ಹೈದರಾಬಾದ್: ಭಾರತದಲ್ಲಿ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ (Rape) ಪ್ರಕರಣಗಳು ಕಡಿಮೆಯಾಗಿಲ್ಲ. ಪಕ್ಕದ ಹೈದರಾಬಾದ್‌ನ (Hyderabad) ಬಂಜಾರ ಹಿಲ್ಸ್ ಪ್ರದೇಶದಲ್ಲಿ ಕೇವಲ 4 ವರ್ಷದ ಬಾಲಕಿಯ ಮೇಲೆ ಆಕೆಯ ಶಾಲೆಯ ಪ್ರಿನ್ಸಿಪಾಲ್ ಅವರ ಚಾಲಕ ಅತ್ಯಾಚಾರ ಎಸಗಿರುವ ವಿಷಯ ಬೆಳಕಿಗೆ ಬಂದಿದ್ದು, ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹೈದರಾಬಾದ್‌ನ ಖಾಸಗಿ ಶಾಲೆಯೊಂದರ ಕೊಠಡಿಯಲ್ಲೇ ಈ ಘಟನೆ ನಡೆದಿದ್ದು, ಆ 4 ವರ್ಷದ ಬಾಲಕಿ ಯುಕೆಜಿ ವಿದ್ಯಾರ್ಥಿನಿಯಾಗಿದ್ದಳು.
ಆ ಶಾಲೆಯ ಪ್ರಿನ್ಸಿಪಾಲ್ ಕಾರಿನ ಚಾಲಕನಾಗಿದ್ದ ರಜಿನಿಕುಮಾರ್ ಎಂಬಾತ ಕಳೆದ 2 ತಿಂಗಳಿನಿಂದ ಆ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎನ್ನಲಾಗಿದೆ. ಆಕೆಯ ಪೋಷಕರು ತಮ್ಮ ಮಗಳ ವರ್ತನೆಯಲ್ಲಿ ಬದಲಾವಣೆಯಾಗಿದ್ದನ್ನು ಕಂಡು ಅನುಮಾನ ಪಟ್ಟಿದ್ದರು. ಅಲ್ಲದೆ, ಸದಾ ಆಟವಾಡಿಕೊಂಡು ಇರುತ್ತಿದ್ದ ಆ ಬಾಲಕಿ ಇತ್ತೀಚೆಗೆ ಬಹಳ ಖಿನ್ನತೆಗೆ ಒಳಗಾಗಿದ್ದಳು, ಆಗಾಗ ಸುಮ್ಮನೆ ಅಳುತ್ತಿದ್ದಳು.
ಈ ಬಗ್ಗೆ ಅವರು ತಮ್ಮ ಮಗಳನ್ನು ವಿಚಾರಿಸಿದಾಗ ಆಕೆ ಆ ಚಾಲಕನ ಬಗ್ಗೆ ಹೇಳಿದ್ದಾಳೆ. ಆ ಪ್ರಿನ್ಸಿಪಾಲ್ ಕಾರಿನ ಚಾಲಕ ಸದಾ ಕ್ಲಾಸ್ ರೂಮ್‌ಗೆ ಬರುತ್ತಲೇ ಇರುತ್ತಿದ್ದ ಮತ್ತು ಮಕ್ಕಳಿಗೆ ತೊಂದರೆ ನೀಡುತ್ತಿದ್ದ. ಅನೇಕ ಮಕ್ಕಳು ಅವನನ್ನು ಕಂಡರೆ ಹೆದರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: Crime News: ಮಹಿಳೆ ಕುತ್ತಿಗೆಗೆ ಚಾಕು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದ ವಿಕೃತ ಕಾಮಿಯ ಬಂಧನ
ಹಿರಿಯ ಪೊಲೀಸ್ ಅಧಿಕಾರಿ ಜೋಯಲ್ ಡೇವಿಸ್ ಪ್ರಕಾರ, ಈ ಪ್ರಕರಣದಲ್ಲಿ ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿರುವ ಅತ್ಯಾಚಾರಕ್ಕೊಳಗಾದ ಬಾಲಕಿಯ ತಾಯಿ, ನನ್ನ ಮಗಳು ಖಿನ್ನತೆಗೆ ಒಳಗಾಗಿದ್ದಳು. ಅವಳು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆಕೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಸಿದುಹೋಗಿದ್ದಳು. ನನ್ನ ಮಗಳ ಮೇಲೆ ಅತ್ಯಾಚಾರ ನಡೆಸಿದವನನ್ನು ಸಾರ್ವಜನಿಕವಾಗಿ ಬೆತ್ತಲೆಯಾಗಿ ಹೊಡೆಯಬೇಕು. ಕೂಡಲೇ ಪ್ರಾಂಶುಪಾಲರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಾವು ಶಾಲೆಗೆ ಪಾವತಿಸಿದ ದೇಣಿಗೆಯನ್ನು ಹಿಂತಿರುಗಿಸಬೇಕು. ನಾವು ನಮ್ಮ ಮಗಳನ್ನು ಮತ್ತೆ ಆ ಶಾಲೆಗೆ ಕಳುಹಿಸುವುದಿಲ್ಲ. ಇದು ಪ್ರತಿಷ್ಠಿತ ಶಾಲೆಯಾಗಿರಬಹುದು, ಆದರೆ ಪ್ರಿನ್ಸಿಪಾಲ್ ಸರಿಯಿಲ್ಲ. ಅವರ ಸುತ್ತಲೂ ಇರುವವರ ನಡತೆ ಸರಿಯಿಲ್ಲ ಎಂದಿದ್ದಾರೆ.