ದಾವಣಗೆರೆ: ಎರಡನೇ ಹೆಂಡತಿಗಾಗಿ ಮೊದಲ‌‌ ಪತ್ನಿ ಕೊಂದು ಕೆರೆಗೆ ಎಸೆದ ಪತಿ; ಪೊಲೀಸ್​ ಬಲೆಗೆ ಬಿದ್ದಿದ್ದೇಗೆ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 25, 2024 | 8:41 PM

ಆಕೆ ಬಡ ಕುಟುಂಬದಲ್ಲಿ ಹುಟ್ಟಿದ ಮುದ್ದಾದ ಯುವತಿ, ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಕನಸು ಕಂಡವಳು, ಮದುವೆ , ಮಗು, ಗಂಡ ಎನ್ನುವ ಸಂಸಾರ ಸಾಗರದಲ್ಲೇ ಸುಖ ಸಂಸಾರ ನಡೆಸುತ್ತಿದ್ದಳು. ಅದೇ ಸಂಸಾರವೇ ಆಕೆಗೆ ಯಮಪಾಶವಾಗಿದೆ. ಸುಖವಾಗಿ ಕಷ್ಟ ಬಾರದಂತೆ ನೋಡಿಕೊಳ್ಳಬೇಕಿದ್ದ ಗಂಡನೇ ಯಮನಾಗಿ ಕಾಡಿದ್ದಾನೆ.

ದಾವಣಗೆರೆ: ಎರಡನೇ ಹೆಂಡತಿಗಾಗಿ ಮೊದಲ‌‌ ಪತ್ನಿ ಕೊಂದು ಕೆರೆಗೆ ಎಸೆದ ಪತಿ; ಪೊಲೀಸ್​ ಬಲೆಗೆ ಬಿದ್ದಿದ್ದೇಗೆ?
ಆರೋಪಿಗಳಾದ ಸಚಿನ್​, ಚೈತ್ರಾ
Follow us on

ದಾವಣಗೆರೆ, ಜ.25: ಎರಡನೇ ಹೆಂಡತಿಗಾಗಿ ಮೊದಲ‌‌ ಪತ್ನಿಯನ್ನೇ ಕೊಂದು ಕೆರೆಗೆ ಹಾಕಿದ ಘಟನೆ ದಾವಣಗೆರೆ (Davanagere) ತಾಲ್ಲೂಕಿನ ಕೊಡಗನೂರು ಕೆರೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲುಹಳ್ಳ ಗ್ರಾಮದ ಕಾವ್ಯ ಹೀಗೆ ಕೊಲೆಯಾಗಿರುವ ಗೃಹಿಣಿಯಾಗಿದ್ದು, ಈಕೆ ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಎನ್ನುವನನ್ನು ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದಳು, ಅವರ ಮುದ್ದಾದ ಸಂಸಾರಕ್ಕೆ ಒಂದು ಮಗು ಕೂಡ ಇತ್ತು. ಆದರೆ, ಬೇರೆ ಮಹಿಳೆಯರ ಚಪಲ ಹೊಂದಿದ್ದ ಸಚಿನ್ ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರ ಎಂಬಾಕೆಯ ಹಿಂದೆ ಬಿದ್ದಿದ್ದ. ಆಕೆಯನ್ನು ಕೂಡ ಎರಡನೇ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ. ಇನ್ನು ಇವರಿಬ್ಬರ ಸರಸಕ್ಕೆ ಕಾವ್ಯ ಅಡ್ಡಿಯಾದ ಹಿನ್ನಲೆ ಈಕೆಯನ್ನು ಕತ್ತು ಹಿಸುಕಿ ಸಾಯಿಸಿ ಗೋಣಿಚೀಲದಲ್ಲಿ ತುಂಬಿಕೊಂಡು ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಗೆ ತಂದು ಹಾಕಿದ್ದಾರೆ.

ಪೊಲೀಸ್​ ಭಾಷೆಯಲ್ಲಿ ವಿಚಾರಿಸಿದಾಗ ಬಾಯ್ಬಿಟ್ಟ ಗಂಡ

ಇತ್ತ ಕಾವ್ಯ ಕಾಣದೇ ಇರುವುದರಿಂದ ಅವರ ತವರು‌‌ ಮನೆಯವರು ಪೊಲೀಸರಿಗೆ‌ ದೂರು ನೀಡಿದ್ದಾರೆ. ಅನುಮಾನಗೊಂಡ ಪೊಲೀಸರು ಗಂಡ ಸಚಿನ್​ನನ್ನು ಅವರ ಸ್ಟೈಲ್ ನಲ್ಲಿ ವಿಚಾರ ಮಾಡಿದಾಗ ಸತ್ಯಾಂಶ ಹೊರ‌ಬಂದಿದೆ. ಇನ್ನು ಕಾವ್ಯ ಕಳೆದ ಐದು ವರ್ಷ ಸಚಿನ್ ಜೊತೆ ಸಂಸಾರ ಮಾಡಿದ್ದು, ಆದರೆ ಇತ್ತೀಚಿಗೆ ಈತನ ವರ್ತನೆಯೇ ಬೇರೆಯಾಗಿತ್ತು. ಅಲ್ಲದೆ ಚೈತ್ರಳಾ ಜೊತೆ ಕಣ್ಣಮುಚ್ಚಾಲೆ ಆಟದ ವಿಚಾರ ತಿಳಿಯುತ್ತಿದ್ದಂತೆ ಜಗಳ‌ಮಾಡಿಕೊಂಡು ತನ್ನ ತವರು ಮನೆಗೆ ಹೋಗಿದ್ದಳಂತೆ. ಕಳೆದ ಜನವರಿ 6 ರಂದು ಆಕೆಯನ್ನು ತವರು ಮನೆಯಿಂದ ಕಾಗಳಗೆರೆ ಗ್ರಾಮಕ್ಕೆ ಕರೆತಂದಿದ್ದ. ಮತ್ತೆ ಜಗಳವಾಗುತ್ತಿದ್ದಂತೆ ಸಚಿನ್ ಹಾಗೂ ಚೈತ್ರ ಸೇರಿಕೊಂಡು ಕಾವ್ಯಾಳ‌ ಕತೆ ಮುಗಿಸಿದ್ದಾರೆ.

ಇದನ್ನೂ ಓದಿ:ಶಿಕ್ಷಕಿ ಕೊಲೆಗೆ ಕಾರಣವೇನು? ಹತ್ಯೆಗೆ ಮುನ್ನ ಆರೋಪಿ ಏನೆಲ್ಲಾ ಪ್ಲ್ಯಾನ್ ಮಾಡಿದ್ದ? ಮಾಹಿತಿ ಬಿಚ್ಚಿಟ್ಟ ಎಸ್ಪಿ

ಅನುಮಾನಗೊಂಡ ಪೋಷಕರಿಂದ ಠಾಣೆಗೆ ದೂರು

ಬಳಿಕ ಇಲ್ಲಿಯೇ ಇದ್ದರೆ ನಮ್ಮ‌‌ ಮೇಲೆ ಬರುತ್ತೆ ಎಂದು ಗೋಣಿಚೀಲದಲ್ಲಿ ಹೆಣವನ್ನು ಹಾಕಿಕೊಂಡು ಕೊಡಗನೂರು‌ ಕೆರೆಗೆ ತಂದು ಹಾಕಿದ್ದಾರೆ. ತವರು ಮನೆಯಿಂದ ಗಂಡನ ಮನೆಗೆ ಹೋದ ಮಗಳು ಕಾಣೆಯಾಗಿದ್ದರಿಂದ ಅನುಮಾನಗೊಂಡ ತವರುಮನೆಯವರು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೀಟ್ ಕೊಟ್ಟಿದ್ದಾರೆ. ಆಗ ಸಚಿನ್​ನನ್ನು ವಿಚಾರಣೆ‌ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.

19 ದಿನದ ಬಳಿಕ ಶವ ಪತ್ತೆ

ಸುಮಾರು 19 ದಿನದ ಬಳಿಕ ಕಾವ್ಯಾಳ ಶವ ಪತ್ತೆಯಾಗಿದ್ದು‌. ಕೊಳತ ಸ್ಥಿತಿಯಲ್ಲಿರುವ ಕಾವ್ಯಾಳ‌ ಮೃತದೇಹವನ್ನು ಮಾಯಕೊಂಡ‌ ಠಾಣೆ ಪೊಲೀಸರು ದಾವಣಗೆರೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ಮತ್ತಷ್ಟು ತನಿಖೆ‌‌ ನಡೆಸುತ್ತಿದ್ದಾರೆ. ಏನೇ ಆಗಲಿ ಹೆಂಡತಿಯನ್ನು ಬಿಟ್ಟು ಬೇರೆ ಮಹಿಳೆಯ ಮೋಜಿಗೆ ಬಿದ್ದ ಸಚಿನ್​ನಿಂದ ಕಾವ್ಯ ಹತ್ಯೆಯಾಗಿದ್ದು, ಮದುವೆಯಾಗಿ ಕನಸಿನ ಗೋಪುರ ಕಟ್ಟಿಕೊಂಡಿದ್ದ ಕಾವ್ಯ ಮಾತ್ರ ಹೀನಾಯವಾಗಿ ಕೊಲೆಯಾಗಿದ್ದು‌ ಮಾತ್ರ ದುರದೃಷ್ಟಕರ,. ಕೊಲೆ‌ ಆರೋಪಿಗಳಾದ ಸಚಿನ್ ಹಾಗೂ ಚೈತ್ರ ಈಗ ಜೈಲಿನಲ್ಲಿ ಮುದ್ದೆ ಮುರಿಯುವ ಸ್ಥಿತಿ ಬಂದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ