ಅವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ ರಾಮ ಲಕ್ಷ್ಮಣರಂತಿದ್ದ ಅಣ್ಣ ತಮ್ಮಂದಿರು. ಆದ್ರೆ ಆ ಅಣ್ಣ ತಮ್ಮಂದಿರ ನಡುವೆ ಬಂದ ಕಾರು ಮತ್ತು ಕೋಟಿ ಕೋಟಿ ಜಮೀನು ಇದೀಗ ಸಹೋದರರನ್ನೆ ದಾಯಾದಿಗಳನ್ನಾಗಿ ಮಾಡಿದ್ದು ಸಣ್ಣ ವಿಚಾರಕ್ಕೆ (car quarrel) ಶುರುವಾದ ಜಗಳ ಕೂಡಿ ಬೆಳೆದಿದ್ದ ಅಣ್ಣ ತಮ್ಮಂದಿರ ನಡುವೆ ಕೊಳ್ಳಿಯಿಟ್ಟಿಸಿದೆ. ಅದು ಯಾಕೆ ಅನ್ನೂದನ್ನ ನೀವೆ ನೋಡಿ. ಗ್ರಾಮದ ತುಂಬಾ ನೀರವ ಮೌನ ಆವರಿಸಿದೆ. ಜನರಿಂದ ತುಂಬಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಕವಿದಿದ್ದು ಮನೆ ಮಕ್ಕಳಲ್ಲೆ ಶೋಕಸಾಗರದಲ್ಲಿ ಮುಳುಗಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರನ್ನ ನಿಭಾಯಿಸಲು ಹರಸಾಹಸ ಪಟ್ಟಿದ್ದು ನೊಂದು ಬೆಂದಿದ್ದ ಮೃತದೇಹಕ್ಕೆ (murder) ಮುಕ್ತಿ ಕೊಡಿಸಲು ಹೆಣಗಾಡಿದ್ದಾರೆ. ಇನ್ನೂ ಇಷ್ಟೆಲ್ಲ ರಾದ್ಧಾಂತ ಗದ್ದಲ ಗಲಾಟೆಗೆ ಕಾರಣವಾಗಿದ್ದು ಇದೇ ಕಾರು ಅನ್ನೂದೆ ವಿಪರ್ಯಾಸ.
ಅಂದಹಾಗೆ ಮೇಲಿನ ಪೋಟೋದಲ್ಲಿರುವ ವ್ಯಕ್ತಿಯ ಹೆಸರು ವೆಂಕಟೇಶ್ ಮತ್ತು ಜಗದೀಶ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ (devanahalli taluk) ತಾಲೂಕಿನ ಗೋಕೆರೆ ಗ್ರಾಮದ ನಿವಾಸಿಗಳಾದ ಇವರಿಬ್ಬರೂ ಒಂದೇ ತಾಯಿಯ ಮಕ್ಕಳು. ಮೊದಲಿನಿಂದಲೂ ಜೊತೆಯಲ್ಲೆ ಆಡಿ ಬೆಳೆದಿದ್ದ ಇವರಿಬ್ಬರು ಕಷ್ಟಪಟ್ಟು ದುಡಿದು ಒಟ್ಟಾಗಿ ಒಂದು ಕಾರನ್ನ ಸಹ ಖರೀದಿ ಮಾಡಿದ್ರು.
ಆದ್ರೆ ಬೆಳೆದು ಮದುವೆಗಳಾಗ್ತಿದ್ದಂತೆ ಈ ಅಣ್ಣ ತಮ್ಮಂದಿರ ಮಧ್ಯೆಯೂ ಕಲಹ ಶುರುವಾಗಿ ಬೇರೆ ಬೇರೆಯಾಗಿದ್ದು, ಪ್ರತ್ಯೇಕವಾಗಿ ಸಂಸಾರ ನಡೆಸಿಕೊಂಡು ಹೋಗ್ತಿದ್ರು. ಆದ್ರೆ ಈ ನಡುವೆ ಸಹೋದರ ಜಗದೀಶ್ ತನ್ನ ಪತ್ನಿ ಕಡೆಯವರಿಗೆ ಕಾರು ನೀಡಿದ್ದ ಕಾರಣ ಅಣ್ಣ ವೆಂಕಟೇಶ್ ಕಾರನ್ನ ಕಿತ್ತುಕೊಂಡು ಬಂದು ಮನೆ ಬಳಿ ನಿಲ್ಲಿಸಿದ್ನಂತೆ. ಹೀಗಾಗಿ ಕಾರಿನ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಕಲಹ ಶುರುವಾಗಿ ಮಾತಿನಲ್ಲಿ ಶುರುವಾದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದೆ.
ಹೌದು ಕಾರು ನಮಗೆ ಸೇರಿದ್ದು ಬೇರೆಯವರಿಗೆ ಯಾಕೆ ಕೊಟ್ಟೆ ಅಂತ ಶುರುವಾದ ಜಗಳದ ವೇಳೆ ಅಣ್ಣ ತಮ್ಮಂದಿರ ನಡುವೆ ಮಾತಿನ ಚಕಮಕಿ ನಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಇನ್ನು ಈ ವೇಳೆ ಕೈನಲ್ಲಿದ್ದ ಪೆಟ್ರೋಲ್ ಅನ್ನ ವೆಂಕಟೇಶ್ ತಮ್ಮ ಜಗದೀಶ್ ಮೆಲೆ ಹಾಕಿ ಬೆಂಕಿ ಹಚ್ಚಿದ್ದು ಬೆಂಕಿಯಲ್ಲಿ ಜಗದೀಶ್ ಸುಟ್ಟು ನರಳಾಡಿದ್ದಾನೆ.
Also Read: ಜೀವನ ಅರಸಿ ಬೆಂಗಳೂರಿಗೆ ಬಂದಿದ್ದ ಸುರಪುರದ ದಂಪತಿ, ಅನೈತಿಕ ಸಂಬಂಧ ಶಂಕೆಯಿಂದ ಹೆಂಡತಿಯ ಹತ್ಯೆ ಮಾಡಿದನಾ ಪತಿ?
ಬೆಂಕಿಯಲ್ಲಿ ಜಗದೀಶ್ ಸುಡುತ್ತಿದ್ದರೂ ಸಹಾಯಕ್ಕೆ ಬಾರದ ಅಣ್ಣ ಹಾಗೂ ತಾಯಿ ಜಗದೀಶ್ ಪತ್ನಿಯನ್ನು ತಡೆಯಲು ಬಿಡದೆ ಹಿಡಿದುಕೊಂಡಿದ್ರು ಅಂತ ಮೃತನ ಕಡೆಯವರು ಆರೋಪಿಸಿದ್ದಾರೆ. ಜೊತೆಗೆ ಮೊದಲಿನಿಂದಲು ಅಣ್ಣ ತಮ್ಮಂದಿರ ನಡುವೆ ಇದ್ದ 3.5 ಎಕರೆ ಜಮೀನು ವಿಚಾರವಾಗಿ ಕಲಹ ನಡೆಯುತ್ತಿದ್ದು ಜಮೀನಿಗಾಗಿಯೆ ಪ್ರೀ ಪ್ಲಾನ್ ಮಾಡಿ ಜಗದೀಶನನ್ನು ಕೊಲೆ ಮಾಡಿದ್ದಾರೆ ಅಂತ ಮೃತನ ಪತ್ನಿ ಕಡೆಯವರು ಆರೋಪಿಸಿದ್ದಾರೆ.
ಅಲ್ಲದೆ ಮೃತ ಜಗದೀಶ್ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ ಆಸ್ತಿ ಹಾಗೂ ಮನೆಯಲ್ಲಿ ಪಾಲು ಕೊಡಿಸಿ ಅಂತ ಮೃತ ದೇಹದ ಅಂತ್ಯಸಂಸ್ಕಾರ ಮಾಡದೆ ಕುಟುಂಬಸ್ಥರು ಧರಣಿ ನಡೆಸಿದ್ರು. ಇನ್ನು ಈ ವೇಳೆ ಮಧ್ಯ ಪ್ರವೇಶಿಸಿದ ದೇವನಹಳ್ಳಿ ಪೊಲೀಸರು ಮೃತನ ಪತ್ನಿಗೆ ನ್ಯಾಯ ಕೊಡಿಸುವ ಭರವಸೆ ನೀಡಿ ಮೃತದೇಹದ ಅಂತ್ಯಸಂಸ್ಕಾರವನ್ನ ಮಾಡಿಸಿದ್ರು.
ಒಟ್ಟಾರೆ ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೂ ಮಾತಿನಂತೆ ಸಣ್ಣ ವಿಚಾರಕ್ಕೆ ಶುರುವಾದ ಜಗಳ ಒಡಹುಟ್ಟಿದವನು ಅನ್ನೂದೂ ನೋಡದೆ ಕೊಲೆ ಮಾಡಿದ್ದು ನಿಜಕ್ಕೂ ದುರಂತವೇ ಸರಿ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:38 am, Sat, 24 February 24