ಬೆಂಗಳೂರು: ಬೈಕ್ ಹಿಡದ ಕಾರು ಚಾಲಕನನ್ನು ಬೈಕ್ ಸವಾರನೊಬ್ಬ ಒಂದೂವರೆ ಕಿಲೋ ಮೀಟರ್ ದೂರಕ್ಕೆ ಎಳೆದೊಯ್ದ ಅಮಾನವೀಯ ಕೃತ್ಯ ನಗರದ ಮಾಗಡಿ ರಸ್ತೆಯ ಟೋಲ್ ಗೇಟ್ (Magadi Road Toll Plaza) ಬಳಿ ನಡೆದಿದೆ. ಟೋಲ್ ಗೇಟ್ ಬಳಿ ಟಾಟಾ ಸುಮೋಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದು, ಇದನ್ನು ಪ್ರಶ್ನಿಸಲು ಹೋದಾಗ ಬೈಕ್ ಏರಿ ಸವಾರ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಕಾರು ಚಾಲಕ ಬೈಕ್ ಹಿಂಭಾಗ ಹಿಡಿದಿದ್ದು, ಬೈಕ್ ಸವಾರ ಆ ವ್ಯಕ್ತಿಯನ್ನು ಒಂದೂವರೆ ಕಿಲೋ ಮೀಟರ್ ದೂರಕ್ಕೆ ಎಳೆದೊಯ್ದಿದ್ದಾನೆ. ಅಂದರೆ, ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ಎಳೆದೊಯ್ದಿದ್ದಾನೆ. ಈ ದುರ್ಘಟನೆ ದೆಹಲಿಯ ಹಿಟ್ ಅಂಡ್ ರನ್ ಕೇಸನ್ನೇ ನೆನಪಿಸುವಂತಿದೆ.
ಟೋಲ್ ಗೇಟ್ ಬಳಿ ಟಾಟಾ ಸುಮೋ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಬೈಕ್ ಸವಾರನನ್ನು ಪ್ರಶ್ನಿಸಲು ಟಾಟಾ ಸುಮೋ ಚಾಲಕ ಮುತ್ತಪ್ಪ ಕಾರಿನಿಂದ ಇಳಿದಾಗ ಬೈಕ್ ಏರಿ ಎಸ್ಕೇಪ್ ಆಗಲು ಬೈಕ್ ಸವಾರ ಮುಂದಾಗಿದ್ದಾನೆ. ಈ ವೇಳೆ ಬೈಕ್ ಸವಾರನನ್ನ ಹಿಡಿಯುವ ಬರದಲ್ಲಿ ಬೈಕ್ನ ಹಿಂಭಾಗವನ್ನು ಹಿಡಿದ್ದಾರೆ. ಅದರಂತೆ ಬೈಕ್ ಸವಾರ ಆ ವ್ಯಕ್ತಿಯನ್ನು ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ದರದರನೆ ಎಳೆದೊಯ್ದು ಮೃಗೀಯ ವರ್ತನೆ ತೋರಿದ್ದಾನೆ.
ಇದನ್ನೂ ಓದಿ: Viral News: ದುಬಾರಿ ಗಿಫ್ಟ್ ಕೊಡಲಿಲ್ಲವೆಂದು ಹೆಂಡತಿ ಮಾನಸಿಕ ಹಿಂಸೆ ನೀಡುತ್ತಾಳೆ; ಪೊಲೀಸರಿಗೆ ಗಂಡನಿಂದ ದೂರು
ವಯಸ್ಸಾದ ಚಾಲಕನನ್ನ ಬೈಕ್ನಲ್ಲಿ ಎಳೆದೊಯ್ತುತ್ತಿರುವುದನ್ನು ನೋಡಿದ ಇತರೆ ವಾಹನ ಸವಾರರು ಬೈಕ್ ಅನ್ನು ಅಡ್ಡಹಾಕಿ ಪ್ರಶ್ನಿಸಿ ಧರ್ಮದೇಟು ನೀಡಿದ್ದಾರೆ. ಮಾಹಿತಿ ತಿಳಿದ ವಿಜಯ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೈಕಿನ ಹಿಂದೆ ನೇತುಬಿದ್ದು ಒಂದೂವರೆ ಕಿಮೀ ಎಳೆದೊಯ್ತಲ್ಪಟ್ಟ ಟಾಟಾಸುಮೋ ಚಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾತ್ರವಲ್ಲದೆ, ವಾಹನ ಸವಾರರಿಂದ ಧರ್ಮದೇಟು ತಿಂದ ಬೈಕ್ ಸವಾರನೂ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪೊಲೀಸರು ಇಬ್ಬರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಬೈಕ್ ಸವಾರನನ್ನು ಬ್ಯಾಟರಾಯನಪುರ ನಿವಾಸಿ ಸುಹೇಲ್ ಅಲಿಯಾಸ್ ಸಾಹಿಲ್ ಸೈಯದ್ ಎಂದು ಗುರುತಿಸಲಾಗಿದ್ದು, ಸೇಲ್ಸ್‌ಮನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ನಡೆಸಿದ ವಿಚಾರಣೆ ವೇಳೆ ತಿಳಿದುಬಂದಿದೆ. ಇನ್ನು, ಮುತ್ತಪ್ಪ ಅವರ ಆರೋಗ್ಯ ವಿಚಾರಿಸಲು ವಿಜಯನಗರದ ಖಾಸಗಿ ಆಸ್ಪತ್ರೆಗೆ ವಸತಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದರು. ಆರೋಪಿ ದ್ವಿಚಕ್ರ ವಾಹನದ ಸವಾರನ ವಿರುದ್ಧ ಕಾನೂನು ಪ್ರಕಾರ ಕ್ರಮ ಆಗಲಿದೆ ಎಂದು ಸಚಿವರು ಹೇಳಿದರು.
ಚಂದ್ರಾಲೇಔಟ್ನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ತೆರಳುತ್ತಿದ್ದಾಗ ಮೊಬೈಲ್ನಲ್ಲಿ ಮಾತನಾಡಿಕೊಂಡು ಹಿಂಬದಿಯಿಂದ ಬಂದ ಬೈಕ್ ಸವಾರ ನನ್ನ ಬೊಲೆರೊಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳದಲ್ಲೇ ವಾಹನ ನಿಲ್ಲಿಸಿ ಕ್ಷಮೆಯಾಚಿಸಿದ್ದರೆ ಬಿಟ್ಟುಬಿಡುತ್ತಿದ್ದೆ. ಆದರೆ ಯಾವುದೇ ಮಾತನಾಡದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಬೈಕ್ ಸವಾರನನ್ನು ಏನಾದರೂ ಸರಿ ಬಿಡಬಾರದು ಎಂದು ನಿರ್ಧರಿಸಿ ಹಿಡಿಯಲು ಮುಂದಾದೆ. ದ್ವಿಚಕ್ರ ವಾಹನವನ್ನು ಹಿಡಿದುಕೊಂಡು ಜೋತುಬಿದ್ದೆ ಎಂದು ಗಾಯಾಳು ಕಾರು ಚಾಲಕ ಮುತ್ತಪ್ಪ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Tue, 17 January 23