ನೂರು ರೂಪಾಯಿಗಾಗಿ ಅಲ್ಲಿ ಜಗಳ ಆರಂಭವಾಗಿತ್ತು. ಸ್ವಲ್ಪ ಸಮಾಧಾನದಿಂದ ವರ್ತಿಸಿದ್ದರೆ, ಮೂರನೇಯವರ ಪ್ರವೇಶವಿಲ್ಲದಂತೆ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಆದ್ರೆ, ಕೋಪದ ಕೈಗೆ ಎರಡು ಕಡೆಯವರು ಬುದ್ದಿ ನೀಡಿದ್ದರು. ಪರಿಣಾಮ, ಗಲಾಟೆಯಲ್ಲಿ ಮಹಿಳೆಯೋರ್ವಳ ಕೊಲೆಯಾಗಿ ಹೋಗಿದೆ. ಇನ್ನೂರು ರೂಪಾಯಿಗಾಗಿ ಯುವಕನೋರ್ವ ಜೈಲಿಗೆ ಹೋದರೆ, ಮಹಿಳೆಯೋರ್ವಳ ಜೀವ ಕೂಡ ಹೋಗಿದೆ.

ಕೂಲಿ ಹಣ ನೀಡದಿದ್ದಕ್ಕೆ ಮಹಿಳೆಯ ಬರ್ಬರ ಹತ್ಯೆ; ಆರೋಪಿ ಅರೆಸ್ಟ್​
ಮೃತ ಮಹಿಳೆ
Follow us on

ಕೊಪ್ಪಳ, ಜೂ.25: ಬಾಕಿ 200 ರೂಪಾಯಿ ಕೂಲಿ ಹಣ ಕೊಡದಿದ್ದಕ್ಕೆ ಬಡಿಗೆಯಿಂದ ಹೊಡೆದು ಮಹಿಳೆಯನ್ನ ಬರ್ಬರ ಹತ್ಯೆ ಮಾಡಿದ ಘಟನೆ ಕೊಪ್ಪಳ (Koppal) ತಾಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ನಡೆದಿದೆ. ರೇಣುಕಮ್ಮ ಸಿಳ್ಳಿಕ್ಯಾತರ್(57) ಕೊಲೆಯಾದ ಮಹಿಳೆ. ಆರೋಪಿ ನಾಗೇಶನಹಳ್ಳಿ ಗ್ರಾಮದ ಮಹೇಶ್ ಗೊಲ್ಲರ, ಕಳೆದ ರಾತ್ರಿ ಎಂಟು ಮೂವತ್ತರ ಸುಮಾರಿಗೆ ಮೃತಳ ಮನೆಗೆ ಹೋಗಿ ಬಾಕಿ ಹಣಕ್ಕಾಗಿ ಗಲಾಟೆ ಮಾಡಿದ್ದಾನೆ. ಈ ವೇಳೆ ದುರ್ಘಟನೆ ನಡೆದಿದೆ.

ಇನ್ನೂರು ರೂಪಾಯಿಗಾಗಿ ಜಗಳ, ಮಹಿಳೆಯ ಕೊಲೆ

ರೇಣುಕಮ್ಮಳ ಪತಿ ಹಳ್ಳಪ್ಪ, ಕಟ್ಟಡ ನಿರ್ಮಾಣದ ಮಿಸ್ತ್ರಿ ಕೆಲಸ ಮಾಡುತ್ತಾನೆ. ಈತ ಕೆಲ ದಿನಗಳ ಹಿಂದೆ ಗ್ರಾಮದ ಮಹೇಶ್​ ಗೊಲ್ಲರ ಸೇರಿದಂತೆ ಕೆಲ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿದ್ದ. ಅಲ್ಲಿ ಶಾಲೆಯೊಂದರಲ್ಲಿ ಇದ್ದ ಕೆಲಸವನ್ನು ನಾಲ್ಕು ದಿನಗಳ ಕಾಲ ಮಾಡಿ, ನಂತರ ಎಲ್ಲರೂ ಕೂಡ ಮರಳಿ ಗ್ರಾಮಕ್ಕೆ ಬಂದಿದ್ದರು. ಪ್ರತಿ ದಿನಕ್ಕೆ 650 ರೂಪಾಯಿಯಂತೆ ಕೂಲಿ ಮಾತನಾಡಲಾಗಿತ್ತು. ಹೀಗಾಗಿ ಕೂಲಿ ಕೆಲಸಕ್ಕೆ ಬಂದವರಿಗೆಲ್ಲ ಹಳ್ಳಪ್ಪ, ವಾರದ ಹಿಂದೆ ಪ್ರತಿಯೊಬ್ಬರಿಗೂ ತಲಾ ಎರಡು ಸಾವಿರದಾ ನಾಲ್ಕು ನೂರು ರೂಪಾಯಿ ನೀಡಿದ್ದ. ಇನ್ನು ಎರಡು ನೂರು ರೂಪಾಯಿ ಹಣವನ್ನು ನಾಲ್ಕೈದು ದಿನದಲ್ಲಿ ಕೊಡೋದಾಗಿ ಹೇಳಿದ್ದನಂತೆ. ಆದ್ರೆ, ಹಣ ಕೊಡದೇ ಇದ್ದಾಗ, ಹಳ್ಳಪ್ಪ ಮತ್ತು ಮಹೇಶ್​ನ ನಡುವೆ ಗಲಾಟೆ ಆರಂಭವಾಗಿತ್ತು.

ಇದನ್ನೂ ಓದಿ:50 ವರ್ಷದ ವಿವಾಹಿತನ ಜೊತೆ 19 ರ ಕಾಲೇಜು ವಿದ್ಯಾರ್ಥಿನಿ ನಾಪತ್ತೆ; ಆತ್ಮಹತ್ಯೆ ಶಂಕೆ

ಕಳೆದ ಮೂರ್ನಾಲ್ಕು ದಿನಗಳಿಂದ ಮಹೇಶ್, ತನಗೆ ಬರಬೇಕಿದ್ದ ಇನ್ನೂರು ರೂಪಾಯಿ ಹಣವನ್ನು ನೀಡುವಂತೆ ಹಳ್ಳಪ್ಪಗೆ ಕೇಳುತ್ತಿದ್ದನಂತೆ. ನಿನ್ನೆ ರಾತ್ರಿ ಮತ್ತೆ ಹಳ್ಳಪ್ಪನ ಮನೆಗೆ ಬಂದು ಹಣ ಕೊಡುವಂತೆ ಕೇಳಿದ್ದಾನೆ. ಆಗ ಹಳ್ಳಪ್ಪ ನಾಳೆ ಕೊಡ್ತೇನೆ ಎಂದು ಹೇಳಿದ್ದನಂತೆ. ಆದರೆ, ಮಹೇಶ್ ನನಗೆ ಹೇಗೆ ವಸೂಲಿ ಮಾಡಿಕೊಳ್ಳಬೇಕು ಎಂದು ಗೊತ್ತು,  ಚಪ್ಪಲಿಯಿಂದ ಹೊಡೆದು ನನಗೆ ಬರಬೇಕಿದ್ದ ಹಣ ವಸೂಲಿ ಮಾಡ್ತೇನೆ ಎಂದು ಹಳ್ಳಪ್ಪಗೆ ಹೇಳಿದ್ದನಂತೆ. ಆಗ ಆವೇಶದಲ್ಲಿ ಮಹೇಶ್, ಹಳ್ಳಪ್ಪನಿಗೆ ಚಪ್ಪಲಿಯಿಂದ ಹೊಡೆದಿದ್ದಾನೆ. ಇದನ್ನು ನೋಡಿದ ಹಳ್ಳಪ್ಪನ ಪತ್ನಿ ರೇಣುಕಮ್ಮ ಬಂದ್ದಿದ್ದಾಳೆ. ಆಕೆಗೆ ಕೂಡ ಮೇಹಶ್, ಬಡಿಗೆಯೊಂದರಿಂದ ಥಳಿಸಿ, ತನ್ನ ಮನೆಗೆ ಹೋಗಿದ್ದಾನೆ.

‘ಆದ್ರೆ ತಮಗೆ ಹೊಡೆದಿದ್ದರಿಂದ ಸಿಟ್ಟಾಗಿದ್ದ ಹಳ್ಳಪ್ಪ, ರೇಣುಕಮ್ಮ, ಮತ್ತೆ ಮಹೇಶ್ ಮನೆಗೆ ಹೋಗಿದ್ದಾರೆ. ಮೇಹಶ್ ನ ಹೆತ್ತವರಿಗೆ, ಮಹೇಶ್ ಬಗ್ಗೆ ದೂರು ಹೇಳಲು ಮುಂದಾಗಿದ್ದಾರೆ. ಇದರಿಂದ ಮತ್ತೆ ಸಿಟ್ಟಾದ ಮಹೇಶ್, ತನ್ನ ಮನೆ ಮುಂದೆ ನಿಂತು ಮಾತನಾಡುತ್ತಿದ್ದ ರೇಣುಕಮ್ಮಳಿಗೆ ಮತ್ತೆ ಬಡಿಗೆಯಿಂದ ಹೊಡೆದು, ಗೇಟ್ ಗೆ ತಳ್ಳಿದ್ದಾನೆ. ಕೂಡಲೇ ರೇಣುಕಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.  ಸದ್ಯ ಆರೋಪಿ ಮಹೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ, ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಯನ್ನು ಕೋಪದ ಕೈಗೆ ಬುದ್ದಿ ಕೊಟ್ಟಿದ್ದರಿಂದ ಕೊಲೆಯಾಗಿ ಹೋಗಿದೆ. ಇದೀಗ ಇನ್ನೂರು ರೂಪಾಯಿ ಹಣಕ್ಕಾಗಿ ಆರೋಪಿ ಮಹೇಶ್ ಕಂಬಿ ಹಿಂದೆ ಹೋದರೆ, ಮಹಿಳೆಯೊಬ್ಬಳು ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ