ಬೆಂಗಳೂರು, ಜನವರಿ 25: ಜೋಡಿಯೊಂದು ಮಟ ಮಟ ಮಧ್ಯಾಹ್ನವೇ ಕಾರಿನಲ್ಲೇ ಬೆತ್ತಲಾಗಿ ಕಾಮತೃಷೆ ತೀರಿಸಿಕೊಳ್ಳಲು ಮುಂದಾದ ವಿಲಕ್ಷಣ ವಿದ್ಯಮಾನ ಬೆಂಗಳೂರಿನ (Bengaluru) ಉದ್ಯಾನವೊಂದರ ಬಳಿ ನಡೆದಿದೆ. ಇದೇ ವೇಳೆ, ದೃಶ್ಯ ಕಂಡು ಬುದ್ಧಿಹೇಳಲು ಬಳಿ ತೆರಳಿದ ಪೊಲೀಸ್ (Bengaluru Police) ಮೇಲೆಯೆ ಕಾರು ಚಲಾಯಿಸಿಕೊಂಡು ಜೋಡಿ ಪರಾರಿಯಾಗಿದೆ. ಗಾಯಗೊಂಡ ಸಬ್ ಇನ್ಸ್ಪೆಕ್ಟರ್ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಾನವನವೊಂದರ ಬಳಿ ಕಿಯೋ ಸೆಲಾಟೋಸ್ ಕಾರಿನಲ್ಲಿ ಬಂದಿದ್ದ ಜೋಡಿಯೊಂದು ಅಲ್ಲೇ ಬಟ್ಟೆಬಿಚ್ಚಿ ಕಾಮಕೇಳಿ ಆರಂಭಿಸಿದೆ. ಪಾರ್ಕ್ನಲ್ಲಿ ಅನೇಕ ಮಂದಿ ಇದ್ದರೂ, ಅವರಿಗೆಲ್ಲ ತಾವು ಕಾಣಿಸುತ್ತಿದ್ದರೂ ಅದನ್ನು ಲೆಕ್ಕಿಸದೆ ಜೋಡಿ ಸರಸದಲ್ಲಿ ತಲ್ಲೀನವಾಗಿದೆ. ಇದೇ ವೇಳೆ ಅಲ್ಲಿ ಕರ್ತವ್ಯ ನಿರತರಾಗಿದ್ದ ಸಬ್ ಇನ್ಸ್ಪೆಕ್ಟರ್ ಮಹೇಶ್ ಆ ಜೋಡಿಯನ್ನು ಗಮನಿಸಿದ್ದಾರೆ.
ಜೋಡಿಗೆ ಬುದ್ಧಿ ಹೇಳಬೇಕು ಎಂದುಕೊಂಡ ಸಬ್ ಇನ್ಸ್ಪೆಕ್ಟರ್ ಮಹೇಶ್ ಕಾರಿನ ಬಳಿ ತೆರಳಿದ್ದಾರೆ. ಕಾರಿನ ಬಳಿ ಹೋಗಿ ನಂಬರ್ ಪ್ಲೇಟ್ ಪರಿಶೀಲನೆ ನಡೆಸಿದ್ದಾರೆ. ಅಷ್ಟರಲ್ಲಿ ಎಚ್ಚೆತ್ತುಕೊಂಡ ಯುವಕ ಏಕಾಏಕಿ ಕಾರು ಚಲಾಯಿಸಿದ್ದಾನೆ. ದಿಢೀರ್ ಕಾರು ಚಲಿಸಲು ಆರಂಭಿಸಿದ ಕಾರಣ ಸಬ್ ಇನ್ಸ್ಪೆಕ್ಟರ್ ಮಹೇಶ್ ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರು ಕಾರಿನ ಬಾನೆಟ್ ಹಿಡಿದುಕೊಂಡು ಒದ್ದಾಡುತ್ತಿದ್ದರೂ ಲೆಕ್ಕಿಸದ ಯುವಕ ಕಾರು ಚಲಾಯಿಸಿದ್ದಾನೆ. ಏಕಾಏಕಿ ಕಾರನ್ನು ರಿವರ್ಸ್ ತೆಗೆದು ಮತ್ತೆ ಮುಂದಕ್ಕೆ ಚಲಾಯಿಸಿದ್ದಾನೆ. ಪರಿಣಾಮವಾಗಿ ಕೆಳಬಿದ್ದ ಸಬ್ ಇನ್ಸ್ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ನಗರದಲ್ಲಿ ಹಿಟ್ ಆ್ಯಂಡ್ ರನ್ ಘಟನೆ ಸಂಭವಿಸಿತ್ತು. ಡಿಕ್ಕಿಯ ರಭಸಕ್ಕೆ ಬಾನೆಟ್ ಮೇಲೆ ಬಿದ್ದ ವ್ಯಕ್ತಿಯನ್ನು ಕಾರು ಚಾಲಕ ಹಲವು ಮೀಟರ್ಗಳಷ್ಟು ದೂರಕ್ಕೆ ಎಳೆದೊಯ್ದ ಘಟನೆ ಮಲ್ಲೇಶ್ವರಂ ಬಳಿ ನಡೆದಿತ್ತು. ಘಟನೆಯ ದೃಶ್ಯವಾಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿತ್ತು.
ಇದನ್ನೂ ಓದಿ: ಬೆಂಗಳೂರು: ಡಿಕ್ಕಿ ಹೊಡೆದು ವ್ಯಕ್ತಿಯನ್ನು ಹಲವು ಮೀಟರ್ ದೂರ ಎಳೆದೊಯ್ದ ಕಾರು ಚಾಲಕ
ಮಲ್ಲೇಶ್ವರಂನ ಮಾರಮ್ಮ ದೇವಸ್ಥಾನದ ವೃತ್ತದಲ್ಲಿ ಜನವರಿ 15 ರಂದು ನಡೆದ ಘಟನೆಯ ಬೆಚ್ಚಿಬೀಳಿಸುವ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:43 am, Thu, 25 January 24