ಬೆಂಗಳೂರು, (ಆಗಸ್ಟ್ 06): ಬೆಂಗಳೂರಿನಲ್ಲಿ (Bengaluru) ಭೂಗತ ಪಾತಕಿಗಳು ಮತ್ತೆ ಬಾಲ ಬಿಚ್ಚಿದ್ದಾರೆ. ನಿನ್ನೆ(ಆಗಸ್ಟ್ 06) ನಡುರಸ್ತೆಯಲ್ಲೇ ಮಚ್ಚು ಬೀಸಿ ನೆತ್ತರ ಕೋಡಿ ಹರಿಸಿದ್ದಾರೆ. ರೌಡಿಶೀಟರ್(rowdy sheeter) ಸಿದ್ದಾಪುರ ಮಹೇಶ್(Mahesh Murder Case) ಜೈಲಿಂದ ರಿಲೀಸ್ ಆದ ಕೆಲ ಹೊತ್ತಿನಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೈಯಲ್ಲಿ ಮಚ್ಚು ಹಿಡಿದು ಫೀಲ್ಡ್ಗೆ ಇಳಿದವನು ಮಚ್ಚಿನೇಟಿಗೆ ಬಲಿಯಾಗುತ್ತಾನೆ ಎನ್ನುವುದು ರೌಡಿಸಂನ ಅಲಿಖಿತ ನಿಯಮ. ಅದು ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಸಾಬೀತಾಗಿದೆ. ಕೊಲೆ, ಕೊಲೆ ಯತ್ನ, ಸುಫಾರಿಯಂತಹ ಹಲವು ಕೇಸ್ಗಳಲ್ಲಿ ರೌಡಿಶೀಟ್ ಹಾಕಿಸಿಕೊಂಡಿದ್ದ ಮಹೇಶ್ ಅಲಿಯಾಸ್ ಸಿದ್ದಾಪುರ ಮಹೇಶ ಮೊನ್ನೇ ರಾತ್ರಿ ಬರ್ಬರವಾಗಿ ಕೊಲೆಯಾಗಿದ್ದಾನೆ. ವಿಲ್ಸನ್ ಗಾರ್ಡನ್ ನಾಗನೇ (Wilson Garden Naga) ನನಗೆ ಮುಹೂರ್ತ ಇಡುತ್ತಾನೆ ಎಂದು ಕೊಲೆಯಾದ ಮಹೇಶ್ ತನ್ನ ಭವಿಷ್ಯವನ್ನು ತಾನೇ ನುಡಿದಿದ್ದ. ಈ ಬಗ್ಗೆ ಆಪ್ತರು ಮತ್ತು ಕೆಲ ಪೊಲೀಸ್ ಅಧಿಕಾರಿ ಜೊತೆ ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ.
ಆತನ ಕೈಯಿಂದಲೇ ನನ್ನ ಸಾವಾಗುವುದು ಗ್ಯಾರಂಟಿ ಎಂದು ತಿಳಿದಿದ್ದ ಮಹೇಶ್, ಅಷ್ಟರಲ್ಲಿ ನಾಗನ ಕಡೆಯವರನ್ನ ಮುಗಿಸುವ ಪಣ ತೊಟ್ಟಿದ್ದ. 2020ರಲ್ಲಿ ಹಾಸನದಲ್ಲಿ ಲಿಂಗನ ಹತ್ಯೆ ಸಮಯದಲ್ಲೇ ಮಹೇಶ್ ಗೂ ಮುಹೂರ್ತ ಇಟ್ಟಿದ್ದರು. ಆದ್ರೆ, ಆಗ ಮಹೇಶ್ ಬಚಾವ್ ಆಗಿದ್ದ. ಇದರ ರಿವೇಂಜ್ ಗಾಗಿ ಮಹೇಶ್, ಫೈನಾನ್ಶಿಯರ್ ಮದನ್ ಹತ್ಯೆ ಮಾಡಿಸಿದ್ದ. ಈ ವೇಳೆ ನಾಗ ನನ್ನ ಮುಗಿಸುತ್ತಾನೆ ಎನ್ನುವ ಭವಿಷ್ಯ ನುಡಿದಿದ್ದ. ಅದರಂತೆ ಮೊನ್ನೆ ಜೈಲಿನಿಂದ ಹೊರಬರುತ್ತಿದ್ದಂತೆಯೇ ತಾನು ನುಡಿದಿದ್ದ ಭವಿಷ್ಯದಂತೆ ಮಹೇಶ್ ಬರ್ಬರವಾಗಿ ಹತ್ಯೆಯಾಗಿದ್ದ.ಹೀಗಾಗಿ ಇದೀಗ ಈ ಮಹೇಶ್ ಕೊಲೆ ಹಿಂದೆ ಕೇಳಿ ವಿಲ್ಸನ್ ಗಾರ್ಡನ್ ನಾಗನ ಹೆಸರು ಕೇಳಿಬರುತ್ತಿದೆ.
ರೌಡಿಶೀಟರ್ ಕಪಿಲ್ ಹಾಗೂ ಸಿದ್ದಾಪುರ ಮಹೇಶ್ ಕೊಲೆ ಹತ್ಯೆ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ, ಬೆಂಗಳೂರಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಕೊಲೆ, ಕೊಲೆಯತ್ನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ರೌಡಿಶೀಟರ್ಗಳ ಚಲನವಲನದ ಮಾಹಿತಿ ಕಲೆ ಹಾಕುವಂತೆ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಯಾರು ಯಾವ ಕೆಲಸ ಮಾಡುತ್ತಿದ್ದಾರೆ, ಸದ್ಯ ಎಲ್ಲಿ ವಾಸವಾಗಿದ್ದಾರೆ? ರಿಯಲ್ ಎಸ್ಟೇಟ್ನಲ್ಲಿ ಭಾಗಿಯಾಗಿರುವ ರೌಡಿಶೀಟರ್ಗಳು ಯಾರು? ಯಾವ ರೌಡಿಶೀಟರ್ನ ಸಹಚರರು ತುಂಬಾ ಆ್ಯಕ್ಟೀವ್ ಅಗಿದ್ದಾರೆ? ಯಾವ ರೌಡಿಶೀಟರ್ ಹೆಸರಿನಲ್ಲಿ ಹವಾ ಮೇಂಟೇನ್ ಮಾಡ್ತಿದ್ದಾರೆ? ಅಂತೆಲ್ಲ ಸಂಪೂರ್ಣ ಮಾಹಿತಿ ಸಂಗ್ರಹಿಸುವಂತೆ ಇನ್ಸ್ಪೆಕ್ಟರ್ಗಳಿಗೆ ಸೂಚನೆ ನೀಡಲಾಗಿದೆ. ಗ್ಯಾಂಗ್ಗಳ ನಡುವೆ ಇರುವ ವೈರತ್ವದ ಕುರಿತು ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ರೌಡಿಶೀಟರ್ಗಳ ಚಲನವಲನ ಮೇಲೆ ಇನ್ಸ್ಪೆಕ್ಟರ್ಗಳು ಹದ್ದಿನಕಣ್ಣಿಟ್ಟಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ