ಅಪರಾಧ ಸುದ್ದಿಗಳು: ಚಿತ್ರದುರ್ಗದಲ್ಲಿ ಗುಂಡು ಹಾರಿಸಿ ಬಟ್ಟೆ ವ್ಯಾಪಾರಿಯ ಹತ್ಯೆ; ದರೋಡೆಗೆ ಹೊಂಚುಹಾಕಿ ಕುಳಿತಿದ್ದ ಆರೋಪದಡಿ ಕೋಲಾರದಲ್ಲಿ ಇಬ್ಬರ ಬಂಧನ
ಅಪರಾಧ ಜಗತ್ತಿನ ಇಂದಿನ ಇಣುಕುನೋಟವನ್ನು ನೀವಿಲ್ಲಿ ಓದಬಹುದು.
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಗುಂಡು ಹಾರಿಸಿ ವ್ಯಾಪಾರಿಯೋರ್ವನ ಹತ್ಯೆ ಮಾಡಲಾಗಿದೆ. ಖಾಸಗಿ ಟೆಕ್ಸ್ ಟೈಲ್ಸ್ ಮಾಲೀಕ ಮೂಲಸಿಂಗ್(50) ಎಂಬಾತನೇ ಹತ್ಯೆಗೀಡಾದ ದುರ್ದೈವಿ. ಬಟ್ಟೆ ಅಂಗಡಿ ಬಳಿ ವ್ಯಾಪಾರಿಯ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಜಿ.ರಾಧಿಕಾ, ಡಿವೈಎಸ್ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದರೋಡೆಗೆ ಹೊಂಚು ಆರೋಪ; ಇಬ್ಬರ ಬಂಧನ ದರೋಡೆಗೆ ಹೊಂಚುಹಾಕುತ್ತಿದ್ದ ಇಬ್ಬರು ದರೋಡೆಕೋರರನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಮಲ್ಲೆಕುಪ್ಪ ಗ್ರಾಮದ ಬಳಿ ಮಾರಕಾಸ್ತ್ರಗಳು ಹಾಗೂ ಖಾರದ ಪುಡಿ ಹಿಡಿದು ದರೋಡೆ ನಡೆಸಲು ಹೊಂಚುಹಾಕಿ ಕೂತಿದ್ದರು ಎನ್ನಲಾದ ತಂಡವನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ರವಿಕುಮಾರ್ ಮತ್ತು ಸುಬ್ರಮಣಿ ಎಂಬುವವರೇ ಬಂಧನಕ್ಕೊಳಪಟ್ಟವರು. ಮಿಕ್ಕ ಐದು ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ.
ಒಂಟಿಯಾಗಿ ಬರುವವರ ಮೇಲೆ ದಾಳಿ ಮಾಡಿ ಹಣ ಮತ್ತು ಚಿನ್ನಾಭರಣ ದೋಚಲು ದರೋಡೆಕೋರರ ತಂಡ ಯೋಜನೆ ರೂಪಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನಂಗಲಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
20 ಕೆಜಿ ಅಂಬರ್ಗ್ರೀಸ್ ವಶ ಬೆಂಗಳೂರು: ಖಚಿತ ಮಾಹಿತಿ ಆಧರಿಸಿ ನಗರದ ಎರಡು ಕಡೆ ದಾಳಿ ಮಾಡಿರುವ ಪೊಲೀಸರು 20 ಕೋಟಿ ಮೌಲ್ಯದ ಅಂಬರ್ಗ್ರಿಸ್ನ್ನು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಎನ್ ಆರ್ ರಸ್ತೆಯ ಖಾಸಗಿ ವಸತಿ ಗೃಹದ ಕೊಠಡಿಯೊಂದರಲ್ಲಿ ಸಂಗ್ರಹಿಸಲಾಗಿದ್ದ 2.5 ಕೆ.ಜಿ ಅಂಬರ್ಗ್ರಿಸ್ನ್ನು ಎಸ್.ಜೆ.ಪಾರ್ಕ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜತೆಗೆ ಹೊಸಕೋಟೆಯಲ್ಲೂ ಅಂಬರ್‌ಗ್ರಿಸ್ ಸಂಗ್ರಹ ಬಗ್ಗೆ ಮಾಹಿತಿ ಪಡೆದ ಪೊಲೀಸರು 17.5 ಕೆಜಿ ಅಂಬರ್ಗ್ರಿಸ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈಮೂಲಕ ಇಂದು ಒಂದೇ ದಿನ ಬೆಂಗಳೂರು ನಗರದಲ್ಲಿ ಪೊಲೀಸರು ಒಟ್ಟು 20 ಕೆಜಿ ಅಂಬರ್ಗ್ರಿಸ್ನ್ನು ವಶಕ್ಕೆ ಪಡೆದಿದ್ದಾರೆ.
ಕೋಲಾರದಲ್ಲಿ ಉಸಿರುಗಟ್ಟಿ ಬಾಲಕಿ ಸಾವು ಕೋಲಾರ: ಸೀರೆಯಲ್ಲಿ ಉಯ್ಯಾಲೆ ಮಾಡಿಕೊಂಡು ಆಡುತ್ತಿದ್ದ ವೇಳೆ ಕುತ್ತಿಗೆ ಬಿಗಿದು ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಪೆದ್ದೂರು ಗ್ರಾಮದಲ್ಲಿ ಉಸಿರುಗಟ್ಟಿ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ. ಮತ್ತೋರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:
ಅಫ್ಘಾನಿಸ್ತಾನದಿಂದ ಯಾವುದೇ ದೇಶಕ್ಕೆ ಬೆದರಿಕೆಯಿಲ್ಲ: ಮೊದಲ ಸುದ್ದಿಗೋಷ್ಠಿಯಲ್ಲಿ ತಾಲಿಬಾನ್ ಅಭಯ
(Chitradurga dress merchant killed by gunshot)