ಕೋಲಾರ ಪೊಲೀಸರಿಗೆ ಕೊಲೆಗಾರನ ಬಗ್ಗೆ ಟಿಪ್ಸ್ ಕೊಟ್ಟಿದ್ದು ಚಿಪ್ಸ್ ಪ್ಯಾಕೆಟ್, ಆದರೆ ಅದನ್ನು ಮೂವರು ಖರೀದಿಸಿದ್ದರು! ಕೊನೆಗೆ ಹಂತಕನ ಹಿಡಿದ್ದಿದ್ದು ಹೇಗೆ?
ಜುಲೈ-10 ರ ಸೋಮವಾರ ಕೋಲಾರ ನಗರದ ಹೊರವಲಯದಲ್ಲಿ ಯುವಕನೊಬ್ಬನ ಬರ್ಬರ ಹತ್ಯೆಯಾಗಿತ್ತು, ಕೋಲಾರ ಎಪಿಎಂಸಿ ಬಡಳಿಯ ಲಕ್ಷ್ಮೀ ಬಾರ್ ಬಳಿ ಕೊಲೆಯಾಗಿತ್ತು. ಸದ್ಯ ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದಾರೆ.
ಕೋಲಾರ: ಕೂಲಿ ಮಾಡಿಕೊಂಡು ಕುಡಿತಕ್ಕೆ ಚಟಕ್ಕೆ ಬಿದ್ದಿದ್ದ ಯುವಕನೊಬ್ಬನೊಬ್ಬನ ಬರ್ಬರ ಹತ್ಯೆ (Murder Case) ನಡೆದಿತ್ತು. ಆರಂಭದಲ್ಲಿ ಅದೊಂದು ಅಪರಿಚಿತ ವ್ಯಕ್ತಿ ಕೊಲೆ ಎಂದೇ ಬಿಂಬಿತವಾಗಿದ್ದರೂ ಆನಂತರದಲ್ಲಿ ಕೊಲೆಯಾದವನ ಗುರುತು ಪತ್ತೆಯಾಗಿತ್ತು. ಆದರೆ ಕೊಲೆ ಮಾಡಿದ ಆರೋಪಿಯ ಪತ್ತೆಗೆ ಪೊಲೀಸರ ತನಿಖೆಗೆ ಸಹಾಯಮಾಡಿದ್ದು ಆರೋಪಿ ಖರೀದಿ ಮಾಡಿದ್ದ ಅದೊಂದು ಚಿಪ್ಸ್ ಪ್ಯಾಕೇಟ್ ಅನ್ನೋದು ವಿಶೇಷ.
ಜುಲೈ 10 ರಂದು ಕೋಲಾರ ನಗರದ ಹೊರವಲಯದಲ್ಲಿ ಯುವಕನೊಬ್ಬನ ಬರ್ಬರ ಹತ್ಯೆಯಾಗಿತ್ತು. ಕೋಲಾರ ಎಪಿಎಂಸಿ ಬಡಳಿಯ ಲಕ್ಷ್ಮೀ ಬಾರ್ ಬಳಿ ಈ ಕೊಲೆ ನಡೆದಿತ್ತು. ಕೊಲೆಯಾಗಿದ್ದ ಯುವಕನ ಗುರುತು ಪತ್ತೆಗೆ ಇಳಿದ ಪೊಲೀಸರಿಗೆ ಕೊಲೆಯಾದವನು ಕೋಲಾರದ ಶಾಹೀದ್ ನಗರದ ನಿವಾಸಿ ಅಮೀರ್ ಖಾನ್ ಅಲಿಯಾಸ್ ತನು (22) ಎಂದು ತಿಳಿದು ಬಂದಿತ್ತು.
ಅಮೀರ್ ಖಾನ್ ಕೂಲಿ ಕೆಲಸ ಮಾಡಿಕೊಂಡು ಕುಡಿತಕ್ಕೆ ದಾಸನಾಗಿದ್ದವನು. ಹೆತ್ತವರಿಗೆ ಅಷ್ಟೇನು ಹತ್ತಿರವಿಲ್ಲದೆ ತಾನು ದುಡಿದ ಹಣವನ್ನು ಬಾರ್ಗೆ ಸುರಿದು ಖಾಲಿ ಮಾಡಿಕೊಂಡು ಬರುತ್ತಿದ್ದನು. ಇನ್ನು ಮನೆಯವರು ಏನಾದರು ಪ್ರಶ್ನೆ ಮಾಡಿದರೆ ಮನೆವಯರ ಮೇಲೂ ದೌರ್ಜನ್ಯ ಮಾಡುತ್ತಿದ್ದ.
ಈತನ ಕೊಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೋಲಾರ ನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿ ಚಲನ ವಲನ ಕುರಿತು ಕುಟುಂಬಸ್ಥರಿಗೆ ಅಷ್ಟೇನು ಗೊತ್ತಿರಲಿಲ್ಲ. ಆ ಕಾರಣಕ್ಕಾಗಿ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಾಗ ಪೊಲೀಸರಿಗೆ ಸಹಕಾರ ನೀಡಿದ್ದು ಬಾರ್ನಲ್ಲಿ ಆರೋಪಿ ಖರೀದಿ ಮಾಡಿದ್ದ ಒಂದು ಚಿಪ್ಸ್ ಪ್ಯಾಕೇಟ್.
ಜುಲೈ 10 ರಂದು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ನಗರ ಠಾಣಾ ಪೊಲೀಸರು ಕೊಲೆಗೂ ಮುನ್ನಾ ಕೊಲೆಯಾದವನು ಹಾಗೂ ಕೊಲೆ ಮಾಡಿದವರು ಇಬ್ಬರೂ ಸ್ಥಳದಲ್ಲಿ ಕುಳಿತು ಕಂಠಪೂರ್ತಿ ಕುಡಿದಿದ್ದರು ಅನ್ನೋದು ಸ್ಥಳ ಪರಿಶೀಲನೆಯಿಂದ ತಿಳಿದಿತ್ತು. ಇನ್ನು ಕೊಲೆಯಾದವನ ಮೊಬೈಲ್ನಿಂದ ಯಾವುದೇ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಹಾಗಾಗಿ ಪೊಲೀಸರು ಕೊಲೆಯಾದವನ ಜೊತೆ ಯಾರಿದ್ದರು ಅನ್ನೋದನ್ನ ಹುಡುಕಲು ಕೊಲೆಯಾದ ಸ್ಥಳದ ಸುತ್ತಮುತ್ತ ಇದ್ದ ಬಾರ್ಗಳ ಸಿಸಿಟಿವಿ ದೃಷ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಚಿಕ್ಕಪ್ಪನ ಮಗ; ವರನ ಸಹೋದರನನ್ನೇ ಹತ್ಯೆಗೈದ ಯುವತಿ ಕುಟುಂಬಸ್ಥರು
ಈ ವೇಳೆ ಸ್ಥಳದಲ್ಲಿ ಪೊಲೀಸರಿಗೆ ಸಿಕ್ಕಿದ್ದ ಖಾಲಿ ಎಣ್ಣೆ ಪ್ಯಾಕೇಟ್ ಹಾಗೂ ಅರ್ಧಂಬರ್ಧ ತಿಂದು ಬಿಟ್ಟಿದ್ದ ಚಿಪ್ಸ್ ಪ್ಯಾಕೇಟ್ ಅನ್ನು ತೆಗೆದುಕೊಂಡು ಹುಡುಕಲು ಶುರುಮಾಡಿದ ಪೊಲೀಸರು ಎಣ್ಣೆ ಪ್ಯಾಕೇಟ್ ಮೇಲಿದ್ದ ಬ್ಯಾಚ್ ನಂಬರ್ ಆಧರಿಸಿ ಬಾರ್ ಯಾವುದು ಅನ್ನೋದನ್ನ ಪತ್ತೆಹಚ್ಚಲಾಯಿತು. ಆದರೆ ಅದೇ ಬಾರ್ನಲ್ಲಿ ಎಣ್ಣೆ ಜೊತೆಗೆ ಚಿಪ್ಸ್ ಖರೀದಿ ಮಾಡಿದ್ದವರು ಮಾತ್ರ ಕೆಲವೇ ಜನ. ಹಾಗಾಗಿ ಅಂದು ಎಣ್ಣೆಯ ಜೊತೆಗೆ ಚಿಪ್ಸ್ ಖರೀದಿ ಮಾಡಿದ್ದ ಮೂರು ಜನರು ಯಾರು ಅನ್ನೋದನ್ನ ಬಾರ್ನಲ್ಲಿದ್ದ ಸಿಸಿಟಿವಿಯಲ್ಲಿ ಪರಿಶೀಲನೆ ಮಾಡಲಾಯಿತು.
ಅದರಂತೆ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿದೆ. ಆದರೆ ಆರೋಪಿಯ ಜಾಡು ಹಿಡಿಯುವಷ್ಟರಲ್ಲಿ ಆತ ಊರು ಬಿಟ್ಟು ತಲೆ ಮರೆಸಿಕೊಂಡಿರುವುದು ತಿಳಿದು ಬಂದಿತ್ತು. ಆರೋಪಿ ಕೊಲೆ ಮಾಡಿ ಬೆಂಗಳೂರಿಗೆ ಹೋಗಿರುವುದು ತಿಳಿದ ಪೊಲೀಸರು ಅವನು ವಾಪಸ್ ಬರುವವರೆಗೆ ಕಾದಿದ್ದರು. ಸೋಮವಾರ ರಾತ್ರಿ ವಾಪಸ್ ಊರಿಗೆ ಬರುತ್ತಿದ್ದಂತೆ ಆತನನ್ನು ಕರೆತಂದು ಪೊಲೀಸರ ಸ್ಟೈಲ್ನಲ್ಲಿ ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿದ್ದಾಗಿ ಷಹಿಂಶಾ ನಗರ ನಿವಾಸಿ ಅಸ್ಲಂಪಾಷಾ ಒಪ್ಪಿಕೊಂಡಿದ್ದಾನೆ.
ಅಮೀರ್ ಖಾನ್ಗೆ ಸ್ನೇಹಿತನ ಹೆಂಡತಿಯ ಮೇಲೆ ಕಣ್ಣು
ಪೊಲೀಸರ ಕೈಗೆ ಸೆರೆಸಿಕ್ಕ ಕೊಲೆ ಆರೋಪಿ ತನಿಖೆ ವೇಳೆ ತಾನು ಹತ್ಯೆ ಮಾಡಿದ್ದ ಹಿಂದಿನ ಅಸಲಿಯತ್ತನ್ನು ಬಾಯಿಬಿಟ್ಟಿದ್ದಾನೆ. ಅಮೀರ್ ಖಾನ್ ಹಾಗೂ ಅಸ್ಲಂಪಾಷಾ ಇಬ್ಬರೂ ಸ್ನೇಹಿತರು. ಇಬ್ಬರೂ ನಿತ್ಯ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಇಬ್ಬರೂ ಒಟ್ಟಿಗೆ ಕುಡಿಯುತ್ತಿದ್ದರು. ಹೀಗಿರುವಾಗಲೇ ಅಮೀರ್ ಖಾನ್, ಅಸ್ಲಂ ಪಾಷಾನ ಹೆಂಡತಿಯ ಮೇಲೆ ಕಣ್ಣಾಕಿದ್ದ, ಅಷ್ಟೇ ಅಲ್ಲದೆ ಅಸ್ಲಂಪಾಷಾ ಹೆಂಡತಿಯನ್ನು ಚುಡಾಯಿಸುವುದು, ಅವಳನ್ನು ಅಕ್ರಮಕ್ಕೆ ಪ್ರಚೋದನೆ ಮಾಡುವುದು ಮಾಡುತ್ತಿದ್ದ. ಈ ಬಗ್ಗೆ ಎಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಅಮಿರ್ ಖಾನ್ ತನ್ನ ಕೆಲಸ ಮುಂದುವರೆಸಿದ್ದ. ಇದರಿಂದ ಕೋಪಗೊಂಡಿದ್ದ ಅಸ್ಲಂಪಾಷಾ ಭಾನುವಾರ ರಾತ್ರಿ ಎಂದಿನಂತೆ ಕುಡಿಯಲು ಕರೆದುಕೊಂಡು ಹೋಗಿ ಅಮೀರ್ ಖಾನ್ನನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಪ್ರಕರಣ ಬೇಧಿಸಿದ ಪೊಲೀಸರಿಗೆ ಎಸ್ಪಿಯಿಂದ ಪ್ರಶಂಸೆ
ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಕೋಲಾರ ನಗರ ಠಾಣೆಯ ಇನ್ಸ್ಪೆಕ್ಟರ್ಗಳಾದ ಭೈರರಾಮಪ್ಪ, ಹರೀಶ್, ಹಾಗೂ ಇವರಿಗೆ ಮಾರ್ಗದರ್ಶನ ನೀಡಿದ ಡಿವೈಎಸ್ಪಿ ಮುರಳೀಧರ್ ಹಾಗೂ ಸಿಬ್ಬಂದಿಗೆ ಕೋಲಾರ ಎಸ್ಪಿ ನಾರಾಯಣ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಕೊಲೆಯಾದ ಆರೋಪಿ ಕುಡಿತಕ್ಕೆ ದಾಸನಾಗಿ ಅಷ್ಟೊತ್ತಿಗಾಗಲೇ ಕುಟುಂಬಕ್ಕೆ ಭಾರವಾಗಿ ಹೋಗಿದ್ದ, ಈ ನಡುವೆ ಅವನು ತನ್ನ ಸ್ನೇಹಿತನ ಸಂಸಾರವನ್ನು ಹಾಳು ಮಾಡಲು ಹೊಂಚು ಹಾಕಿದ್ದ. ಎಷ್ಟು ಬುದ್ಧಿ ಹೇಳಿದರೂ ಕೇಳದ ಸ್ನೇಹಿತ ತನ್ನ ಸಂಸಾರವನ್ನು ಉಳಿಸಿಕೊಳ್ಳಲು ತನ್ನ ಸ್ನೇಹಿತನನ್ನು ಕೊಲೆ ಮಾಡಿ ತಾನು ಕೊಲೆಗಾರನಾಗಿದ್ದು ಮಾತ್ರ ವಿಪರ್ಯಾಸ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Thu, 13 July 23