ಬೆಂಗಳೂರು: ಮದ್ಯ ವ್ಯಸನಿ ಮಗನಿಗೆ ಸೀಮೆಎಣ್ಣೆ ಸುರಿದು ಕೊಲ್ಲುವುದಾಗಿ ಬೆದರಿಸಲು ಹೋದ ಮಹಿಳೆಯೊಬ್ಬರು ಬೆಂಕಿ ಕಡ್ಡಿ ಗೀರಿದ್ದರಿಂದ ಅನಾಹುತ ಸಂಭವಿಸಿದೆ. ಧಗ್ಗನೆ ಹೊತ್ತಿಕೊಂಡ ಬೆಂಕಿ ಆತನನ್ನು ಸಂಪೂರ್ಣ ಸುಟ್ಟುಹಾಕಿದ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಚಿಕ್ಕಬಾಣಾವರದಲ್ಲಿ (Chikkabanavara) ಸೋಮವಾರ ನಡೆದಿದೆ. ಮೃತರನ್ನು 40 ವರ್ಷ ವಯಸ್ಸಿನ ಚಾಂದ್ ಪಾಷಾ ಎಂದು ಗುರುತಿಸಲಾಗಿದೆ. ಇವರು ಮದ್ಯವ್ಯಸನಿಯಾಗಿದ್ದು, ಪ್ರತಿನಿತ್ಯ ಮದ್ಯಪಾನ ಮಾಡಿ ಬಂದು ತನ್ನ ತಾಯಿಗೆ ತೊಂದರೆ ನೀಡುತ್ತಿದ್ದರು ಎನ್ನಲಾಗಿದೆ.
ಮದ್ಯಪಾನ ಮಾಡಿ ಬಂದ ಪಾಷಾರನ್ನು ಹೆದರಿಸಲೆಂದು ಅವರ ತಾಯಿ ಸೂಫಿಯಾ ಬಿ ಮಗನ ಮೇಲೆ ಸೀಮೆಎಣ್ಣೆ ಸುರಿದಿದ್ದಾರೆ. ನಂತರ ಬೆಂಕಿ ಕಡ್ಡಿ ಗೀರಿ ಹೆದರಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಗೀರಿದ್ದ ಬೆಂಕಿಕಡ್ಡಿಯಿಂದ ಕಿಡಿ ಸೀಮೆಎಣ್ಣೆಗೆ ತಗುಲಿ ಧಗ್ಗನೆ ಬೆಂಕಿ ಹೊತ್ತಿಕೊಂಡಿದೆ. ಹೊಗೆಯನ್ನು ಕಂಡ ನೆರೆಹೊರೆಯವರು ಸೂಫಿಯಾ ಅವರ ಮನೆಗೆ ಧಾವಿಸಿದರು. ಆದರೆ, ಆ ವೇಳೆಗೆ ಪಾಷಾ ಬೆಂಕಿಯಲ್ಲಿ ಸುಟ್ಟು ಹೋಗಿದ್ದರು.
ಹೊಗೆ ಬರುವುದನ್ನು ನೋಡಿದ ನಂತರ ನಾನು ಪಾಷಾ ಅವರ ಮನೆಗೆ ಪ್ರವೇಶಿಸಿದೆ. ನಾನು ಬೆಂಕಿಯನ್ನು ನಂದಿಸಲು ನೀರು ಸುರಿಯಲು ಪ್ರಯತ್ನಿಸಿದೆ. ಆದರೆ ಮಹಿಳೆ ನನ್ನನ್ನು ತಡೆದರು. ನಾನು ಬೆಂಕಿಯನ್ನು ನಂದಿಸಿದ ನಂತರ ವ್ಯಕ್ತಿ ನಿಶ್ಚಲವಾಗಿದ್ದರು. ಪಾಷಾ ಯಾವಾಗಲೂ ಕುಡಿದು ಮನೆಗೆ ಬರುತ್ತಿದ್ದರು ಎಂದು ಅವರ ನೆರೆಹೊರೆಯವರಾದ ಮೊಹಮ್ಮದ್ ತಮೀಮ್ ಹೇಳಿದ್ದಾರೆ.
ಪಾಷಾ ಹತ್ತು ವರ್ಷಗಳ ಹಿಂದೆ ಪತ್ನಿಯನ್ನು ತೊರೆದು ಚಿಕ್ಕಬಾಣಾವರದ ಜನತಾ ಕಾಲೋನಿಯಲ್ಲಿರುವ ತನ್ನ ತಾಯಿ ಮನೆಯಲ್ಲಿ ವಾಸವಾಗಿದ್ದರು. ಅವರು ಪ್ರತಿದಿನ ಕುಡಿಯುತ್ತಿದ್ದರು ಮತ್ತು ಹೆಚ್ಚಿನ ದಿನಗಳಲ್ಲಿ ಬೀದಿಗಳಲ್ಲಿ ಮಲಗುತ್ತಿದ್ದರು ಎಂದು ವರದಿಯಾಗಿದೆ. ಮಗನ ವರ್ತನೆಯ ಬಗ್ಗೆ ನಿವಾಸಿಗಳು ಸೂಫಿಯಾ ಅವರಿಗೆ ದೂರು ನೀಡಿದ್ದರು. ವರದಿಗಳ ಪ್ರಕಾರ ಸೂಫಿಯಾ ತನ್ನ ಮಗನ ಚಟದಿಂದ ಬೇಸತ್ತಿದ್ದರು.
ಇದನ್ನೂ ಓದಿ: IKEAದಲ್ಲಿ ಮಹಿಳೆಯೊಬ್ಬರ ಊಟದ ಟೇಬಲ್ ಮೇಲೆ ಬಿದ್ದ ಸತ್ತ ಇಲಿ
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸೂಫಿಯಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ