ದೆಹಲಿ: ನಾಲ್ಕು ತಿಂಗಳ ಕಾಲ ದೆಹಲಿಯ (Delhi) ಐಷಾರಾಮಿ ಹೋಟೆಲ್‌ನಲ್ಲಿ ತಂಗಲು ಅಬುಧಾಬಿ ರಾಜಮನೆತನದ ಉದ್ಯೋಗಿಯಂತೆ ನಟಿಸಿದ ವ್ಯಕ್ತಿಯೊಬ್ಬರು ₹ 23 ಲಕ್ಷ ಬಿಲ್ ಪಾವತಿ ಮಾಡದೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಶನಿವಾರದಂದು ಲೀಲಾ ಪ್ಯಾಲೇಸ್(Leela Palace) ಹೋಟೆಲ್ ಆಡಳಿತವು ನೀಡಿದ ದೂರಿನ ಮೇರೆಗೆ ವಂಚನೆ ಮತ್ತು ಕಳ್ಳತನದ ಆರೋಪ ಹೊತ್ತಿರುವ ಮೊಹಮ್ಮದ್ ಷರೀಫ್ ಎಂಬಾತನನ್ನು ದೆಹಲಿ ಪೊಲೀಸರು ಹುಡುಕುತ್ತಿದ್ದಾರೆ. ಷರೀಫ್ ಆಗಸ್ಟ್ 1 ರಂದು ಲೀಲಾ ಪ್ಯಾಲೇಸ್‌ನ 427 ನೇ ಕೊಠಡಿಗೆ ಚೆಕ್ ಇನ್ ಆಗಿದ್ದು ನವೆಂಬರ್ 20 ರಂದು ಯಾರಿಗೂ ಹೇಳದೆ ಅಲ್ಲಿಂದ ಓಡಿ ಹೋಗಿದ್ದ. ಈತ ಕೊಠಡಿಯಿಂದ ಬೆಳ್ಳಿ ಪಾತ್ರೆಗಳು ಮತ್ತು ಮುತ್ತಿನ ತಟ್ಟೆ ಸೇರಿದಂತೆ ಹಲವಾರು ವಸ್ತುಗಳನ್ನು ಕದ್ದಿದ್ದಾನೆ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.
ಆಗಸ್ಟ್‌ನಲ್ಲಿ ಹೋಟೆಲ್‌ಗೆ ಆಗಮಿಸಿದಾಗ ಷರೀಫ್ ತಾನು ಯುಎಇ ನಿವಾಸಿ ಮತ್ತು ಅಬುಧಾಬಿ ರಾಜಮನೆತನದ ಶೇಖ್ ಫಲಾಹ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ಸಿಬ್ಬಂದಿಗೆ ತಿಳಿಸಿದ್ದ .ತಾನು ಶೇಖ್ ಅವರೊಂದಿಗೆ ವೈಯಕ್ತಿಕವಾಗಿ ಕೆಲಸ ಮಾಡಿದ್ದೇನೆ.ಅವರು ಅಧಿಕೃತ ವ್ಯವಹಾರಕ್ಕಾಗಿ ಭಾರತದಲ್ಲಿದ್ದರು ಎಂದು ಷರೀಫ್ ಹೇಳಿದ್ದಾನೆ. ತಾನು ಹೇಳಿದ್ದು ನಿಜ ಎಂದು ದೃಢೀಕರಿಸಲು ಬ್ಯುಸಿನೆಸ್ ಕಾರ್ಡ್, ಯುಎಇ ನಿವಾಸಿ ಕಾರ್ಡ್ ಮತ್ತು ಇತರ ದಾಖಲೆಗಳನ್ನು ಸಹ ಆತ ತಯಾರಿಸಿದ್ದ. ಈತ ಯುಎಇಯಲ್ಲಿನ ತನ್ನ ಜೀವನದ ಬಗ್ಗೆ ಹೋಟೆಲ್ ಸಿಬ್ಬಂದಿಯೊಂದಿಗೆ ಮಾತನಾಡುತ್ತಲೇ ಇರುತ್ತಿದ್ದ ಎಂದು ಹೇಳಲಾಗಿದೆ.
ಇದನ್ನೂ ಓದಿ: Viral News: ದುಬಾರಿ ಗಿಫ್ಟ್ ಕೊಡಲಿಲ್ಲವೆಂದು ಹೆಂಡತಿ ಮಾನಸಿಕ ಹಿಂಸೆ ನೀಡುತ್ತಾಳೆ; ಪೊಲೀಸರಿಗೆ ಗಂಡನಿಂದ ದೂರು
ಈ ದಾಖಲೆಗಳು ನಕಲಿ ಎಂದು ಶಂಕಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಷರೀಫ್ ನಾಲ್ಕು ತಿಂಗಳ ವಾಸ್ತವ್ಯದ ಕೊಠಡಿ ಮತ್ತು ಸೇವೆಗಳ ಬಿಲ್ ₹ 35 ಲಕ್ಷ ಆಗಿದೆ. ₹ 11.5 ಲಕ್ಷ ಪಾವತಿಸಿ ಉಳಿದ ಹಣವನ್ನು ನೀಡದೆ ಆತ ಹೋಟೆಲ್ ಬಿಟ್ಟಿದ್ದಾನೆ. ನ.20ರಂದು ಹೋಟೆಲ್ ನಿಂದ ಪರಾರಿಯಾಗಿದ್ದ ದಿನ ₹ 20 ಲಕ್ಷದ ಚೆಕ್ ಅನ್ನು ಸಿಬ್ಬಂದಿಗೆ ನೀಡಿದ್ದ.
ವ್ಯಕ್ತಿಯನ್ನು ಗುರುತಿಸಲು ದೆಹಲಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ