ಗದಗ ಜಿಲ್ಲೆಯಾದ್ಯಂತ ಪೊಲೀಸರ ಭರ್ಜರಿ ಕಾರ್ಯಾಚರಣೆ; ಕಂತೆ ಕಂತೆ ಹಣ, ತಂಬಾಕು ಜಪ್ತಿ
ಗದಗ ಶಹರದ ಮುಳಗುಂದ ರಸ್ತೆಯಲ್ಲಿ ಇರುವ ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 15 ಲಕ್ಷ ರೂ. ಪತ್ತೆಯಾಗಿದೆ.
ಗದಗ: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election) ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ಗಳಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. ಜಿಲ್ಲಾಧಿಕಾರಿ ವೈಶಾಲಿ ಮೇಡಂ, ಎಸ್ಪಿ ಬಿ. ಎಸ್ ನೇಮಗೌಡ ಅವರ ಮಾರ್ಗದರ್ಶನದಲ್ಲಿ, ವಿವಿಧ ಚೆಕ್ ಪೋಸ್ಟ್ ಸಿಬ್ಬಂದಿಯ ಚಾಣಾಕ್ಷತನದಿಂದ ದಾಖಲೆ ಇಲ್ಲದ 500 ರೂಪಾಯಿ ಮುಖ ಬೆಲೆಯ ಕಂತೆ ಕಂತೆ ಹಣ. ಲಕ್ಷಾಂತರ ಮೌಲ್ಯದ ತಂಬಾಕು ಸಿಕ್ಕಿದೆ. ಗದಗ ಶಹರದ ಮುಳಗುಂದ ರಸ್ತೆಯಲ್ಲಿ ಇರುವ ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 15 ಲಕ್ಷ ರೂ. ಪತ್ತೆಯಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಹುಲಗೂರಿನಿಂದ ದೇವದುರ್ಗಕ್ಕೆ ಹೊರಟಿದ್ದ ಕಾರಿನಲ್ಲಿ ಈ ಹಣ ಪತ್ತೆಯಾಗಿದ್ದು, ಈ ಕುರಿತು ಟಿರ್ವಿಗೆ ಗದಗ ಜಿಲ್ಲಾಧಿಕಾರಿ ವೈಶಾಲಿ, ಎಸ್ಪಿ ಬಿ ಎಸ್ ನೇಮಗೌಡ ಅವ್ರು ಮಾಹಿತಿ ನೀಡಿದ್ದಾರೆ. ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಶಿರಹಟ್ಟಿ ಹಾಗೂ ಮುಂಡರಗಿ ಲಕ್ಷಾಂತರ ಮೌಲ್ಯದ ತಂಬಾಕು ಪತ್ತೆ
ಇನ್ನೊ ಪ್ರತೇಕ ಎರಡು ಪ್ರಕರಣದಲ್ಲಿ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ಚೆಕ್ ಪೋಸ್ಟ್ಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ತಂಬಾಕು ಸಿಕ್ಕಿದೆ. ಗದಗನಿಂದ ಮುಂಡರಗಿ ಮಾರ್ಗವಾಗಿ ಕೊಪ್ಪಳ ಜಿಲ್ಲೆಯ ಕಡೆ ಹೊರಟಿದ್ದ ಗೂಡ್ಸ್ ವಾಹನದಲ್ಲಿ ಸೂಕ್ತ ದಾಖಲೆ ಇಲ್ಲದ 1ಲಕ್ಷ 84 ಸಾವಿರ ರೂ. ಮೌಲ್ಯದ ತಂಬಾಕು ಜಪ್ತಿ ಮಾಡಲಾಗಿದ್ದು, ಶಿರಾಜ್ ನಾಗರಕಟ್ಟಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ರಮೇಶ್ ಜಾರಕಿಹೊಳಿ ಆಪ್ತನ ಭಾವಚಿತ್ರವಿರುವ ಟಿಫಿನ್ ಬಾಕ್ಸ್‌ಗಳ ಜಪ್ತಿ
ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಚೆಕ್ ಪೋಸ್ಟ್ನಲ್ಲಿ ಕೂಡ 1ಲಕ್ಷ 10 ಸಾವಿರ ರೂ. ಮೌಲ್ಯದ ತಂಬಾಕು ಸಿಕ್ಕಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಿಂದ ಶಿರಹಟ್ಟಿ ಕಡೆ ಈ ತಂಬಾಕು ತುಂಬಿದ ರಿಕ್ಷಾ ಬರುತ್ತಿತ್ತು ಎನ್ನಲಾಗಿದೆ. ಶ್ಯಾಮ್ ನವಲೆ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಯುತ್ತಿದೆ.
ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವಾ ಮದ್ಯ ವಶ
ಉತ್ತರ ಕನ್ನಡ: ಜಿಲ್ಲೆ ಕಾರವಾರ ತಾಲೂಕಿನ ಹೋಟೆಗಾಳಿ ಗ್ರಾಮ ಸಮೀಪದ ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ. ಹೋಟೆಗಾಳಿಯ ಆನಂದ ಮಾಳ್ಸೇಕರ್, ಸತ್ಯವಿಜಯ ಮಾಳ್ಸೇಕರ್, ಮನೋಜ ಕೋಳಂಬಕರ್ ಬಂಧಿತ ಆರೋಪಿಗಳು. ಅಬಕಾರಿ ಉಪಾಧೀಕ್ಷಕ ಬಸವರಾಜ್, ನಿರೀಕ್ಷಕ ದಯಾನಂದ, ಉಪನಿರೀಕ್ಷಕ ಎಂ.ಎಂ.ನಾಯ್ಕ ತಂಡದಿಂದ ದಾಳಿ ನಡೆದಿತ್ತು. ಈ ವೇಳೆ 89.280 ಲೀ ಗೋವಾ ಮದ್ಯ, 305.500 ಲೀ ಗೋವಾ ಪೆನ್ನಿ, 120 ಲೀ ಗೋವಾ ಬಿಯರ್, ಸುಮಾರು 1.88 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರತ್ಯೇಕ 3 ಪ್ರಕರಣಗಳು ದಾಖಲಾಗಿವೆ.
ಮತದಾರಿಗೆ ಹಂಚಲು ಕೊಂಡೊಯ್ಯುತ್ತಿದ್ದ ಸೀರೆಗಳು, ಲಕ್ಷ ಲಕ್ಷ ಹಣ ಜಪ್ತಿ
ಬೆಳಗಾವಿ: ಮತದಾರಿಗೆ ಹಂಚಲು ಕೊಂಡೊಯ್ಯುತ್ತಿದ್ದ 16 ಲಕ್ಷ ಮೌಲ್ಯದ ಸೀರೆಗಳನ್ನು ಚಿಕ್ಕೋಡಿ ತಾಲೂಕಿನ ಸದಲಗಾ ದತ್ತವಾಡ ಚೆಕ್ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಸದಲಗಾ, ದತ್ತವಾಡ, ರಾಯಬಾಗ ಕ್ಷೇತ್ರದಲ್ಲಿ ಹಂಚಲು ಸೀರೆಗಳನ್ನು ಕೊಂಡೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ. ವಾಹನ ಚಾಲಕ, ಕ್ಲೀನರ್ ಮತ್ತು 5 ಸಾವಿರ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಬೆಳಗಾವಿಯಿಂದ ಗೋಕಾಕ್ ತಾಲೂಕಿನ ಅಂಕಲಗಿಗೆ ತೆರಳುತ್ತಿದ್ದ ಕಾರಿನಲ್ಲಿ ದಾಖಲೆ ಇಲ್ಲದ 9 ಲಕ್ಷ ಹಣವನ್ನು ಪೊಲೀಸರು ಬೆಳಗಾವಿ ಹೊರವಲಯದ ಕಣಬರಗಿ ಚೆಕ್ಪೋಸ್ಟ್ನಲ್ಲಿ ವಶಪಡಿಸಿಕೊಂಡಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ