ಮನೆ ಕಳ್ಳತನಕ್ಕೆ ಬಂದವನ ಕಾಲಿಗೆ ಗುಂಡು ಹಾರಿಸಿ ಪೊಲೀಸರಿಗೆ ಒಪ್ಪಿಸಿದ ಮನೆ ಮಾಲಿಕ
ಮನೆಗೆ ಕನ್ನಾ ಹಾಕಲು ಕಾಂಪೌಂಡ್ ಹಾಕಿದಾಗ ಮನೆ ಮಾಲೀಕನನ್ನು ನಾಯಿ ಎಚ್ಚರಿಸಿದೆ, ಕೂಡಲೇ ಗನ್ ಹಿಡಿದು ಮಹಡಿಗೆ ತೆರಳಿದ ಮಾಲೀಕ ಕಳ್ಳನ ಕಾಲಿಗೆ ಗುಂಡು ಹಾರಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು: ಅದೊಂದು ಈಗಿನ್ನೂ ಅಭಿವೃದ್ಧಿಯಾಗುತ್ತಿರುವ ಏರಿಯಾದಲ್ಲಿರುವ ಒಂಟಿ ಮನೆ. ಆ ಮನೆ ಮೇಲೆ ಕಣ್ಣು ಹಾಕಿದ್ದ ಕಳ್ಳನೊಬ್ಬ ಮಧ್ಯರಾತ್ರಿ ಕಳ್ಳತನ (Theft)ಕ್ಕೆಂದು ಬಂದು ಮನೆ ಮಾಲೀಕನಿಂದ ಗುಂಡೇಟು (Firing) ತಿಂದು ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಇಂಥದ್ದೊಂದು ಘಟನೆ ನಡೆದಿರುವುದು ನಗರದ ಜಕ್ಕೂರು ಸಮೀಪದ ರಾಚೇನಹಳ್ಳಿಯಲ್ಲಿ. ಮಾಲೀಕ ವೆಂಕಟೇಶ್ ಅವರಿಂದ ಗುಂಡೇಟು ತಿಂದ ಆರೋಪಿ ಲಕ್ಷ್ಮಣ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ರಾಚೇನಹಳ್ಳಿಯಲ್ಲಿರುವ ವೆಂಕಟೇಶ್ ಎಂಬವರ ಮನೆ ಮೇಲೆ ಕಣ್ಣು ಹಾಕಿದ್ದ ಕಳ್ಳನೊಬ್ಬ ಡಿಸೆಂಬರ್ 12ರಂದು ಮಧ್ಯರಾತ್ರಿ ವೇಳೆ ಬೀಗ ಹೊಡೆಯಲು ಬೇಕಾದ ಗ್ಯಾಸ್ ಕಟ್ಟರ್ ಸೇರಿದಂತೆ ಬೇಕಾದ ಎಲ್ಲಾ ಸಾಮಗ್ರಿಗಳೊಂದಿಗೆ ಸಜ್ಜಾಗಿಯೇ ಬಂದಿದ್ದ. ಅದರಂತೆ ವೆಂಕಟೇಶ್ ಅವರ ಮನೆಯ ಮುಂಭಾಗದ ಕಾಂಪೌಂಡ್ ಹಾರಿದಾಗ ಎಚ್ಚರಗೊಂಡ ನಾಯಿ ಬೊಗಳಲು ಆರಂಭಿಸಿ ಮಾಲೀಕನನ್ನು ಎಚ್ಚರಿಸಿದೆ. ತಕ್ಷಣ ಎದ್ದು ಪರಿಶೀಲಿಸಿದಾಗ ಮನೆ ಬಳಿ ಕಳ್ಳ ಓಡಾಡುತ್ತಿರುವುದು ಮಾಲೀಕ ವಂಕಟೇಶ್ ಕಣ್ಣಿಗೆ ಬಿದ್ದಿದೆ.
ಬಾಗಿಲು ತೆರೆದು ಎದುರಿಸಿಯೇ ಬಿಡೋಣ ಅಂದುಕೊಂಡರೂ ಹೊರಗೆ ಎಷ್ಟು ಜನ ಇದ್ದಾರೋ ಎಂಬ ಭಯ ಕಾಡಿತು. ತಕ್ಷಣ ಎಚ್ಚೆತ್ತ ವೆಂಕಟೇಶ್ ಮನೆಯಲ್ಲಿದ್ದ ಲೈಸೆನ್ಸ್ ಹೊಂದಿದ್ದ ಡಬ್ಬಲ್ ಬ್ಯಾರಲ್ ಗನ್ ಕೈಗೆತ್ತಿಕೊಂಡು ಮೊದಲ ಮಹಡಿಗೆ ತೆರಳಿ ಕಳ್ಳನ ಮೇಲೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಪರಿಣಾಮ ನಾಯಿ ಬೊಗಳುವುದನ್ನು ಕೇಳಿ ಕಾಂಪೌಂಡ್ ಹತ್ತುತ್ತಿದ್ದ ಕಳ್ಳನ ಎಡಗಾಲಿಗೆ ತಗುಲಿ ನೆಲಕ್ಕುರುಳಿದ್ದಾನೆ.
ಹೇಳಿಕೇಳಿ ಡಬಲ್ ಬ್ಯಾರಲ್ ಗನ್ ಸಾಮಾನ್ಯ ಗನ್ ಅಥವಾ ಪಿಸ್ತೂಲಿನಂತಲ್ಲ. ಫೈರ್ ಆದಾಗ ಕೇವಲ ಒಂದು ಕಡೆ ಹಾನಿ ಮಾಡುವುದಿಲ್ಲ. ಸಿಡಿಯುವಾಗ ಒಂದೇ ಗುಂಡು ಸಿಡಿದರೂ ಗುರಿ ತಲುಪುವ ವೇಳೆಗೆ ಚಿಕ್ಕ ಚಿಕ್ಕ ತುಂಡುಗಳಾಗಿ ಗುರಿಯನ್ನ ಸೀಳಿರುತ್ತದೆ. ಅದೇ ರೀತಿ ವೆಂಕಟೇಶ್ ಸಿಡಿಸಿದ ಒಂದು ಗುಂಡು ಕಳ್ಳನ ಎಡಗಾಲು, ತೊಡೆಯ ಭಾಗಕ್ಕೆ ತಗುಲಿದೆ. ಬಳಿಕ ವೆಂಕಟೇಶ್ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡು ಬಿದ್ದಿದ್ದ ಕಳ್ಳನನ್ನ ವಿಚಾರಿಸಿದಾಗ ಆತನ ಹೆಸರು ಲಕ್ಷ್ಮಣ್, ಬಾಗಲಕೋಟೆ ಮೂಲದವನು ಅನ್ನೋದು ತಿಳಿದು ಬಂದಿದೆ.
ಘಟನೆ ಸುದ್ದಿ ತಿಳಿದು ಹಿರಿಯ ಅಧಿಕಾರಿಗಳು, ಎಫ್ಎಸ್ಎಲ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನ ವಶಕ್ಕೆ ಪಡೆದಿರುವ ಸಂಪಿಗೇಹಳ್ಳಿ ಪೊಲೀಸರು ಬೌರಿಂಗ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸದ್ಯ ಆರೋಪಿ ಲಕ್ಷ್ಮಣ್ ವಿರುದ್ಧ ಇರುವ ಇತರೇ ಕಳ್ಳತನ ಪ್ರಕರಣಗಳ ಕುರಿತು ತನಿಖೆ ಮುಂದುವರೆದಿದೆ.
ವರದಿ: ಪ್ರಜ್ವಲ್, ಟಿವಿ9 ಬೆಂಗಳೂರು
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:05 am, Sat, 17 December 22