ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹೆಣ್ಣೂರು ಗ್ರಾಮದಲ್ಲಿ ಇಂದು(ಫೆ.22) ಬೆಳಿಗ್ಗೆ ಹೃದಯ ವಿದ್ರಾವಕ ಘಟನೆಯೊಂದು ನಡೆದುಹೋಗಿದೆ. ಇದೆ ಗ್ರಾಮದ ನೇತ್ರಾವತಿ ಹಾಗೂ ಸೊಣ್ಣಪ್ಪ ದಂಪತಿಯ ಮನೆಯಲ್ಲಿ ಬೆಳಕು ಹರಿಯುವುದಕ್ಕೂ ಮುನ್ನ ಬೆಂಕಿಯ ಕೆನ್ನಾಲಿಗೆ ಉರಿಯುತ್ತಿತ್ತು. ಇದನ್ನು ಗಮನಿಸಿದ ಸ್ಥಳಿಯರು ಹತ್ತಿರ ಹೋಗಿ ನೋಡುತ್ತಿದ್ದಂತೆ ನೇತ್ರಾವತಿಯ ನೆತ್ತರು ಹರಿಯುತ್ತಿತ್ತು. ಪಕ್ಕದಲ್ಲೆ ಆಕೆಯ ಗಂಡ ಸೊಣ್ಣಪ್ಪ ನರಳಾಡುತ್ತಿದ್ದ ರೂಮ್ ನ ಬೆಡ್ ಮೇಲೆ ದಂಪತಿಯ ದೊಡ್ಡ ಮಗಳು 11 ವರ್ಷದ ಬಾಲಕಿ ವರ್ಷಾ ಬೆಂಕಿಗೆ ಬಲಿಯಾಗಿದ್ದಳು. ಅವಳ ಪಕ್ಕದಲ್ಲೆ ಆಕೆಯ ತಂಗಿ 9 ವರ್ಷದ ಸ್ನೇಹ ಸಹ ಹೆಣವಾಗಿದ್ದಳು. ಅಷ್ಟರಲ್ಲೆ ಸ್ಥಳಿಯರು ಆಗಮಿಸಿ ನೀರಿನಿಂದ ಬೆಂಕಿ ನಂದಿಸಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಇನ್ನು ತಕ್ಷಣ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ್ ಹಾಗೂ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಸೊಣ್ಣಪ್ಪನೆ ಪತ್ನಿಯನ್ನು ಹೊಡೆದು ಕೊಂದ ನಂತರ ಮಲಗಿದ್ದ ಮಕ್ಕಳ ಮೇಲೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಸೊಣ್ಣಪ್ಪನೂ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಾಯಾಳುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇತ್ತ ಮಗಳು ಹಾಗೂ ಮೊಮ್ಮಕ್ಕಳ ಸಾವಿನ ಸುದ್ದಿ ಅರಿತು ಸ್ಥಳಕ್ಕೆ ಬಂದ ನೇತ್ರಾವತಿಯ ತಂದೆ, ಗಂಡ ಹೆಂಡತಿ ಚನ್ನಾಗಿಯೆ ಇದ್ದರು. ಸೊಣ್ಣಪ್ಪನ ಅಣ್ಣ ತಮ್ಮಂದಿರ ಮಧ್ಯೆ ಜಮೀನು ವಿವಾದ ಇತ್ತು, ಗಂಡನ ಆಸ್ತಿಗಾಗಿ ನೇತ್ರಾವತಿ ಕೇಸ್ ಹಾಕಿದ್ದಳು. ಸೊಣ್ಣಪ್ಪ ಹಾಗೂ ಆತನ ಸಹೋದರರು ಸೇರಿಕೊಂಡು ನನ್ನ ಮಗಳು ಹಾಗೂ ಮೊಮ್ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಮೈಸೂರು: ಬುದ್ದಿವಾದ ಹೇಳಿದಕ್ಕೆ ಕಬಾಬ್ ಅಂಗಡಿ ಮಾಲೀಕನನ್ನೇ ಕೊಲೆ ಮಾಡಿದ ಧುರಳರು
ಅಸಲಿಗೆ ಮೃತ ನೇತ್ರಾವತಿಗೆ ಅನೈತಿಕ ಸಂಬಂಧಗಳು ಇದ್ದವಂತೆ, ಇದ್ರಿಂದ ಗಂಡ ಸೊಣ್ಣಪ್ಪ ಹಾಗೂ ಆಕೆಯ ಮದ್ಯೆ ಪ್ರತಿದಿನ ಗಲಾಟೆ ನಡೆಯುತ್ತಿತ್ತಂತೆ, ಜೊತೆಗೆ ಪೊಲೀಸ್ ಠಾಣೆ, ಕೋರ್ಟ್ ಕಚೇರಿಗಳಲ್ಲಿ ವ್ಯಾಜ್ಯ ನಡೆಯುತ್ತಿದೆ. ಇತ್ತಿಚೀಗೆ ತಂದೆನೇ ಮಗಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ ಎಂದು ಸ್ವತಃ ಹೆಂಡತಿಯೇ ಗಂಡನ ಮೇಲೆ ಪೊಲೀಸರಿಗೆ ಸುಳ್ಳು ದೂರು ನೀಡಿದ್ದಳಂತೆ. ಇದ್ರಿಂದ ಹತಾಶವಾಗಿ ಸೊಣ್ಣಪ್ಪ ಪತ್ನಿ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನ ಮಾಡಿರುವ ಶಂಕೆ ವ್ಯಕ್ತವಾಗಿದೆ.
ವರದಿ: ಭೀಮಪ್ಪ ಪಾಟೀಲ್ ಟಿವಿ9 ಚಿಕ್ಕಬಳ್ಳಾಪುರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:39 pm, Wed, 22 February 23