ಚಿಕ್ಕಬಳ್ಳಾಪುರ, (ಫೆಬ್ರವರಿ 07): ಪುಷ್ಪ ಸಿನಿಮಾ ಸ್ಟೈಲಲ್ಲಿ ರಕ್ತಚಂದನ ಸಾಗಿಸುತಿದ್ದ ಗ್ಯಾಂಗ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಿರೇಕಟ್ಟಿಗೇನಹಳ್ಳಿ ಬಳಿ ಸೆರೆಯಾಗಿದೆ. ಸೀಮೆ ಹಸುವಿನೊಂದಿಗೆ ಹುಲ್ಲು ಮುಚ್ಚಿ ರಕ್ತ ಚಂದನ ಸಾಗಿಸುತಿದ್ದಾಗ ಖದೀಮರು ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಎರಡು ಕಿ.ಮೀ ಬೆನ್ನಟ್ಟಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಸೀಮೆ ಹಸು, ಲಕ್ಷಾಂತರ ರೂಪಾಯಿ ಮೌಲ್ಯದ ರಕ್ತಚಂದನvನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಆಂಧ್ರದಿಂದ ಬೆಂಗಳೂರಿಗೆ ರಕ್ತಚಂದನ ಸಾಗಿಸುತ್ತಿದ್ದರು. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರಕ್ತ ಚಂದನವನ್ನು ವಾಹನದಲ್ಲಿ ಸಾಗಿಸುತ್ತಿರುವ ಮಾಹಿತಿ ಆಧಾರದ ಮೇಲೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ದಾಳಿ ಮಾಡಿದ್ದಾರೆ.
ಇನ್ನು ಪೊಲೀಸರನ್ನು ನೋಡುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆದ್ರೆ, ಪೊಲೀಸರು ಎರಡು ಕಿ.ಮೀಟರ್ ಚೇಸ್ ಮಾಡಿ ಆರೋಪಿಗಳನ್ನು ಹಿಡಿದಿದ್ದಾರೆ. ಇಬ್ಬರು ಕಳ್ಳರನ್ನು ಬಂಧಿಸಲಾಗಿದ್ದು, 392 ಕೆಜಿ ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಕಳ್ಳರ ಬಂಧನಕ್ಕೆ ಪೊಲೀಸರು ಗ್ರಾಮಸ್ಥರ ಸಹಕಾರದಿಂದ ಕಾರ್ಯಾಚರಣೆ ನಡೆಸಿದ್ದಾರೆ.
ಕೋಲಾರ: ಜಮೀನಿನ ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಅಪರಿಚಿತ ಗುಂಪೊಂದು ನಾಲ್ವರ ಮೇಲೆ ಹಲ್ಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ಕಾಮದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಗೆ ನುಗ್ಗಿ ಹಲ್ಲೆ, ಗೃಹೋಪಯೋಗಿ ವಸ್ತು ಧ್ವಂಸಗೊಳಿಸಿದ್ದಾರೆ. ಅಲ್ಲದೇ ಭೀರಪ್ಪ, ಅಶ್ವತ್ಥ್, ಲಕ್ಷ್ಮಮ್ಮ, ಶಾರದಮ್ಮ ಎಂಬುವರ ಮೇಲೆ ಹಲ್ಲೆ ಮಾಡಿದೆ. ಪ್ರಕಾಶ್, ರಮೇಶ್ ಎಂಬುವರು ಹಲ್ಲೆ ಮಾಡಿಸಿದ್ದಾರೆಂದು ಆರೋಪಿಸಲಾಗಿದ್ದು, ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.