ಹ್ಯಾಕರ್ ಶ್ರೀಕಿ ಸೋದರನಿಗೆ ದೇಶ ಬಿಟ್ಟು ತೆರಳದಂತೆ ನಿರ್ಬಂಧ: ಇಡಿ ತನಿಖೆಗೆ ಸಹಕರಿಸಲು ಹೈಕೋರ್ಟ್ ಸೂಚನೆ
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗಾಗಿ ಇಡಿ ತನಿಖಾಧಿರಿಗಳೊಂದಿಗೆ ಸಹಕರಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು: ಹ್ಯಾಕರ್ ಶ್ರೀಕಿ ಸೋದರನಿಗೆ ದೇಶ ಬಿಟ್ಟು ಹೋಗದಂತೆ ನಿರ್ಬಂಧಿಸಿರುವ ಜಾರಿ ನಿರ್ದೇಶನಾಲಯದ (Enforcement Directorate – ED) ಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗಾಗಿ ಇಡಿ ತನಿಖಾಧಿರಿಗಳೊಂದಿಗೆ ಸಹಕರಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ತಮಗೆ ದೇಶ ಬಿಟ್ಟು ತೆರಳಲು ಅವಕಾಶ ನೀಡದ ಇಡಿ ಕ್ರಮ ಪ್ರಶ್ನಿಸಿ ಶ್ರೀಕಿ ಸೋದರ ಶ್ರೀಕೃಷ್ಣ ರಮೇಶ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಜೂನ್ 20ರಂದು ಇಡಿ ಜಾರಿ ಮಾಡಿರುವ ಲುಕೌಟ್ ನೊಟೀಸ್ ರದ್ದುಪಡಿಸಬೇಕು ಎಂದು ಕೋರಿದ್ದರು.
ನೆದರ್ಲೆಂಡ್ಸ್ನಲ್ಲಿ ಎಂಜಿನಿಯರ್ ಆಗಿರುವ ಸುದರ್ಶನ್ ರಮೇಶ್ (31) ಕಳೆದ ಜನವರಿಯಲ್ಲಿ ದೇಶದಿಂದ ಹೊರಗೆ ಹೋಗಲು ಯತ್ನಿಸಿದ್ದರು. ಆದರೆ ಜಾರಿ ನಿರ್ದೇಶನಾಲಯವು ಲುಕೌಟ್ ನೊಟೀಸ್ ಜಾರಿ ಮಾಡಿದ್ದರಿಂದ ಇಮಿಗ್ರೇಶನ್ ಅಧಿಕಾರಿಗಳು ಸುದರ್ಶನ್ ಅವರಿಗೆ ದೇಶದಿಂದ ಹೊರಗೆ ಹೋಗಲು ಅನುಮತಿ ನಿರಾಕರಿಸಿದ್ದರು.
ಸುದರ್ಶನ್ ರಮೇಶ್ರ ತಮ್ಮ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ (28) ಅವರ ಮೇಲೆ ಹ್ಯಾಕಿಂಗ್ ಮೂಲಕ ವಂಚನೆ ಮಾಡಿದ ಹಲವು ಪ್ರಕರಣಗಳಿವೆ. ನವೆಂಬರ್ 2020ರಲ್ಲಿ ಡಾರ್ಕ್ನೆಟ್ನಲ್ಲಿ ಡ್ರಗ್ಸ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿ ವಿರುದ್ಧ ಕರ್ನಾಟಕ ಪೊಲೀಸರು ಹಲವು ಪ್ರಕರಣ ದಾಖಲಿಸಿದ್ದರು. ಇಡಿ ಸಹ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಿಸಿತ್ತು. ಹಲವು ರಾಜಕಾರಿಣಿಗಳ ಮಕ್ಕಳ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಪ್ರಕರಣ ದೇಶವ್ಯಾಪಿ ಸದ್ದು ಮಾಡಿತ್ತು.
ನೆದರ್ಲೆಂಡ್ಗೆ ಹಿಂದಿರುಗಲು ಅನುಮತಿ ನೀಡಬೇಕೆಂದು ಹೈಕೋರ್ಟ್ಗೆ ಸಲ್ಲಿಸಿರುವ ಸುದರ್ಶನ್ ರಮೇಶ್ ಅರ್ಜಿಗೆ ಜಾರಿ ನಿರ್ದೇಶನಾಲಯವು ತಕರಾರು ಮಂಡಿಸಿತ್ತು. ಹ್ಯಾಕಿಂಗ್ ಮೂಲಕ ಗಳಿಸಿದ ಹಣವನ್ನು ಶ್ರೀಕಿಯು ಸುದರ್ಶನ್ಗೆ ರವಾನಿಸಿದ್ದಾನೆ ಎಂದು ಇಡಿ ಹೇಳಿತ್ತು. ಮೇ 2021ರಲ್ಲಿ ಹನಿಶ್ ಪಟೇಲ್ ಎನ್ನುವವರ ಮೂಲಕ ಶ್ರೀಕಿಯು 50,000 ಬ್ರಿಟಿಷ್ ಪೌಂಡ್ನಷ್ಟು ಹಣ ಪಡೆದುಕೊಂಡಿದ್ದ. ಈ ಹಣದ ಮೂಲದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸುದರ್ಶನ್ ಸಮರ್ಪಕ ಉತ್ತರ ನೀಡಿರಲಿಲ್ಲ ಎಂದು ಇಡಿ ಹೇಳಿತ್ತು.
ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾಗ ಕೇಳಿದ ಪ್ರಶ್ನೆಗಳಿಗೆ ಸುದರ್ಶನ್ ಸಮಪರ್ಕವಾಗಿ ಉತ್ತರಿಸಿಲ್ಲ. ಪಾಸ್ವರ್ಡ್ ಮತ್ತು ಕೆಲ ಕೀವರ್ಡ್ಗಳನ್ನು ನೀಡಿರಲಿಲ್ಲ ಎಂದು ಇಡಿ ತಿಳಿಸಿತ್ತು. ತನಿಖೆಯ ವೇಳೆ ಬೆಳಕಿಗೆ ಬಂದ ಹ್ಯಾಕರ್ನ ಅಣ್ಣ ಮತ್ತು ತಂದೆಯ ನಡುವಣ ಸಂಭಾಷಣೆಯಲ್ಲಿಯೂ ಬ್ರಿಟನ್ ಪೌಂಡ್ಗಳ ವಹಿವಾಟು ನಡೆದಿರುವ ಬಗ್ಗೆ ಮಾಹಿತಿಯಿದೆ. ಸ್ವಿಸ್ ಬ್ಯಾಂಕ್ಗೆ ರವಾನೆಯಾಗಿರುವ ಹಣದ ವಿವರಗಳು ಇನ್ನೂ ಪತ್ತೆಯಾಗಬೇಕಿದೆ. ಈ ವಿಚಾರದಲ್ಲಿಯೂ ಸುದರ್ಶನ್ ಸಹಕಾರ ನೀಡಿಲ್ಲ ಎಂದು ಇಡಿ ಹೇಳಿತ್ತು.
ಸುದರ್ಶನ್ ಒಮ್ಮೆ ಭಾರತ ಬಿಟ್ಟು ನೆದರ್ಲೆಂಡ್ಸ್ಗೆ ಹೋದರೆ ಅಲ್ಲಿಯೇ ವಾಸ್ತವ್ಯ ಹೂಡಲು ನಿರ್ಧರಿಸಿದ್ದ. ಭಾರತದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರುವುದನ್ನು ತಡೆಯುವ ಉದ್ದೇಶದಿಂದ ಸುದರ್ಶನ್ ವಿರುದ್ಧ ಲುಕೌಟ್ ನೊಟೀಸ್ ಜಾರಿ ಮಾಡಲಾಗಿದೆ ಎಂದು ಇಡಿ ಹೇಳಿತ್ತು. ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಾಗಿರುವ ಇಂಥ ಹಲವು ಪ್ರಕರಣಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಯಾವುದೇ ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿ ಅಥವಾ ಆರ್ಥಿಕ ಹಿತಾಸಕ್ತಿಗಿಂತಲೂ ದೇಶದ ರಾಷ್ಟ್ರೀಯ ಹಿತಾಸಕ್ತಿಯು ಅತ್ಯಂತ ಪ್ರಮುಖವಾದುದು. ಸುದರ್ಶನ್ ರಮೇಶ್ ಅವರನ್ನು ದೇಶ ಬಿಟ್ಟು ಹೋಗದಂತೆ ತಡೆದಿರುವ ಇಡಿ ಕ್ರಮವು ಸಂವಿಧಾನದ 19 ಮತ್ತು 21ನೇ ಪರಿಚ್ಛೇದಗಳನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿತು.
Published On - 12:59 pm, Sun, 26 June 22