ನೆಲಮಂಗಲ, ನವೆಂಬರ್ 10: ಮನೆ ಬಾಡಿಗೆ ಕೇಳುವ ನೆಪದಲ್ಲಿ ಸರ ಎಗರಿಸುತ್ತಿದ್ದ ದಂಪತಿಯನ್ನ (Couple) ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ. ಪತಿ ಜೀವನ್ ಅಲಿಯಾಸ್ ಜೀವ (30), ಪತ್ನಿ ಆಶಾ (30) ಬಂಧಿತರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದವರಾದ ಬಂಧಿತರಿಂದ 17 ಲಕ್ಷ ಮೌಲ್ಯದ 240 ಗ್ರಾಂ ಚಿನ್ನಾಭರಣ, 90 ಗ್ರಾಂ ಬೆಳ್ಳಿ ಜಪ್ತಿ ಮಾಡಲಾಗಿದೆ.
ಬಂಧಿತ ದಂಪತಿ ವಿರುದ್ಧ ದರೋಡೆ, ಕೊಲೆ, ಕೊಲೆಯತ್ನ ಸೇರಿ ಒಟ್ಟು 15 ಪ್ರಕರಣಗಳು ದಾಖಲಾಗಿದ್ದವು. 2024ರ ಫೆ.13ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ವೃದ್ಧೆ ಮಂಜುಳಾ ಕೊಲೆಯಾಗಿತ್ತು. ಕೊಲೆ ಬಳಿಕ ಸಂಪ್ನಲ್ಲಿ ಮೃತದೇಹ ಹಾಕಿ ದಂಪತಿ ಪರಾರಿಯಾಗಿದ್ದರು.
ಕೇಂದ್ರ ವಲಯ ಐಜಿಪಿ ಲಾಬುರಾಮ್ ಸೂಚನೆ ಮೇರೆಗೆ ತಾವರೆಕೆರೆ ಇನ್ಸ್ಪೆಕ್ಟರ್ ಮೋಹನ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿಯಲಾಗಿತ್ತು. ಈ ವೇಳೆ ಹೊಸಕೋಟೆ ಬಳಿ ಮತ್ತೊಂದು ಕೃತ್ಯವೆಸಗುವ ವೇಳೆ ಪೊಲೀಸರ ಬಲೆಗೆ ಬಿದಿದ್ದರು.
ಇದನ್ನೂ ಓದಿ: ಮಂಗಳೂರು: ಪತ್ನಿ, ಮಗನನ್ನು ಕೊಂದು ನಂತರ ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ
ಆರೋಪಿ ಜೀವನ್ ಬೇಕರಿಯಲ್ಲಿ ತಿಂಡಿಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದ. ಒಂಟಿ ಮಹಿಳೆಯರು ವಾಸಿಸುತ್ತಿದ್ದ ಸ್ಥಳ ಗುರುತಿಸುತ್ತಿದ್ದ ಪತ್ನಿ ಆಶಾ, ಬಳಿಕ ಪತಿ ಜೀವನ್ ಜತೆ ತೆರಳಿ ಕೃತ್ಯವೆಸಗುತ್ತಿದ್ದರು. ಜ್ಯುವೆಲರಿ ಅಂಗಡಿಗೆ ತೆರಳಿ ಕಷ್ಟ ಇದೆ ಅಂತಾ ಹೇಳಿ ಚಿನ್ನಾಭರಣ ಮಾರಾಟ ಮಾಡಿ ಬರುತ್ತಿದ್ದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಸದ್ಯ ತಾವರೆಕೆರೆ ಪೊಲೀಸರು ಮಹಜರು ನಡೆಸಿ ಜೈಲಿಗೆ ಕಳುಹಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಹಾಡ ಹಗಲೆ ಮನೆಯ ಕಾಂಪೌಂಡ್ಗೆ ನುಗ್ಗಿದ ಖತರ್ನಾಕ್ ಕಳ್ಳ ಮಾಲೀಕರು ಮನೆಯಲ್ಲಿರುವಾಗಲೇ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಖದ್ದು ಎಸ್ಕೇಪ್ ಆಗಿದ್ದ ಘಟನೆ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕುರುಬರಹಳ್ಳಿಯಲ್ಲಿ ನಡೆದಿತ್ತು.
ನಂಜುಡಪ್ಪ ಎಂಬುವವರು ಮನೆ ಕಾಂಪೌಂಡ್ನಲ್ಲಿ ಬೈಕ್ ನಿಲ್ಲಿಸಿ ಮನೆ ಒಳಗಡೆ ಹೋಗಿದ್ದಾರೆ. ಈ ವೇಳೆ ಮನೆ ಮುಂದೆಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಖದೀಮ ಮನೆ ಕಾಂಪೌಂಡ್ನಲ್ಲಿ ಯಾರು ಇಲ್ಲದನ್ನ ಕಂಡು ನಕಲಿ ಕೀ ಬಳಿಸಿ ಬೈಕ್ ಅನ್ನ ತಳ್ಳಿಕೊಂಡು ಹೋಗಿದ್ದಾನೆ.
ಇದನ್ನೂ ಓದಿ: ಲಾರಿ ಡಿಕ್ಕಿ: ಕಾರಿನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ದುರ್ಮರಣ
ಇನ್ನೂ ಮನೆ ಕಾಂಪೌಂಡ್ನಲ್ಲಿ ನಿಲ್ಲಿಸಿದ್ದ ಬೈಕ್ ಎಲ್ಲಿ ಹೋಯ್ತು ಅಂತ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಳ್ಳನ ಕೈ ಚಳಕದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮರಾ ದೃಶ್ಯ ಸಮೇತ ಮಾಲೀಕ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ತನಿಖೆ ಮುಂದುವರೆಸಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:41 pm, Sun, 10 November 24