Crime News: ಕಡಿಮೆ ಚಿಕನ್ ನೀಡಿ ಹೆಚ್ಚು ಬಿಲ್ ಕೇಳುತ್ತೀರಾ ಎಂದು ಹೇಳಿದ್ದಕ್ಕೆ ಮೂವರ ಮೇಲೆ ಹಲ್ಲೆ!

| Updated By: Rakesh Nayak Manchi

Updated on: Jun 26, 2022 | 1:53 PM

ಕಡಿಮೆ ಚಿಕನ್ ನೀಡಿ ಹೆಚ್ಚು ಬಿಲ್ ಕೇಳುತ್ತೀರಾ ಎಂದು ಹೇಳಿದ್ದಕ್ಕೆ ಮೂವರು ಗ್ರಾಹಕರ ಮೇಲೆ ಬೆಂಗಳೂರಿನ ಎಂಪೈರ್ ಹೊಟೇಲ್ ಸಿಬ್ಬಂದಿಗಳು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

Crime News: ಕಡಿಮೆ ಚಿಕನ್ ನೀಡಿ ಹೆಚ್ಚು ಬಿಲ್ ಕೇಳುತ್ತೀರಾ ಎಂದು ಹೇಳಿದ್ದಕ್ಕೆ ಮೂವರ ಮೇಲೆ ಹಲ್ಲೆ!
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಕಡಿಮೆ ಚಿಕನ್ ನೀಡಿ ಹೆಚ್ಚು ಬಿಲ್ ಕೇಳುತ್ತೀರಾ ಎಂದು ಹೇಳಿದ್ದಕ್ಕೆ ಮೂವರು ಗ್ರಾಹಕರ ಮೇಲೆ ಖಾಸಗಿ ಹೊಟೇಲ್ ಸಿಬ್ಬಂದಿಗಳು ಹಲ್ಲೆ ನಡೆಸಿದ ಆರೋಪ ನಗರ ನವರಂಗ್ ಬಳಿ ಕೇಳಿಬಂದಿದೆ. ನಿನ್ನೆ ಮಧ್ಯರಾತ್ರಿ ವೇಳೆ ಮಹಾಲಕ್ಷ್ಮಿ ಲೇಔಟ್​​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಂಪೈರ್​ ಹೋಟೆಲ್​ನಲ್ಲಿ ಈ ಘಟನೆ ನಡೆದಿದೆ.

ನಿನ್ನೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅಭಿಷೇಕ್​, ಅನೀಶ್​​​, ಜಾನ್ಸನ್ ಎಂಬವರು ಊಟ ಮಾಡಲು ಎಂಪೈರ್ ಹೊಟೇಲ್​ಗೆ ಬಂದಿದ್ದಾರೆ. ಆರ್ಡರ್ ಮಾಡಿದ ಆಹಾರದಲ್ಲಿ ಚಿಕನ್ ಪೀಸ್​ಗಳು ಕಡಿಮೆ ಇದ್ದದ್ದನ್ನು ಗಮನಿಸಿದ ಗ್ರಾಹಕರು, ಬಿಲ್ಲಿಂಗ್ ವೇಳೆ ಪ್ರಶ್ನಿಸಿದ್ದಾರೆ. ಕಡಿಮೆ ಚಿಕನ್ ನೀಡಿ ಹೆಚ್ಚು ಬಿಲ್ ಕೇಳುತ್ತೀರಾ ಎಂದು ಹೊಟೇಲ್ ಸಿಬ್ಬಂದಿಯನ್ನೇ ಪ್ರಶ್ನಿಸಿದ್ದಾರೆ.

ಗ್ರಾಹಕರ ಪ್ರಶ್ನೆಗೆ ಕೆರಳಿದ ಹೊಟೇಲ್​ನ ಸಿಬ್ಬಂದಿಗಳು ವಾಗ್ವಾದಕ್ಕಿಳಿದಿದ್ದಾರೆ. ಈ ವಾಗ್ವಾದ ತಾರಕಕ್ಕೇರಿದ ಪರಿಣಾಮ ಹೊಟೇಲ್ ಸಿಬ್ಬಂದಿಗಳು ಸ್ಟೀಲ್​ ಜಗ್​​, ರಾಡ್​​ಗಳಿಂದ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಇಬ್ಬರ ತಲೆಗೆ ಗಂಭೀರ ಗಾಯಗಳಾಗಿವೆ. ಸದ್ಯ ಹೋಟೆಲ್ ಮ್ಯಾನೇಜರ್​​, ಸಪ್ಲೆಯರ್​​​ಗಳ ವಿರುದ್ಧ ಹಲ್ಲೆ ಆರೋಪ ಕೇಳಿಬರುತ್ತಿದೆ.

ಇದನ್ನೂ ಓದಿ: ಹ್ಯಾಕರ್ ಶ್ರೀಕಿ ಸೋದರನಿಗೆ ದೇಶ ಬಿಟ್ಟು ತೆರಳದಂತೆ ನಿರ್ಬಂಧ: ಇಡಿ ತನಿಖೆಗೆ ಸಹಕರಿಸಲು ಹೈಕೋರ್ಟ್ ಸೂಚನೆ

ಕಾರಾಗೃಹದ ಮಹಿಳಾ ಕಾನ್ಸ್‌ಟೇಬಲ್ ರಂಪಾಟ

ಬಾಗಲಕೋಟೆ: ಆಸ್ತಿ ವಿವಾದ ಸಂಬಂಧ ಕಾರಾಗೃಹದ ಮಹಿಳಾ ಕಾನ್ಸ್‌ಟೇಬಲ್ ಒಬ್ಬರು ರಂಪಾಟ ನಡೆಸಿದ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಬಳಿ ನಡೆದಿದೆ. ಜಿಲ್ಲಾ ಕಾರಾಗೃಹದ ಹೆಡ್ ವಾರ್ಡರ್ ಸಕ್ಕುಬಾಯಿ ಜಾಧವ್, ತನ್ನ ಪತಿ ಸೇರಿದಂತೆ ಜನರನ್ನು ಕರೆತಂದು ಮೈದುನ ಪುನೀತ್ ಅವರಿಗೆ ಆವಾಜ್ ಹಾಕಿದ್ದಾರೆ.

ಅಮೀನಗಡ ಪಟ್ಟಣದಲ್ಲಿ ಸಕ್ಕುಬಾಯಿ ಜಾಧವ್​ಗೆ ಒಂದು ಮನೆಯನ್ನು ಕೊಟ್ಟಿದ್ದರೂ ಇನ್ನೊಂದು ಬೇಕೆಂದು ಜಗಳಕ್ಕೆ ಇಳಿದಿದ್ದಾರೆ. ಅದರಂತೆ ತನ್ನ ಪತಿ ನಾಗೇಶ್ ರಾಠೋಡ್​ನೊಂದಿಗೆ ಕ್ರೂಸರ್ ಗಾಡಿಯಲ್ಲಿ ತಮ್ಮ ಪರ ಜನರನ್ನು ಕರೆತಂದ ಸಕ್ಕುಬಾಯಿ, ಮೈದುನ ಪುನೀತ್ ಮನೆ ಮುಂದೆ ರಂಪಾಟ ನಡೆಸಿದ್ದಾರೆ. ವಾಸವಿರುವ ಮನೆ ಖಾಲಿಮಾಡಿ ಬಿಟ್ಟುಕೊಡಿ ಎಂದು ಆವಾಜ್ ಹಾಕಿದ್ದಲ್ಲದೆ, ಪೊಲೀಸರೊಂದಿಗೂ ವಾಗ್ವಾದ ನಡೆಸಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಪುನೀತ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಹೊಸಕೋಟೆ ಟೋಲ್ ಪ್ಲಾಜಾ ಬಳಿ ಸರಣಿ ಅಪಘಾತ: ಭೀಕರ ಸರಣಿ ಅಪಘಾತದಲ್ಲಿ 8 ವಾಹನಗಳು ನಜ್ಜುಗುಜ್ಜು

ಮಂಗಳೂರು: ಬೆಂಗಳೂರು‌ ಮೂಲದ ತಂಡಗಳ ನಡುವೆ ಹೊಡೆದಾಟ ನಡೆದ ಘಟನೆ ಮಂಗಳೂರು ಹೊರವಲಯದ ಉಚ್ಚಿಲದ ಖಾಸಗಿ ಬೀಚ್ ರೆಸಾರ್ಟ್​ನಲ್ಲಿ ನಡೆದಿದೆ. ಎರಡು ಬಸ್​ಗಳಲ್ಲಿ ಬಂದ ಪ್ರವಾಸಿಗರು ಖಾಸಗಿ ಬೀಚ್ ರೆಸಾರ್ಟ್​ನಲ್ಲಿ ತಂಗಿದ್ದಾರೆ. ಇಲ್ಲಿ ತಡ ರಾತ್ರಿ ಮದ್ಯದ ಪಾರ್ಟಿ ನಡೆಸಿದ ಪ್ರವಾಸಿಗರು, ಗಲಾಟೆ ಮಾಡಿ ರಸ್ತೆ ಬದಿಗೆ ಬಂದು ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದ ಸಂದರ್ಭದಲ್ಲಿ ಸ್ಥಳೀಯ ಮನೆಗಳಿಗೆ ನುಗ್ಗಿ ಕಿರಿಕ್ ಕೂಡ ಮಾಡಲಾಗಿದ್ದು, ಸ್ಥಳೀಯರು ಪ್ರವಾಸಿಗರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Published On - 1:52 pm, Sun, 26 June 22