ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪತ್ತೆಯಾಗುತ್ತಿದೆ ಕೋಟಿ ಕೋಟಿ ನಗದು; ಇಂದು ಎಲ್ಲೆಲ್ಲಿ ಏನೇನು ಎಷ್ಟೆಷ್ಟು ಸಿಕ್ತು ನೋಡಿ

|

Updated on: Mar 24, 2023 | 6:14 PM

ವಿಜಯನಗರ, ಯಾದಗಿರಿ, ವಿಜಯಪುರ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಪೊಲೀಸ್ ಕಾರ್ಯಾಚರಣೆಯಲ್ಲಿ ನಗದು, ಸೀರೆ, ಗಾಂಜಾ ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಅಕ್ಕಿ, ಮಧ್ಯಾಹ್ನ ಕಂತೆ-ಕಂತೆ ಹಣ ವಶಕ್ಕೆ ಪಡೆಯಲಾಗಿದೆ.

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪತ್ತೆಯಾಗುತ್ತಿದೆ ಕೋಟಿ ಕೋಟಿ ನಗದು; ಇಂದು ಎಲ್ಲೆಲ್ಲಿ ಏನೇನು ಎಷ್ಟೆಷ್ಟು ಸಿಕ್ತು ನೋಡಿ
ಪೊಲೀಸರು ವಶಕ್ಕೆ ಪಡೆದ ಸೀರೆಗಳು ಮತ್ತು ಜಪ್ತಿ ಮಾಡಿದ ಹಣ
Follow us on

ಚಿಕ್ಕಮಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ಕೋಟಿ ಕೋಟಿ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಇಂದು (ಮಾರ್ಚ್ 24) ಚಿಕ್ಕಮಗಳೂರು, ವಿಜಯನಗರ, ವಿಜಯಪುರ ಯಾದಗಿರಿ ಜಿಲ್ಲೆಗಳಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸಾಗಾಟ ಮಾಡುತ್ತಿದ್ದ ನಗದು, ಸೀರೆ, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಕಾಫಿನಾಡಲ್ಲಿ ಚಿಕ್ಕಮಗಳೂರಿನಲ್ಲಿ ಮಾದರಿ ನೀತಿ ಸಂಹಿತೆಯಲ್ಲೇ ಖಾಕಿಗಳ ಭರ್ಜರಿ ಬೇಟೆಯಾಡಿದ್ದು, ಬೆಳಿಗ್ಗೆ ಅಕ್ಕಿ, ಮಧ್ಯಾಹ್ನದ ವೇಳೆ ಕಂತೆ-ಕಂತೆ ಹಣ ವಶಕ್ಕೆ ಪಡೆಯಲಾಗಿದೆ. ಕಾರಿನಲ್ಲಿ ಶಿವಮೊಗ್ಗದಿಂದ ತರೀಕೆರೆ ಕಡೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 3.50 ಲಕ್ಷ ನಗದನ್ನು ತರೀಕೆರೆ ತಾಲೂಕಿನ ಎಂ.ಸಿ. ಕ್ಯಾಂಪ್​ನಲ್ಲಿ ವಶಕ್ಕೆ ಪಡೆಯಲಾಗಿದೆ. ತರೀಕೆರೆ ಚುನಾವಣಾ ಅಧಿಕಾರಿಗಳು ನಗದು ಜಪ್ತಿ ಮಾಡಿ ಲಕ್ಕವಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೈಕ್​ನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 5 ಲಕ್ಷ ನಗದು ಜಪ್ತಿ

ವಿಜಯನಗರ: ಬೈಕ್​ನಲ್ಲಿ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 5 ಲಕ್ಷ ನಗದನ್ನು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಚೆಕ್​ಪೋಸ್ಟ್​ನಲ್ಲಿ ವಶಕ್ಕೆ ಪಡೆಯಲಾಗಿದೆ.​ ಸಂತೋಷ್ ಎಂಬ ವ್ಯಕ್ತಿ ಕೊಟ್ಟೂರಿನ ಫೈನಾನ್ಸ್​ನಿಂದ ದಾಖಲೆ ಇಲ್ಲದ 5 ಲಕ್ಷ ಹಣವನ್ನು ತನ್ನ ಬೈಕ್​ನಲ್ಲಿ ದಾವಣಗೆರೆಗೆ ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬೈಕ್ ತಡೆದು ಪರಿಶೀಲನೆ ನಡೆಸಿದಾಗ ನಗದು ಪತ್ತೆಯಾಗಿದ್ದು, 5 ಲಕ್ಷ ಹಣ ಹಾಗೂ ಬೈಕ್ ಅನ್ನು ಜಪ್ತಿ ಮಾಡಿ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮವಾಗಿ ಸಾಗಿಸುತಿದ್ದ ಸೀರೆಗಳು ವಶಕ್ಕೆ

ಯಾದಗಿರಿ: ದಾಖಲೆ ಇಲ್ಲದೆ ಹಣ ಮತ್ತು ಸೀರೆಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ಕು ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರು ಹಣ, ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ. ಸೀರೆಗಳನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದ ಶಹಾಪುರ ಪೋಲಿಸರು, ಶಹಾಪುರ‌ ತಾಲೂಕಿನ ಕೊಳ್ಳೂರು (ಎಂ) ಚೆಕ್ ಫೋಸ್ಟ್ ಬಳಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಶಹಾಪುರ‌ದಿಂದ ರಾಯಚೂರಿನ ದೇವದುರ್ಗಕ್ಕೆ ಸಾಗಿಸಲಾಗುತ್ತಿದ್ದ 40 ಸೀರೆಗಳನ್ನ ವಶಕ್ಕೆ ಪಡೆಯಲಾಗಿದೆ.

ಇನ್ನು, ಪ್ರವೀಣ ಎಂಬಾತ ಅಕ್ರಮವಾಗಿ ಸೀರೆಗಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಭೀಮರಾಯನಗುಡಿ ಠಾಣಾ ಪೊಲೀಸರು 242 ಅಕ್ರಮ ಸೀರೆಗಳನ್ನು ಜಪ್ತಿ ಮಾಡಿದ್ದಾರೆ. ರಾಮದುರ್ಗದಿಂದ ಕಲಬುರಗಿಗೆ ಸೀರೆಗಳನ್ನು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಸಂತೋಷ್​ನನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ಶಿವರಾಜ ಎಂಬಾತ ದೇವದುರ್ಗದಿಂದ ಕಲಬುರಗಿಗೆ ಅಕ್ರಮ ಹಣ ಸಾಗಾಟ ಮಾಡುತ್ತಿದ್ದ ವಿಚಾರ ತಿಳದಿ ಭೀಮರಾಯನಗುಡಿ ಪೊಲೀಸರು, ಶಹಾಪುರ ತಾಲೂಕಿನ ಮೂಡಬೂಳ ಚೆಕ್ ಪೊಸ್ಟ್​ನಲ್ಲಿ 3 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಮತ್ತೆ ಕಂತೆ ಕಂತೆ ಹಣ ಪತ್ತೆ: 1 ಲಕ್ಷಕ್ಕೂ ಹೆಚ್ಚು ಹಣ ಸೀಜ್

ಮಾತ್ರವಲ್ಲದೆ, ಮುದ್ನಾಳ್ ಕ್ರಾಸ್ ಬಳಿ ಯಾದಗಿರಿ ನಗರ ಠಾಣೆಯ ಪೋಲಿಸರು ಸುಮಾರು 3.50 ಲಕ್ಷ ರೂ. ಮೌಲ್ಯದ 500 ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ. ಕಲಬುರಗಿಯಿಂದ ಆಂಧ್ರಪ್ರದೇಶಕ್ಕೆ ಸೀರೆಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು, ಟಾಟಾ ಏಸ್ ವಾಹನವನ್ನು ತಡೆದು ಪರಿಶೀಲಿಸಿದಾಗ ಸೀರೆಗಳು ಪತ್ತೆಯಾಗಿವೆ. ಸದ್ಯ ಯಾದಗಿರಿ‌ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಾಗಾಟ ಮಾಡುತ್ತಿದ್ದ ನಗದು ಹಾಗೂ ಚಿನ್ನ ವಶಕ್ಕೆ

ವಿಜಯಪುರ: ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ವಿಜಯಪುರ ನಗರದ ಹೊರ ಭಾಗದಲ್ಲಿನ ಜಮಖಂಡಿ ರಸ್ತೆಯಲ್ಲಿ ನಡೆದಿದೆ. ಅಕ್ರಮವಾಗಿ ನಗದು ಚಿನ್ನಾಭರಣ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಗಾಂಧಿಚೌಕ್ ಠಾಣಾ ಪೊಲೀಸರು ಕಾರೊಂದನ್ನು ತಡೆದು ಪರಿಶೀಲಿಸಿದಾಗ 10.30 ಲಕ್ಷ ರೂಪಾಯಿ ನಗದು ಮತ್ತು 60 ಗ್ರಾಮ್ ಚಿನ್ನಾಭರಣ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ನಡೆಸಿದಾಗ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿರುವುದು ತಿಳಿದುಬಂದ ಹಿನ್ನೆಲೆ ಕಾರು ಚಾಲಕ ನರೇಂದ್ರ ಎಂಬ ವ್ಯಕ್ತಿಯನ್ನು ಬಂಧಿಸಿ ನಗದು ಆಭರಗಳನ್ನು ಜಪ್ತಿ ಮಾಡಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Fri, 24 March 23