ಹಾಸನ: ಐಫೋನ್ ಆಸೆಗಾಗಿ ಕೊರಿಯರ್ ಬಾಯ್ನ ಬರ್ಬರ ಕೊಲೆ; ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು
ಜಿಲ್ಲೆಯ ಅರಸೀಕೆರೆ ನಗರದಲ್ಲಿ ಒಂದು ಸೆಕೆಂಡ್ ಹ್ಯಾಂಡ್ ಐಫೋನ್ ಆಸೆಗಾಗಿ ಕೊರಿಯರ್ ಡಿಲೇವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅಮಾಯಕ ಹುಡುಗನನ್ನ ಹತ್ಯೆ ಮಾಡಿದ್ದಾನೆ.
ಹಾಸನ: ಐಫೋನ್ ಆಸೆಗಾಗಿ ಕೊರಿಯರ್ ಬಾಯ್ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ. ಕೊರಿಯರ್ ಬಾಯ್ ಹೇಮಂತ್ ನಾಯಕ್ (23) ಎಂಬಾತ ಮೃತ ರ್ದುದೈವಿಯಾಗಿದ್ದು, ಕೊಲೆ ಮಾಡಿದ ಹೇಮಂತ್ ದತ್ತ (20)ನನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ(ಫೆ.19) ಬೆಳಿಗ್ಗೆ ನಗರದ ಲಕ್ಷ್ಮೀಪುರ ಬಡಾವಣೆಯ ಲೇಔಟ್ ಕಡೆಗೆ ವಾಕಿಂಗ್ ಬಂದಿದ್ದ ಜನರಿಗೆ ಪಕ್ಕದಲ್ಲೇ ಇದ್ದ ರೈಲ್ವೇ ಹಳಿ ಪಕ್ಕದಲ್ಲಿ ಅದೇನೋ ಬೆಂಕಿ ಹೊಗೆಯಾಡಿದಂತೆ ಕಂಡಿದೆ. ಇಷ್ಟೊತ್ತಲ್ಲಿ ರೈಲ್ವೆ ಹಳಿ ಬಳಿ ಇದೇನಪ್ಪಾ ಬೆಂಕಿ ಎಂದು ಕುತೂಹಲದಿಂದ ಹತ್ತಿರ ಹೋಗಿ ನೋಡಿದ ಜನರು ಶಾಕ್ ಆಗಿದ್ದಾರೆ. ಅಲ್ಲಿ ಗೋಣಿ ಚೀಲದಲ್ಲಿ ತುಂಬಿದ್ದ ಶವವೊಂದಕ್ಕೆ ಹಂತಕರು ಬೆಂಕಿಯಿಟ್ಟು ಎಸ್ಕೇಪ್ ಆಗಿದ್ದರು. ಅರಸೀಕೆರೆ ನಗರದ ಜನವಸತಿ ಪ್ರದೇಶದಲ್ಲೇ ನಡೆದು ಹೋಗಿರುವ ಇಂತಹದ್ದೊಂದು ಘಟನೆ ಕಂಡು ಇಡೀ ಜನರು ಬೆಚ್ಚಿಬಿದ್ದಿದ್ದರು.
ಕೂಡಲೇ ಅರಸೀಕರೆ ನಗರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿ ಬಂದಿದ್ದ ಪೊಲೀಸರು, ಅದು ರೈಲ್ವೆ ಇಲಾಖೆ ವ್ಯಾಪ್ತಿಯಾದ್ದರಿಂದ ಅವರಿಗೂ ಮಾಹಿತಿ ನೀಡಿ ರೈಲ್ವೆ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದರು. ಅಂದಾಜು 25ರಿಂದ 30 ವರ್ಷ ಪ್ರಾಯದ ಯುವಕನ ಮೃತದೇಹ ಅದಾಗಿರಬಹುದು ಎಂದು ಅಂದಾಜು ಮಾಡಿದ ಪೊಲೀಸರಿಗೆ ಮೃತದೇಹ ಬಹುತೇಕ ಸುಟ್ಟು ಹೋಗಿದ್ದರಿಂದ ಮುಖ ಯಾರದ್ದು ಎಂದು ಅಂದಾಜು ಆಗುತ್ತಿರಲಿಲ್ಲ. ಕೂಡಲೇ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಮೊದಲು ಕೊಲೆಯಾದ ಯುವಕ ಯಾರು ಎಂದು ಪತ್ತೆ ಹಚ್ಚಬೇಕಿತ್ತು, ಹಾಗಾಗಿಯೇ ಯಾರಾದ್ರು ಅರಸಿಕೆರೆ ನಗರ ಅಥವಾ ಸುತ್ತಮುತ್ತ ಪ್ರದೇಶದಲ್ಲಿ ಕಾಣೆಯಾಗಿದ್ದಾರೆಯೇ ಎನ್ನುವ ಮಾಹಿತಿ ಕಲೆ ಹಾಕಿದ್ರು, ಆಗ ಮೊದಲು ಗೊತ್ತಾಗಿದ್ದೇ ಅರಸೀಕೆರೆ ನಗರದಲ್ಲಿ ಇ ಕಾರ್ಟ್ ಸಂಸ್ಥೆ ಜೊತೆಗೆ ಟೈ ಅಪ್ ಆಗಿ ಕೊರಿಯರ್ ಡಿಲೇವರಿ ಬಾಯ್ ಆಗಿದ್ದ ಹೇಮಂತ್ ನಾಯಕ್.
ಇದನ್ನೂ ಓದಿ:ಐತಿಹಾಸಿಕ ಸಿದ್ದಾರೂಢ ರಥೋತ್ಸವ ಜಾತ್ರೆ ದಿನವೇ ಮನಬಂದಂತೆ ಕೊಚ್ಚಿ ಯುವಕನ ಕೊಲೆ
ಇತ ಫೆಬ್ರವರಿ 7ರಂದು ಕೊರಿಯರ್ ಶಾಫ್ ನಿಂದ ಕೊರಿಯರ್ಗಳನ್ನ ಪಡೆದು ಡಿಲೇವರಿ ಮಾಡೋದಾಗಿ ಹೋದವನು ಅಂದಿನಿಂದ ನಾಪತ್ತೆಯಾಗಿದ್ದ. ಕೊರಿಯರ್ಗಳು ಕೂಡ ಡಿಲೇವರಿಯಾಗಿರಲಿಲ್ಲ. ಈ ಬಗ್ಗೆ ಅರಸೀಕೆರೆ ನಗರ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಆಗಿತ್ತು. ಮೂಲತಃ ಅರಸೀಕೆರೆ ತಾಲ್ಲೂಕಿನ ಹಳೆಕಲ್ಲನಾಯಕನಹಳ್ಳಿಯ ಹೇಮಂತ್ ನಾಯಕ್ ಕಾಣೆಯಾಗಿದ್ದ. ಕೂಡಲೆ ಅವರ ಮನೆಯವರಿಗೆ ವಿಚಾರ ಮುಟ್ಟಿಸಿದ್ದ ಪೊಲೀಸರು ಸ್ಥಳಕ್ಕೆ ಬರಹೇಳಿ ಕೊಂಡಿದ್ರು. ಸ್ಥಳಕ್ಕೆ ಬಂದಿದ್ದ ಮನೆಯವರಿಗೆ ಮೇಲ್ನೋಟಕ್ಕೆ ಶವದ ಮೇಲಿದ್ದ ಬಟ್ಟೆ ಹೇಮಂತ್ ನಾಯಕ್ ನದ್ದೇ ಎನ್ನೋದು ಕಂಡು ಬಂದರೂ ಕೂಡ ಮುಖ ಗುರುತು ಸಿಗುತ್ತಿರಲಿಲ್ಲ.
ಮುಖ ಕೆಳಗಾಗಿ ಶವ ಬಿದ್ದಿದ್ದರಿಂದ ಮೈಸೂರಿನಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಙರು ಬರೋವರೆಗೆ ಮೃತದೇಹವನ್ನು ಯಾರು ಮುಟ್ಟೋ ಹಾಗೆ ಕೂಡ ಇರಲಿಲ್ಲ. ಹಾಗಾಗಿಯೇ ಇದು ಕಾಣೆಯಾದ ಹೇಮಂತ್ ನಾಯಕ್ನದ್ದೇ ಶವಾನ ಎನ್ನೋದು ಖಾತ್ರಿಯಾಗಿರಲಿಲ್ಲ. ಸಂಜೆ ವೇಳೆಗೆ ಬಂದ ತಜ್ಞರು ಮೃತದೇಹ ಪರಿಶೀಲನೆ ಮಾಡಿದಾಗ ಹೇಮಂತನ ಸಂಬಂಧಿಕರು ಇದು ಹೇಮಂತ್ ನಾಯಕ್ ಮೃತದೇಹವೇ ಎನ್ನೋದನ್ನ ಗುರ್ತಿಸಿದ್ರು. ಕಳೆದ ಎರಡು ತಿಂಗಳಿಂದ ಕೊರಿಯರ್ ಡಿಲೇವರಿ ಮಾಡಿಕೊಂಡಿದ್ದ. ತಂದೆ ತಾಯಿ ಇಲ್ಲದ ಅನಾಥ ಹುಡುಗ ಹೇಮಂತ್ ನಾಯಕ್ ಮನೆಗೆ ಆಸರೆಯಾಗಿದ್ದ.
ಫೆಬ್ರವರಿ 7ರಂದು ಬೆಳಿಗ್ಗೆ 9 ಗಂಟೆಗೆ ಮನೆಯೊಂದ ಹೊರಟು ಬಂದಿದ್ದವನು. ವಾಪಸ್ ಊರಿಗೆ ಹೋಗಿರಲಿಲ್ಲ. ಫೋನ್ ಮಾಡಿದ್ರು ಫೋನ್ ಸ್ವಿಚ್ ಆಫ್ ಆಗಿತ್ತು, ಎಲ್ಲೋ ಸ್ನೇಹಿತರ ಮನೆಗೆ ಹೋಗಿರಬೇಕು ಎಂದುಕೊಂಡಿದ್ದ ಸಂಬಂಧಿಕರು ಬೆಳಿಗ್ಗೆವರೆಗೂ ಕಾದಿದ್ರು, ಆದ್ರೆ ಮರುದಿನಕೂಡ ಹೇಮಂತ್ ನಾಯಕ್ ಕಾಣದಾದಾಗ ಬೇರೆ ದಾರಿಯಿಲ್ಲದೆ ಪೊಲೀಸರಿಗೆ ದೂರು ನೀಡಿದ್ರು, ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಕಾಣೆಯಾದ ಹೇಮಂತ್ ಪತ್ತೆ ಬಗ್ಗೆ ತನಿಖೆ ನಡೆಸುತ್ತಿರುವಾಗಲೇ ಫೆಬ್ರವರಿ 11ಕ್ಕೆ ಹೇಮಂತ್ ಶವ ಸಿಕ್ಕಿತ್ತು, ನೋಡಿದ ಕೋಡಲೆ ಗೊತ್ತಾಗುತ್ತಿತ್ತು ಹೇಮಂತ್ ನನ್ನ ಹತ್ಯೆ ಮಾಡಿ ಮೃತದೇಹಕ್ಕೆ ಬೆಂಕಿ ಹಚ್ಚಲಾಗಿದೆಯೆಂದು, ಯಾರೂ ಶತ್ರುಗಳೇ ಇಲ್ಲದ ಎಲ್ಲರೊಂದಿಗೂ ಸ್ನೇಹದಿಂದ ಇರ್ತಿದ್ದ ಇತ ತಾನಾಯಿತು ತನ್ನ ಕೆಲಸವಾಯಿತು ಎಂಬಂತಿದ್ದ ಹುಡುಗನನ್ನ ಹತ್ಯೆಮಾಡಿದ್ದು ಯಾರು ಎನ್ನೋ ಪ್ರಶ್ನೆ ಎಲ್ಲರನ್ನ ಕಾಡೋಕೆ ಶುರುವಾಗಿತ್ತು.
ಇದನ್ನೂ ಓದಿ:ದೊಡ್ಡಬಳ್ಳಾಪುರ: ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್
ಕೊಲೆಗಾರನ ಜಾಡು ಹಿಡಿದು ಆರೋಪಿಯನ್ನ ಬಂಧಿಸಿದ ಪೊಲೀಸರು
ಅಂದು ಡಿಲೇವರಿ ಮಾಡಲೆಂದು ಕೊಟ್ಟಿದ್ದ ಕೊರಿಯರ್ ಗಳ ಲಿಸ್ಟ್ ಕೈಯಲ್ಲಿ ಹಿಡಿದು ಫೀಲ್ಡಿಗಿಳಿದ ಪೊಲೀಸರಿಗೆ ಅಂದು ಹೇಮಂತ್ ನಾಯಕ್ ಕೊರಿಯರ್ ಆಫೀಸ್ ನಿಂದ ಪಾರ್ಸಲ್ಗಳನ್ನ ತೆಗೆದುಕೊಂಡು ಹೋಗಿ ಎರಡು ಕಡೆಗೆ ಕೊರಿಯರ್ ಡಿಲೇವರಿ ಮಾಡಿದ್ದ. ಆ ಎರಡು ಕಡೆ ಹೋಗಿ ವಿಚಾರಿಸಿದಾಗ ಆತ ಕೊರಿಯರ್ ಕೊಟ್ಟು ಹೋದ ಬಗ್ಗ ಮಾಹಿತಿ ನೀಡಿದ್ರು, ಆದ್ರೆ ಮೂರನೇ ಕೊರಿಯರ್ ಡಿಲೇವರಿ ಮಾಡಲು ಹೊರಟಿದ್ದ ನಂತರ ಹೇಮಂತ್ ನಾಯಕ್ ನಾಪತ್ತೆಯಾಗಿದ್ದ. ಕುತೂಹಲಗೊಂಡ ಪೊಲೀಸರು ಆ ಮೂರನೇ ಪಾರ್ಸಲ್ ಯಾರದ್ದೆಂದು ಗಮನಿಸಿದಾಗ ಅದು ಮೃತದೇಹ ಪತ್ತೆಯಾಗಿದ್ದ ಲಕ್ಷ್ಮೀಪುರ ಬಡಾವಣೆಯ ಹತ್ತಿರದ್ದೇ ಆಗಿತ್ತು.
ಅನುಮಾನಗೊಂಡು ಆ ಮನೆಯ ವಿಳಾಸ ಹುಡುಕಿ ಹೊರಟ ಪೊಲೀಸರಿಗೆ ಗೊತ್ತಾಗಿದ್ದು ಅದು ಹೇಮಂತ್ ದತ್ತ ಎಂಬ ಯುವಕನ ಮನೆ ವಿಳಾಸಕ್ಕೆ ಬಂದಿದ್ದ ಕೊರಿಯರ್ ಡಿಲೇವರಿಗೆ ಹೋಗಿದ್ದ ಹೇಮಂತ್ ಅದೇ ಸ್ಥಳದಿಂದ ಕಾಣೆಯಾಗಿದ್ದರು. ಹೇಮಂತ್ ನಾಯಕ್ ಮೊಬೈಲ್ ಕೂಡ ಇದೇ ವ್ಯಾಪ್ತಿಯಲ್ಲಿ ಸ್ವಿಚ್ ಆಫ್ ಆದ ಬಗ್ಗೆ ಮಾಹಿತಿ ಗೊತ್ತಾಗಿತ್ತು, ಕೂಡಲೆ ತಡಮಾಡದೇ ಪೊಲೀಸರು ಹೇಮಂತ್ ದತ್ತನನ್ನ ಕರೆದುಕೊಂಡು ತಮ್ಮದೇ ಸ್ಟೈಲಲ್ಲಿ ವಿಚಾರಣೆ ಮಾಡುತ್ತಿದ್ದಂತೆ ಒಂದೇ ಒಂದು ಸೆಕೆಂಡ್ ಹ್ಯಾಂಡ್ ಐಫೋನ್ ಆಸೆಗಾಗಿ ಅಮಾಯಕ ಹುಡುಗನ ಪ್ರಾಣ ತೆಗೆದ ಬಗ್ಗೆ ಸತ್ಯ ಒಪ್ಪಿಕಕೊಂಡಿದ್ದ. ಐಫೋನ್ಗಾಗಿ ನಡೆದ ಭೀಕರ ಹತ್ಯೆಯ ರಹಸ್ಯವನ್ನು ಬಿಚ್ಚಿಟ್ಟಿದ್ದು ಆರೋಫಿಯನ್ನ ಬಂಧಿಸಿ ಇದೀಗ ಪೊಲೀಸರು ಜೈಲಿಗಟ್ಟಿದ್ದಾರೆ.
ವರದಿ: ಮಂಜುನಾಥ್ ಕೆ.ಬಿ ಟಿವಿ9ಹಾಸನ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ