Crime News: ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದ ನರ್ಸ್ ಮೇಲೆ ಅತ್ಯಾಚಾರ ನಡೆಸಿ ಕೊಲೆ; ಉತ್ತರಾಖಂಡದಲ್ಲೂ ಭೀಕರ ಕೃತ್ಯ

|

Updated on: Aug 15, 2024 | 10:05 PM

ಉತ್ತರಾಖಂಡದಲ್ಲಿ ನರ್ಸ್ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ರುದ್ರಪುರದ ಇಂದ್ರ ಚೌಕ್‌ನಿಂದ ಟೆಂಪೋದಲ್ಲಿ ಸಂತ್ರಸ್ತೆಯ ಕೊನೆಯ ಚಲನವಲನಗಳನ್ನು ಸೆರೆಹಿಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಪೊಲೀಸರು ಆರೋಪಿಯನ್ನು ಗುರುತಿಸಿ, ಬಂಧಿಸಿದ್ದಾರೆ.

Crime News: ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದ ನರ್ಸ್ ಮೇಲೆ ಅತ್ಯಾಚಾರ ನಡೆಸಿ ಕೊಲೆ; ಉತ್ತರಾಖಂಡದಲ್ಲೂ ಭೀಕರ ಕೃತ್ಯ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕೊಲ್ಕತ್ತಾದಲ್ಲಿ 31 ವರ್ಷದ ಮಹಿಳಾ ಟ್ರೈನಿ ವೈದ್ಯೆಯ ಮೇಲಿನ ಕ್ರೂರ ಅತ್ಯಾಚಾರ ಮತ್ತು ಹತ್ಯೆಯಿಂದ ದೇಶ ತತ್ತರಿಸಿ ಹೋಗಿದೆ. ಈ ನಡುವೆ ಅತ್ಯಾಚಾರ ಪ್ರಕರಣಗಳಲ್ಲಿ ಬಹಳ ಹೆಚ್ಚಳವಾಗಿದ್ದು, ಜುಲೈನಿಂದ ನಾಪತ್ತೆಯಾಗಿದ್ದ 33 ವರ್ಷದ ನರ್ಸ್ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಈ ಪ್ರಕರಣದ ಆರೋಪಿಯನ್ನು ಉತ್ತರಾಖಂಡ್ ಪೊಲೀಸರು ಬಂಧಿಸಿದ್ದಾರೆ.

ಗದರ್‌ಪುರದ ಇಸ್ಲಾಂನಗರದ ಮಹಿಳೆ ಉತ್ತರಾಖಂಡದ ನೈನಿತಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ಆಕೆ ತನ್ನ 11 ವರ್ಷದ ಮಗಳೊಂದಿಗೆ ಬಿಲಾಸ್‌ಪುರ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಆಕೆ ಹಲವು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 31ರಂದು ಆಕೆಯ ಸಹೋದರಿ ನಾಪತ್ತೆಯಾದ ತಂಗಿಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: Shocking News: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಸ್ತನ, ಗುಪ್ತಾಂಗ ಕತ್ತರಿಸಿ ಬರ್ಬರ ಹತ್ಯೆ

ಇದಾದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಇದಾದ ಒಂದು ವಾರದ ನಂತರ ಉತ್ತರ ಪ್ರದೇಶದ ದಿಬ್ಡಿಬಾದಲ್ಲಿನ ಖಾಲಿ ಜಾಗದಲ್ಲಿ ಆಕೆಯ ಶವ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ಬಯಲಾಗಿದೆ.

ಶಂಕಿತ ಆರೋಪಿಯನ್ನು ಉತ್ತರ ಪ್ರದೇಶದ ಬರೇಲಿಯ ಕಾರ್ಮಿಕ ಧರ್ಮೇಂದ್ರ ಎಂದು ಗುರುತಿಸಲಾಗಿದ್ದು, ರಾಜಸ್ಥಾನದ ಜೋಧಪುರದಲ್ಲಿ ಆತನನ್ನು ಬಂಧಿಸಲಾಗಿದೆ. ಧರ್ಮೇಂದ್ರ ನರ್ಸ್‌ಗೆ ಹಣದ ಆಮಿಷ ಒಡ್ಡಿ, ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಸಾಯಿಸಿ, ನಂತರ ಆಕೆಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾನೆ ಎಂದು ವರದಿಗಳು ಸೂಚಿಸುತ್ತವೆ.

ಇದನ್ನೂ ಓದಿ: Crime News: 13 ವರ್ಷದ ಮಗಳ ಮೇಲೆ ಅಪ್ಪನಿಂದ ಅತ್ಯಾಚಾರ; ಉತ್ತರ ಪ್ರದೇಶದಲ್ಲೊಂದು ಶಾಕಿಂಗ್ ಘಟನೆ

ರುದ್ರಪುರದ ಇಂದ್ರ ಚೌಕ್‌ನಿಂದ ಟೆಂಪೋದಲ್ಲಿ ಸಂತ್ರಸ್ತೆಯ ಕೊನೆಯ ಚಲನವಲನಗಳನ್ನು ಸೆರೆಹಿಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಪೊಲೀಸರು ಶಂಕಿತನನ್ನು ಗುರುತಿಸಿದ್ದಾರೆ. ನರ್ಸ್​ನಿಂದ ಕದ್ದ ಮೊಬೈಲ್ ಫೋನ್ ಸ್ಥಳವನ್ನು ಪತ್ತೆಹಚ್ಚಿ, ಆ ಮೂಲಕ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ ಧರ್ಮೇಂದ್ರ ತಾನೇ ನರ್ಸ್‌ನ ಮೇಲೆ ದರೋಡೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ ಖಾಲಿ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿ ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ