ಬೆಂಗಳೂರು: ಪೊಲೀಸರೇ ಆರೋಪಿಯನ್ನು ಅಪಹರಿಸಿ ಆತನ ಸಂಬಂಧಿಕರ ಬಳಿ 40 ಲಕ್ಷ ರೂ.ಗೆ ಬೇಡಿಕೆ ಇಟ್ಟ ಸಿನಿಮೀಯ ಪ್ರಕರಣವೊಂದು ಬೆಂಗಳೂರಿನ (Bengaluru) ಮಾರತ್ತಹಳ್ಳಿಯಲ್ಲಿ (Marathahalli) ಬೆಳಕಿಗೆ ಬಂದಿದೆ. ಇದೀಗ ಮಾರತ್ತಹಳ್ಳಿ ಪಿಎಸ್ಐ ರಂಗೇಶ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಎಫ್ಐಆರ್ ದಾಖಲಾದ ವಿಚಾರ ತಿಳಿಯುತ್ತಿದ್ದಂತೆಯೇ ಆರೋಪಿ ಪೊಲೀಸರು ತಲೆಮರೆಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೆಲವು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತನಿಖೆ ವೇಳೆ ಪೊಲೀಸರೇ ಅಪಹರಣ ಎಸಗಿರುವುದು ತಿಳಿದುಬಂದಿತ್ತು. ಇದರ ಬೆನ್ನಲ್ಲೇ ಎಲ್ಲರನ್ನೂ ಬಂಧಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚಿಸಿದ್ದರು.
ಹುಲಿ ಚರ್ಮ, ಉಗುರು ಮಾರಾಟ ಮಾಡುತ್ತಿದ್ದ ಆರೋಪಿ ರಾಮಾಂಜನಿ ಎಂಬಾತನನ್ನು ಮಾರ್ಚ್ 18 ರ ಸಂಜೆ 4.30 ಕ್ಕೆ ಅಪಹರಣ ಮಾಡಲಾಗಿತ್ತು. ಈ ವಿಚಾರವಾಗಿ ರಾಮಾಂಜನಿಯ ಸಂಬಂಧಿ ಶಿವರಾಮಯ್ಯ ಎಂಬವರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಕೂಡಲೇ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದ ಬಾಗಲೂರು ಪೊಲೀಸರು ರಾಮಾಂಜನಿಯನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಪೊಲೀಸರೇ ಅಪಹರಣ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ: Bengaluru: ವಿವೇಕನಗರ ಪೊಲೀಸರ ಕಾರ್ಯಾಚರಣೆ; ಕಳವಾಗಿದ್ದ 40 ಲಕ್ಷ ರೂ. ಮೌಲ್ಯದ ಫೋನ್ ಸಹಿತ ಕಳ್ಳರ ಬಂಧನ
‘ನನ್ನನ್ನು ಕರೆದುಕೊಂಡು ಹೋಗಿ ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿದ್ದರು. ಬಿಡುಗಡೆ ಮತ್ತು ಪ್ರಕರಣದಿಂದ ಬಿಡುಗಡೆ ಮಾಡಲು 45 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಹಣ ಕೊಡದೆ ಇದ್ದರೆ ಸಾಯುವವರಿಗೆ ಜೈಲಿನಲ್ಲಿಯೇ ಇರುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದರು’ ಎಂದು ವಿಚಾರಣೆ ವೇಳೆ ರಾಮಾಂಜನಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದರ ಬೆನ್ನಲ್ಲೇ ಪಿಎಸ್ಐ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಮಾರತ್ತಹಳ್ಳಿ ಪಿಎಸ್ಐ ರಂಗೇಶ್ ಹಾಗೂ ಇತರರು ತಲೆಮರೆಸಿಕೊಂಡಿದ್ದಾರೆ. ಹೆಡ್ಕಾನ್ಸ್ಟೇಬಲ್ ಹರೀಶ್ಅನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ರಂಗೇಶ್ ಹಾಗೂ ಇತರರು ಆರೋಪಿ ರಾಮಾಂಜನಿಯ ತಲೆಗೆ ಗನ್ ಇಟ್ಟು ಹಣಕ್ಕಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಪ್ರಕರಣದಲ್ಲಿ ಪೊಲೀಸರೇ ಆರೋಪಿಗಳು ಎಂಬುದು ಗೊತ್ತಾಗುತ್ತಿದ್ದಂತೆಯೇ ತಕ್ಷಣವೇ ಎಲ್ಲರನ್ನೂ ಬಂಧಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚಿಸಿದ್ದರು. ಅದರಂತೆ ಮಂಗಳವಾರ ಹೆಡ್ ಕಾನ್ಸ್ಟೇಬಲ್ ಹರೀಶ್ನನ್ನು ಬಂಧಿಸಲಾಗಿತ್ತು. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ