Crime News: ದರೋಡೆ ಬಳಿಕ ಮನೆಯವರ ಕಾಲಿಗೆ ಬಿದ್ದ ಕಳ್ಳರು; 6 ತಿಂಗಳಲ್ಲಿ ಕದ್ದ ಹಣ ವಾಪಾಸ್ ಕೊಡುತ್ತೇವೆಂದು ಪರಾರಿ!

| Updated By: ಸುಷ್ಮಾ ಚಕ್ರೆ

Updated on: Sep 01, 2021 | 7:57 PM

Viral News | ದರೋಡೆಕೋರರು ವಾಪಾಸ್ ಹೋಗುವಾಗ ಮನೆಯ ಹಿರಿಯರ ಕಾಲಿಗೆ ನಮಸ್ಕಾರ ಮಾಡಿದ್ದಾರೆ. ಇನ್ನು 6 ತಿಂಗಳೊಳಗೆ ನಿಮ್ಮ ಹಣ, ಚಿನ್ನಾಭರಣವನ್ನು ವಾಪಾಸ್ ಕೊಡುತ್ತೇವೆ ಎಂದು ಹೇಳಿ ಅವರ ಖರ್ಚಿಗೆ 500 ರೂ. ನೀಡಿದ್ದಾರೆ.

Crime News: ದರೋಡೆ ಬಳಿಕ ಮನೆಯವರ ಕಾಲಿಗೆ ಬಿದ್ದ ಕಳ್ಳರು; 6 ತಿಂಗಳಲ್ಲಿ ಕದ್ದ ಹಣ ವಾಪಾಸ್ ಕೊಡುತ್ತೇವೆಂದು ಪರಾರಿ!
ಸಾಂದರ್ಭಿಕ ಚಿತ್ರ
Follow us on

ದರೋಡೆ ಮಾಡಲು ಬಂದವರು ಆ ಮನೆಯಲ್ಲೇ ನಿದ್ರೆ ಮಾಡಿ ಸಿಕ್ಕಿಬಿದ್ದ, ದರೋಡೆಯ (Robbery) ಮನೆಯಲ್ಲೇ ಅಡುಗೆ ಮಾಡಿ ಊಟ ಮಾಡಿ ಮನೆಯವರ ಕೈಗೆ ಸಿಕ್ಕಿಬಿದ್ದ ಘಟನೆಗಳು ಕೆಲವು ದಿನಗಳ ಹಿಂದೆ ಅಚ್ಚರಿ ಮೂಡಿಸಿತ್ತು. ಆದರೆ, ಉತ್ತರ ಪ್ರದೇಶದ ಘಜಿಯಾಬಾದ್​ನಲ್ಲಿ ಇನ್ನೂ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಕಳ್ಳರು ದರೋಡೆ ಮಾಡಲು ಹೋದ ಮನೆಯಿಂದ ಹೊರಡುವ ಮುನ್ನ ಆ ಮನೆಯ ಹಿರಿಯರ ಕಾಲಿಗೆ ನಮಸ್ಕಾರ ಮಾಡಿ, ಇನ್ನು 6 ತಿಂಗಳೊಳಗೆ ನಿಮ್ಮ ಹಣವನ್ನು ವಾಪಾಸ್ ನೀಡುತ್ತೇವೆ ಎಂದು ಭರವಸೆ ನೀಡಿ ಹೋಗಿದ್ದಾರೆ!

ಇದನ್ನು ನೋಡಿದರೆ ಇಂತಹ ಕಳ್ಳರೂ ಇರುತ್ತಾರಾ? ಎಂದು ಆಶ್ಚರ್ಯವಾಗದೇ ಇರದು. ಅವರು ದರೋಡೆ ಮಾಡಲೆಂದು ಆ ಮನೆಗೆ ಬಂದಿದ್ದರು. ಆ ಮನೆಯಲ್ಲಿ ವಾಸವಾಗಿದ್ದ ಅಜ್ಜ-ಅಜ್ಜಿಯ ಎದುರು ಮಚ್ಚು, ಪಿಸ್ತೂಲ್ ಹಿಡಿದು ಮನೆಯಲ್ಲಿದ್ದ ವಸ್ತುವನ್ನೆಲ್ಲ ದೋಚಿಕೊಂಡ ಅವರು ಮನೆಯಿಂದ ಹೊರಡುವ ಮುನ್ನ ಅವರಿಬ್ಬರ ಕಾಲಿಗೂ ಬಿದ್ದು ಆಶೀರ್ವಾದ ಮಾಡುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ, ಇನ್ನು 6 ತಿಂಗಳೊಳಗೆ ದೋಚಿದ ಹಣ, ಆಭರಣವನ್ನು ವಾಪಾಸ್ ತಂದುಕೊಡುವುದಾಗಿಯೂ ಹೇಳಿ ಹೋಗಿದ್ದಾರೆ. ಹಾಗೆ ಹೋಗುವ ಮುನ್ನ ಅಜ್ಜ-ಅಜ್ಜಿಗೆ ಖರ್ಚಿಗೆಂದು 500 ರೂ. ಕೂಡ ನೀಡಿ ಹೋಗಿದ್ದಾರೆ.

ಈ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಹಿರಿಯ ಉದ್ಯಮಿಗಳಾದ ಸುರೇಂದ್ರ ವರ್ಮ ಮತ್ತು ಅವರ ಪತ್ನಿ ಇಬ್ಬರೇ ಮನೆಯಲ್ಲಿದ್ದಾಗ ದರೋಡೆಕೋರರು ಮನೆಯೊಳಗೆ ನುಗ್ಗಿದ್ದಾರೆ. ಸುರೇಂದ್ರ ವರ್ಮ ಅವರಿಗೆ ಮದುವೆಯಾದ ಮೂವರು ಹೆಣ್ಣುಮಕ್ಕಳಿದ್ದಾರೆ. ಅವರೆಲ್ಲರೂ ತಮ್ಮ ಕುಟುಂಬದೊಂದಿಗೆ ವಿದೇಶದಲ್ಲಿ ವಾಸವಾಗಿದ್ದಾರೆ. ಸುರೇಂದ್ರ ವರ್ಮ ಇದಕ್ಕೂ ಮೊದಲು ಬುಲಂದ್​ಶಹರ್​ನಲ್ಲಿ ಫ್ಯಾಕ್ಟರಿ ಹೊಂದಿದ್ದರು. ಬಳಿಕ ಅದನ್ನು ಮುಚ್ಚಲಾಗಿತ್ತು.

ಸೋಮವಾರ ರಾತ್ರಿ ಗಾಢ ನಿದ್ರೆಯಲ್ಲಿದ್ದ ಸುರೇಂದ್ರ ವರ್ಮ ದಂಪತಿ ಮನೆಗೆ ಕಳ್ಳರು ಬಂದಿದ್ದರು. ಬೆಳಗಿನ ಜಾವ 3.30ಕ್ಕೆ ಬಂದ ದರೋಡೆಕೋರರು ಮಾಸ್ಕ್ ಧರಿಸಿದ್ದರು. ಮನೆಯ ಕಿಟಕಿಯನ್ನು ಕಟ್ ಮಾಡಿ ಒಳಗೆ ಬಂದ ಅವರು ಸುರೇಂದ್ರ ವರ್ಮ ಅವರನ್ನು ಹೆದರಿಸಿ, ರೂಮಿನಲ್ಲಿ ಕೂಡಿ ಹಾಕಿದರು. ಅವರಲ್ಲೊಬ್ಬ ಪಿಸ್ತೂಲ್, ಮಚ್ಚು ಹಿಡಿದು ವರ್ಮ ಅವರನ್ನು ಹೆದರಿಸಿದ. ಬಳಿಕ ಉಳಿದವರು ಆ ಮನೆಯಲ್ಲಿದ್ದ 1.5 ಲಕ್ಷ ರೂ. ಹಣ, 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡರು.

ದರೋಡೆಕೋರರು ಮನೆಯಿಂದ ವಾಪಾಸ್ ಹೋಗುವಾಗ ಸುರೇಂದ್ರ ವರ್ಮ ದಂಪತಿಯ ಕಾಲಿಗೆ ನಮಸ್ಕಾರ ಮಾಡಿ, ನಾವು ಅನಿವಾರ್ಯವಾಗಿ ಈ ದರೋಡೆ ಮಾಡಬೇಕಾಯಿತು. ಬಲವಂತವಾಗಿ ನಮ್ಮಿಂದ ಈ ಕೆಲಸ ಮಾಡಿಸಲಾಗುತ್ತಿದೆ. ಇನ್ನು 6 ತಿಂಗಳೊಳಗೆ ನಿಮ್ಮ ಹಣ, ಚಿನ್ನಾಭರಣವನ್ನು ವಾಪಾಸ್ ತಲುಪಿಸುತ್ತೇವೆ ಎಂದು ಹೇಳಿ ಸುರೇಂದ್ರ ವರ್ಮ ಅವರ ಖರ್ಚಿಗೆ 500 ರೂ. ನೀಡಿದರು. ಇದನ್ನು ನೋಡಿದ ಸುರೇಂದ್ರ ವರ್ಮ ದಂಪತಿಗೆ ಅಚ್ಚರಿಯಾಯಿತು.

ದರೋಡೆಕೋರರು ಮನೆಯಿಂದ ಹೋದ ಬಳಿಕ ಆ ದಂಪತಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮನೆಗೆ ಬಂದ ಪೊಲೀಸರು ಏನಾದರೂ ಸುಳಿವು ಸಿಗುತ್ತದಾ? ಎಂದು ಹುಡುಕಾಡಿದ್ದಾರೆ. ಆದರೆ, ಯಾವ ಸುಳಿವೂ ಸಿಕ್ಕಿಲ್ಲ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Crime News: ಪಾರ್ಸಲ್ ಕೊಡಲು ತಡವಾಗಿದ್ದಕ್ಕೆ ರೆಸ್ಟೋರೆಂಟ್​ ಮಾಲೀಕನಿಗೆ ಗುಂಡಿಕ್ಕಿ ಕೊಂದ ಸ್ವಿಗ್ಗಿ ಡೆಲಿವರಿ ಬಾಯ್!

Crime News: ಅಕ್ರಮ ಸಂಬಂಧದ ಶಂಕೆ; ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಮುಚ್ಚಿದ ಪತಿರಾಯ!

(Crime News: Robbers touch elderly couple feet after Robbery promise to return money and jewellery after 6 months)

Published On - 7:52 pm, Wed, 1 September 21