ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ ಪಿಎಫ್ಐ ಕಚೇರಿಗಳ ಮೇಲೆ ದಾಳಿ ಪ್ರಕರಣ, 14 ಮಂದಿ ಅರೆಸ್ಟ್: ಹೇಗಿತ್ತು ಗೊತ್ತಾ ಪೊಲೀಸರ ಪ್ರೀ ಪ್ಲಾನ್?
ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಪಿಎಫ್ಐ ಕಚೇರಿಗಳ ಮೆಲೆ ದಾಳಿ ನಡೆಸಿದ ಸಂದರ್ಭದಲ್ಲಿ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ. ಈ ಪೊಲೀಸ್ ಕಾರ್ಯಾಚರಣೆ ಹಿಂದಿನ ರಹಸ್ಯ ಟಿವಿ9ಗೆ ಲಭ್ಯವಾಗಿದೆ.

ಬೆಂಗಳೂರು: ನಗರದ ಕೆ.ಜಿ.ಹಳ್ಳಿ ಠಾಣೆ ಪೊಲೀಸರಿಂದ ಪಿಎಫ್ಐ (PFI) ಕಚೇರಿಗಳ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಒಟ್ಟು 14 ಮಂದಿಯನ್ನು ಬಂಧಿಸಿ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿಟ್ಟು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಗುರುವಾರ (ಸೆ.22) ರಾಜ್ಯದಲ್ಲಿ ನಡೆದ ಪೊಲೀಸರ ಕಾರ್ಯಾಚರಣೆಯ ಹಿಂದೆ ಒಂದು ರಹಸ್ಯ ಪ್ರೀ ಪ್ಲಾನ್ ಇದೆ. ಇದು ಟಿವಿ9ಗೆ ಲಭ್ಯವಾಗಿದೆ. ಎನ್ಐಎ ಜೊತಗೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದು ದಿನ ಮುಂಚೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹಿಟ್ ಲಿಸ್ಟ್ ಸಿದ್ದಪಡಿಸಲಾಗಿತ್ತು. ಅದರಂತೆ ಮರುದಿನ ಅಖಾಡಕ್ಕಿಳಿದ ಎನ್ಐಎ ಮತ್ತು ಪೊಲೀಸರು 14 ಜನರನ್ನು ಬಂಧಿಸಿದ್ದಾರೆ.
ಎನ್ಐಎ, ಇಡಿ ಸೇರಿದಂತೆ ವಿವಿಧ ತನಿಖಾ ತಂಡಗಳ ಕಾರ್ಯಾಚರಣೆ ಎಂದರೆ ಅದು ಗೌಪ್ಯವಾಗಿರುತ್ತದೆ. ದಾಳಿ ನಡೆಸಿದ ನಂತರವೇ ವಿಚಾರ ತಿಳಿದುಬರುತ್ತದೆ. ಅದರಂತೆ ಎನ್ಐಎ ಅಧಿಕಾರಿಗಳು ಸೆ.22ರಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐಗೆ ಸೇರಿದ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿತ್ತು. ಕರ್ನಾಟಕದ 20 ಮಂದಿ ಸೇರಿದ ದೇಶದಾದ್ಯಂತ ಒಟ್ಟು 106 ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಬೆಂಗಳೂರು ನಗರದ ಕೆ.ಜಿ.ಹಳ್ಳಿ ಪೊಲೀಸರು ಒಟ್ಟು 14 ಮಂದಿಯನ್ನು ಅರೆಸ್ಟ್ ಮಾಡಿದ್ದರು.
ಕೆಜಿ ಹಳ್ಳಿ ಪೊಲೀಸರಿಂದ ಪಿಎಫ್ಐ ವಿರುದ್ದ ಸೆ.21ರಂದು ಪ್ರಕರಣ ದಾಖಲಿಸಿ ಎನ್ಐಎ ಜೊತೆ ಕಾರ್ಯಾಚರಣೆ ನಡೆಸಿ 14 ಮಂದಿಯನ್ನು ಬಂಧಿಸಿದೆ. ಈ ಕಾರ್ಯಾಚರಣೆಗೂ ಮುನ್ನ ಅಂದರೆ ಸೆಪ್ಟೆಂಬರ್ 21ರಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಎನ್ಐಎ ಮತ್ತು ಕೇಂದ್ರ ಐಬಿ ಅಧಿಕಾರಿಗಳು ಸೇರಿ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕರ್ನಾಟಕದ ಹತ್ತೊಂಬತ್ತು ಜನರ ಲಿಸ್ಟ್ ಸಿದ್ಧಪಡಿಸಲಾಗಿದೆ. ಅದರಂತೆ ಸೆ.22ರಂದು ಅಖಾಡಕ್ಕಿಳಿದು 19 ಮಂದಿಯಲ್ಲಿ 14 ಮಂದಿಯನ್ನು ಬಂಧಿಸಲಾಗಿದೆ.
ಅಧಿಕಾರಿಗಳು ಸಿದ್ಧಪಡಿಸಿದ್ದ ಪಟ್ಟಿಯಲ್ಲಿರುವ 19 ಮಂದಿಯ ಹೆಸರು
A1 ನಾಸೀರ್ ಪಾಷಾ- ಬೆಂಗಳೂರು, A2 ಮನ್ಸೂರ್ ಅಹಮದ್ – ಬೆಂಗಳೂರು, A3 ಶೇಕ್ ಇಜಾಜ್ ಅಲಿ – ಕಲಬುರಗಿ, A4 ಮೊಹಮದ್ ಕಲಿಮುಲ್ಲಾ – ಮೈಸೂರು, A5 ಮೊಹಮ್ಮದ್ ಅಶ್ರಫ್ ಅಂಕಜಲ್ – ಮಂಗಳೂರು, A6 ಮೊಹಮದ್ ಶರೀಫ್ -ಸ ಮಂಗಳೂರು, A7 ಅಬ್ದುಲ್ ಖಾದೀರ್ ದಕ್ಷಿಣ ಕನ್ನಡದ ಪುತ್ತೂರು, A8 ಮೊಹಮ್ಮದ್ ತಪ್ಸೀರ್ – ದಕ್ಷಿಣ ಕನ್ನಡದ ಬಂಟ್ವಾಳ, A9 ಮೊಹಿಯುದ್ದಿನ್ – ಮಂಗಳೂರು, A10 ನವಾಜ್ ಕಾವುರ್ – ಮಂಗಳೂರು, A11 ಅಶ್ರಫ್ – ಮಂಗಳೂರು, A12 ಅಬ್ದುಲ್ ರಜಾಕ್ – ಪುತ್ತೂರು, A13 ಅಯುಬ್ ಕೆ – ಪುತ್ತೂರು, A14 ಶಾಹಿದ್ ಖಾನಗ – ಶಿವಮೊಗ್ಗ, A15 ತಾಹಿರ್ – ದಾವಣಗೆರೆ, A16 ಇಮಾದುದ್ದೀನ್ – ದಾವಣಗೆರೆ, A17 ಅಬ್ದುಲ್ ಅಜಿಜ್ ಅಬ್ದುಲ್ – ಶಿರಸಿ ಉತ್ತರ ಕನ್ನಡ, A18 ಮೌಸಿನ್ ಅಬ್ದುಲ್ ಶಾಕುರ್ – ಶಿರಸಿ ಉತ್ತರ ಕನ್ನಡ, A19 ಮೊಹಮ್ಮದ್ ಫಯಾಜ್ – ಗಂಗಾವತಿ ಕೊಪ್ಪಳ.
ಮಹತ್ವದ ಸಭೆಯಲ್ಲಿ 19 ಮಂದಿ ಆರೋಪಿಗಳ ಪಟ್ಟಿ ಸಿದ್ಧಪಡಿಸಿ ಅವರ ವಿಳಾಸ ಸಹಿತಿ ಮಾಹಿತಿ ಕಲೆಹಾಕಿಕೊಳ್ಳಲಾಗಿದೆ. ಈ ಯೋಜನೆಯಂತೆ ಸೆ.22 ರಂದು ಸಿಸಿಬಿ ಡಿಸಿಪಿ ಶರಣಪ್ಪ, ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ನೇತ್ರತ್ವದಲ್ಲಿ ಹತ್ತೊಂಬತ್ತು ತಂಡ ರಚಿಸಿ ದಾಳಿ ನಡೆಸಲಾಗಿತ್ತು. ಸೆ.21ರಂದು ಸಂಜೆ 4 ಗಂಟೆಗೆ ದಾಖಲು ಮಾಡಿದ್ದ ಪ್ರಕರಣ ಸಂಬಂಧ ಇದುವರೆಗೆ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




