ಹಗರಿಬೊಮ್ಮನಹಳ್ಳಿ: ಕಾರ್-ಬೈಕ್ ಡಿಕ್ಕಿ ಸವಾರ ಸಾವು
ಹಗರಿಬೊಮ್ಮನಹಳ್ಳಿಯ ವೈದ್ಯ ರಾಜೇಶ್ ನಾಯ್ಕ್ ಅವರಿಗೆ ಸೇರಿದ ಕಾರು ಡಿಕ್ಕಿ ಹೊಡೆದ ಕಾರಣ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟರು
ಬಳ್ಳಾರಿ: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಲ್ಲಹುಣಸಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಹಗರಿಬೊಮ್ಮನಹಳ್ಳಿಯ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಅವರ ದೂರದ ಸಂಬಂಧಿ ಮತ್ತು ವೈದ್ಯ ರಾಜೇಶ್ ನಾಯ್ಕ್ ಅವರಿಗೆ ಸೇರಿದ ಕಾರು ಡಿಕ್ಕಿ ಹೊಡೆದ ಕಾರಣ ಶಂಕರಪ್ಪ ಗೊಲ್ಲರ್ (40) ಸ್ಥಳದಲ್ಲಿಯೇ ಮೃತಪಟ್ಟರು. ಮತ್ತೋರ್ವ ಸವಾರ ಬಸವರಾಜ್ ಎನ್ನುವವರಿಗೆ ಗಂಭೀರ ಗಾಯವಾಗಿದೆ. ಅವರನ್ನು ಕೊಪ್ಪಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಾಮರಾಜನಗರ ಗಡಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಕರ್ನಾಟಕದ ಕಾರೇಪಾಳ್ಯ ಗಡಿಯಿಂದ ತಮಿಳುನಾಡಿನ ಬಣ್ಣಾರಿವರೆಗೆ ರಾತ್ರಿ ಸಂಚಾರವನ್ನು ಈರೋಡ್ ಜಿಲ್ಲಾಧಿಕಾರಿ ನಿಷೇಧಿಸಿದ್ದಾರೆ. ಫೆ.10ರಿಂದಲೇ ಆದೇಶ ಜಾರಿಗೊಳಿಸುವಂತೆ ಚೆನ್ನೈ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಪುಣಜನೂರು ಚೆಕ್ ಪೋಸ್ಟ್ ಬಳಿ ಭಾರಿ ವಾಹನಗಳಿಗೆ ಸಂಜೆ 6 ರಿಂದ ಇತರ ವಾಹನಗಳಿಗೆ ರಾತ್ರಿ 9ರಿಂದ ಸಂಚಾರ ನಿಷೇಧ ವಿಧಿಸಲಾಗಿದೆ. ಬಿಆರ್ಟಿ ಹುಲಿರಕ್ಷಿತಾರಣ್ಯದ ಪುಣಜನೂರು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿವೆ.
ಗಂಗಾವತಿ: 200 ಚೀಲ ಅಕ್ಕಿ ವಶ ಗಂಗಾವತಿಯ ಎಪಿಎಂಸಿ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 200 ಚೀಲ ಪಡಿತರ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕೊಪ್ಪಳ ಉಪವಿಭಾಗಾಧಿಕಾರಿ ಬಸಣ್ಯಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಅಕ್ಕಿ ಸಾಗಿಸಲು ಬಳಸಿದ್ದ ಆಟೊವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಮಾರಾಟಕ್ಕೆ ಯತ್ನ: ಬಂಧನ ಶಿರಸಿ: ನಗರದ ಅಲೆಸರ ರಸ್ತೆಯಲ್ಲಿ ಗಾಂಜಾ ಮಾರಲು ಬಂದಿದ್ದ ಸಂತೋಷ್ ಲಮಾಣಿ, ಪರಶುರಾಮ ಮಲ್ಲೂರು ಎನ್ನುವವರನ್ನು ಪೊಲೀಸರು ಬಂಧಿಸಿ 458 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಗಾಂಜಾ ಸೇವನೆಯಿಂದ ಯುವಕರು ಹಾಳಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಶಿರಸಿ ಪೊಲೀಸರು ದಾಳಿ ಮಾಡಿದ್ದರು. ಬಂಧಿತರು ಹಾವೇರಿ ಸವಣೂರಿನ ಅಲ್ಲಿಪುರ ಗ್ರಾಮದವರು. ಮಾರಾಟ ಮಾಡಲು ತಂದಿದ್ದ 9000 ರೂಪಾಯಿ ಮೌಲ್ಯದ 458 ಗ್ರಾಂ ತೂಕದ ಗಾಂಜಾ ಪದಾರ್ಥವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: Crime Updates: ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ, ಪ್ರೇಮಿ ಜೊತೆ ಸೇರಿ ಗಂಡನ ಕೊಲೆ
ಇದನ್ನೂ ಓದಿ: Crime News: ಯುವತಿ ವಿಚಾರಕ್ಕೆ ವಿದ್ಯಾರ್ಥಿಗೆ ಚಾಕು ಇರಿತ, ಮೊಬೈಲ್ ಬಳಕೆ ಕಡಿಮೆ ಮಾಡಲು ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ