ಬೆಂಗಳೂರು ನ.22: ರಾತ್ರಿ ಕದ್ದ (Theft) ಎಳನೀರನ್ನು (Coconut Water) ಬೆಳಿಗ್ಗೆ ಮಾರುತ್ತಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು (Police) ಬಂಧಿಸಿದ್ದಾರೆ. ಮೋಹನ್ ಬಂಧಿತ ಆರೋಪಿ. ಆರೋಪಿ ಮೋಹನ್ ಕಳೆದ ಮೂರು ತಿಂಗಳಿಂದ ಬೆಂಗಳೂರಿನಲ್ಲಿ ಕೃತ್ಯ ಎಸಗುತ್ತಿದ್ದನು. ರಾತ್ರಿ ವೇಳೆ ಕಾರ್ನಲ್ಲಿ ಬಂದು ರಸ್ತೆಯ ಪಕ್ಕ ಇಟ್ಟ ಎಳನೀರುಗಳನ್ನು ಕದಿಯುತ್ತಿದ್ದನು. ವ್ಯಾಪಾರಿ ರಾಜಣ್ಣ ಎಂಬುವರು ಮಾರಾಟ ಮಾಡಲು 12 ಸಾವಿರ ಎಳನೀರು ತಂದಿದ್ದರು. ಆದರೆ ಬೆಳಿಗ್ಗೆ ಅಂಗಡಿಗೆ ಬಂದು ನೋಡಿದಾಗ ಎಳನೀರು ಕಾಣೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜಣ್ಣ ಅವರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ಗಿರಿನಗರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಪೊಲೀಸರು ಕಳ್ಳತನಕ್ಕೆ ಬಳಸಿದ್ದ ಕಾರು, ಒಂದು ಎನ್ ಫೀಲ್ಡ್ ಬೈಕ್ ಸಹಿತ 8 ಲಕ್ಷ ಮೌಲ್ಯದ ವಸ್ತುಗಳು ವಂಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಖತರ್ನಾಕ್ ಖದೀಮರಿಂದ ಸರಣಿ ಕಳ್ಳತನ; ಬಾರ್ ಶಟರ್ ಮುರಿದು ಆರು ಲಕ್ಷ ಹಣ ದೋಚಿ ಪರಾರಿ
ಈ ಹಿಂದೆ ಮೋಹನ್ ಎಳನೀರು ವ್ಯಾಪಾರಿಯಾಗಿದ್ದನು. ಬಿಡುವಿನ ಸಮಯದಲ್ಲಿ ರಮ್ಮಿ ಆಟವಾಡಿ ಲಕ್ಷ ಲಕ್ಷ ರೂ. ಸಾಲ ಮಾಡಿಕೊಂಡಿದ್ದನು. ಸಾಲ ತೀರಿಸಲು ಕಾರ್ ಬಾಡಿಗೆ ಪಡೆದು ಟ್ಯಾಕ್ಸಿ ಓಡಿಸಲು ಆರಂಭಿಸಿದನು. ಹೀಗೆ ಒಂದು ರಾತ್ರಿ ಕಾರಿನಲ್ಲಿ ಹೋಗುವಾಗ ಎಳನೀರು ನೋಡಿದ್ದಾನೆ. ಆಗ ಮೋಹನ್ಗೆ ಕಳ್ಳತನದ ಪ್ಲ್ಯಾನ್ ಹೊಳೆದಿದೆ. ಕದ್ದ ಎಳನೀರನ್ನು ಮಾರಲು ಗ್ರಾಹಕರನ್ನು ಸಹ ಹುಡುಕಿಕೊಂಡಿದ್ದನು. ಪ್ಯ್ಲಾನ್ ಪ್ರಕಾರ ಎಲ್ಲ ಸೆಟ್ ಆದ ಮೇಲೆ ಪ್ರತಿರಾತ್ರಿ 100 ಎಳನೀರನ್ನು ಕದ್ದು ಕ್ಯಾಬ್ನಲ್ಲಿ ಹಾಕಿಕೊಂಡು ಮನೆಗೆ ಹೋಗುತ್ತಿದ್ದನು.
ಬೆಳಗ್ಗೆ ಎಳನೀರನ್ನು ಮಾರಿ ಹಣ ಪಡೆಯುತ್ತಿದ್ದನು. ಇದೇ ರೀತಿ ಕಳೆದ ಮೂರು ತಿಂಗಳಿಂದ ಕಳ್ಳತನ ಮಾಡುತ್ತಿದ್ದನು. ಎಳನೀರು ಕಳೆದುಕೊಂಡು ವ್ಯಾಪಾರಿಗಳು ಯಾರು ದೂರು ನೀಡಲು ಮುಂದಾಗಿರಲಿಲ್ಲ. ಕೊನೆಗೆ ರಾಜಣ್ಣ ಎಂಬುವವರು ದೂರು ಕೊಟ್ಟ ಬಳಿಕ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:47 am, Wed, 22 November 23