ಕಾಸರಗೋಡು: ರೇಡಿಯೋದ ವಾಲ್ಯೂಮ್ ಕಡಿಮೆ ಮಾಡೆಂದು ಗದರಿದ ಅಮ್ಮ ಹಾಗೂ ಅಪ್ಪನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ ಮಗನಿಗೆ 28 ವರ್ಷಗಳ ಬಳಿಕ ಇದೀಗ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಕೇರಳ ರಾಜ್ಯದ ಕಾಸರಗೋಡಿನಲ್ಲಿ 28 ವರ್ಷಗಳ ಹಿಂದೆ ತನ್ನ ಹೆತ್ತವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ 65 ವರ್ಷದ ಸದಾಶಿವ ಎಂಬ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಆ ದಿನ ಮಧ್ಯಾಹ್ನ ಊಟ ಮಾಡಿದ ಮೇಲೆ ರೇಡಿಯೋ ಕೇಳುತ್ತಾ ಮಲಗಿದ್ದ ಸದಾಶಿವನಿಗೆ ಆತನ ಅಮ್ಮ ರೇಡಿಯೋದ ವಾಲ್ಯೂಮ್ ಸಣ್ಣ ಮಾಡೆಂದು ಜೋರು ಮಾಡಿದ್ದರು. ಅದರಿಂದ ಕೋಪಗೊಂಡ ಸದಾಶಿವ ಅಮ್ಮನೊಂದಿಗೆ ಜಗಳವಾಡಿದ್ದ. ನಂತರ ಆತನ ಅಪ್ಪ ಕೂಡ ಮಗನೊಂದಿಗೆ ಜಗಳವಾಡಿದ್ದ. ಅಪ್ಪ-ಅಮ್ಮನ ಮೇಲೆ ಕೋಪಗೊಂಡ ಸದಾಶಿವ ಮನೆಯ ಹಿತ್ತಿಲಲ್ಲಿದ್ದ ಕೊಡಲಿಯಿಂದ ಹೊಡೆದು ಅವರಿಬ್ಬರನ್ನೂ ಕೊಲೆ ಮಾಡಿದ್ದ.
ಕೊಲೆ ಮಾಡಿದ ಬಳಿಕ ಮಗ 25 ವರ್ಷಗಳ ಕಾಲ ಮಾನಸಿಕ ರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸದಾಶಿವನ ವಿಚಾರಣೆ ನಡೆದು ತೀರ್ಪು ಹೊರಬರಲು ಇಷ್ಟು ವರ್ಷ ಬೇಕಾಯಿತು. ಕೂಲಿ ಮಾಡಿಕೊಂಡು ಬದುಕುತ್ತಿದ್ದ ಸದಾಶಿವ 1993 ಮಾರ್ಚ್ 22ರಂದು ಕಾಸರಗೋಡಿನ ಕುಂಬ್ಳೆಯ ತಲಕಲೈ ಗ್ರಾಮದಲ್ಲಿ ತನ್ನ ಪೋಷಕರಾದ 63 ವರ್ಷದ ಮಂಕುಮೂಲ್ಯ ಮತ್ತು 53 ವರ್ಷದ ಲಕ್ಷ್ಮಿ ಎಂಬುವವರನ್ನು ಕೊಚ್ಚಿ ಕೊಲೆ ಮಾಡಿದ್ದ. ಆ ಪ್ರಕರಣದ ವಿಚಾರಣೆ ನಡೆಸಿರುವ ಕಾಸರಗೋಡು ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಉನ್ನಿಕೃಷ್ಣನ್ ಸದಾಶಿವನಿಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ.
ಸದಾಶಿವ ಮಾಡಿದ್ದ ಕೊಲೆಯನ್ನು ಸದಾಶಿವನ ಪತ್ನಿ ಮತ್ತು ಅವನ ಇಬ್ಬರು ಮಕ್ಕಳು ನೋಡಿದ್ದರು. ಕೊಲೆಯನ್ನು ನೋಡಿ ಅವರು ಕಿರುಚಿದಾಗ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಸದಾಶಿವನ ಮ್ಮ ಹಾಗೂ ಆತನ ಪತ್ನಿ ಓಡಿ ಬಂದಿದ್ದರು. ಈ ಕೊಲೆಯ ಬಗ್ಗೆ ಸದಾಶಿವನ ಹೆಂಡತಿ ಸೇರಿದಂತೆ ಅಲ್ಲಿದ್ದವರೆಲ್ಲರೂ ಸದಾಶಿವನ ವಿರುದ್ಧ ಸಾಕ್ಷಿ ಹೇಳಿದ್ದರು. ಸದಾಶಿವನನ್ನು ಬಂಧಿಸಿದ ಕೂಡಲೇ ಆತ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಹೀಗಾಗಿ, ಆತನನ್ನು ಕೋಳಿಕ್ಕೋಡ್ ಸಮೀಪದ ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿತ್ತು. ಅಲ್ಲಿ 2018ರವರೆಗೆ ಆತನಿಗೆ ಚಿಕಿತ್ಸೆ ನೀಡಲಾಗಿತ್ತು. ಇದರಿಂದಾಗಿ ವಿಚಾರಣೆ ನಡೆದು ಶಿಕ್ಷೆ ಪ್ರಕಟವಾಗುವುದು ತಡವಾಯಿತು.
ಇದನ್ನೂ ಓದಿ: ಮಾನಸಿಕ ಖಿನ್ನತೆ: ಯಾರು ಇಲ್ಲದ ವೇಳೆ ತಲೆಗೆ ಗುಂಡು ಹಾರಿಸಿಕೊಂಡು ವೃದ್ಧ ಆತ್ಮಹತ್ಯೆ
Murder: ಪ್ರಿಯಕರನ ಜೊತೆ ಸೇರಿ ಗಂಡ, ಮೂವರು ಮಕ್ಕಳನ್ನು ಬೆಂಕಿ ಹಚ್ಚಿ ಕೊಂದ ಮಹಿಳೆ
Published On - 5:30 pm, Tue, 12 October 21