ರೋಗಿಯಂತೆ ನಟಿಸಿ ಡಾಕ್ಟರ್ ಮನೆ ದೋಚಿ ಹೋದ ಸ್ವಿಗ್ಗಿ ಡೆಲಿವರಿ ಬಾಯ್

|

Updated on: Sep 23, 2023 | 7:31 PM

ರೋಗಿಯಂತೆ ನಟಿಸಿ 70 ವರ್ಷದ ವೈದ್ಯೆಯನ್ನು ಚಾಕು ತೋರಿಸಿ ದರೋಡೆ ಮಾಡಿದ್ದಕ್ಕಾಗಿ 23 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ದರೋಡೆ ಮಾಡಿದ ಬಳಿಕ ಆತ ಕ್ಷಮಿಸಿ ಎಂದು ಚೀಟಿಯನ್ನು ಕೂಡ ಬರೆದಿಟ್ಟು ಹೋಗಿದ್ದಾನೆ.

ರೋಗಿಯಂತೆ ನಟಿಸಿ ಡಾಕ್ಟರ್ ಮನೆ ದೋಚಿ ಹೋದ ಸ್ವಿಗ್ಗಿ ಡೆಲಿವರಿ ಬಾಯ್
ಡೆಲಿವರಿ ಬಾಯ್
Image Credit source: iStock
Follow us on

ಮುಂಬೈ: ರೋಗಿಯೆಂದು ಹೇಳಿಕೊಂಡು ಡಾಕ್ಟರ್ ಮನೆಗೆ ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಆ ವೈದ್ಯರಿಗೆ ಚಾಕು ತೋರಿಸಿ, ಅವರ ಮನೆಯಲ್ಲಿ ದರೋಡೆ ಮಾಡಿದ್ದಾನೆ. ಈ ವಿಚಿತ್ರ ಘಟನೆ ಮಹಾರಾಷ್ಟ್ರದ ಮುಂಬೈನ ಪೆಡ್ಡರ್ ರೋಡ್ ಪ್ರದೇಶದಲ್ಲಿ ನಡೆದಿದೆ. ಗುರುವಾರ ಈ ಘಟನೆ ನಡೆದಿದ್ದು, ಬಳಿಕ ತಾನು ಮಾಡಿದ ಕೆಲಸಕ್ಕೆ ಕ್ಷಮೆ ಕೋರಿ ಚೀಟಿ ಬರೆದಿಟ್ಟು ಹೋಗಿದ್ದಾನೆ.

ರೋಗಿಯಂತೆ ನಟಿಸಿ 70 ವರ್ಷದ ವೈದ್ಯೆಯನ್ನು ಚಾಕು ತೋರಿಸಿ ದರೋಡೆ ಮಾಡಿದ್ದಕ್ಕಾಗಿ 23 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೂಲತಃ ಉತ್ತರ ಪ್ರದೇಶದವನಾದ ಅರ್ಜುನ್ ಸೋಂಕರ್ ಎಂದು ಗುರುತಿಸಲಾಗಿದ್ದು, ಸ್ವಿಗ್ಗಿ ಆ್ಯಪ್​ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈ ವರ್ಷದ ಮೇ ತಿಂಗಳಿನಿಂದ ಆತ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಪೊಲೀಸರ ಹೆಸರಿನಲ್ಲಿ ನಕಲಿ ರೈಡ್ ಮಾಡಿ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್

70 ವರ್ಷದ ವೈದ್ಯೆ ಮಂದಾಕಿನಿ ಪಿರಾಂಕರ್ ಅವರ ಕ್ಲಿನಿಕ್​ಗೆ ರೋಗಿಯಂತೆ ಬಂದ ಅರ್ಜುನ್ ಅಲ್ಲೇ ಪಕ್ಕದಲ್ಲಿದ್ದ ಮಂದಾಕಿನಿ ಅವರ ಮನೆಗೆ ನುಗ್ಗಿ ದರೋಡೆ ಮಾಡಿದ್ದಾನೆ. ಮಂದಾಕಿನಿ ಅವರು ಕಳೆದ 25 ವರ್ಷಗಳಿಂದ ಇನ್ನೊಬ್ಬ ಮಹಿಳಾ ವೈದ್ಯೆಯೊಂದಿಗೆ ತನ್ನ ಕ್ಲಿನಿಕ್ ಅನ್ನು ನಡೆಸುತ್ತಿದ್ದಾರೆ.

ಮಂದಾಕಿನಿ ಅವರ ಬಳಿ ಅರ್ಜುನ್ ಸೋಂಕರ್ ತನ್ನನ್ನು ಅವಿನಾಶ್ ಪಾಸ್ವಾನ್ ಎಂದು ಪರಿಚಯಿಸಿಕೊಂಡಿದ್ದಾನೆ. ತನಗೆ ತೀವ್ರ ಅನಾರೋಗ್ಯವಾಗಿದೆ ಎಂದು ಹೇಳಿದ್ದಾನೆ. ಆಗ ಮಂದಾಕಿನಿ ಆತನ ಬಿಪಿ ಚೆಕ್ ಮಾಡಿ, ಪ್ರಿಸ್ಕ್ರಿಪ್ಷನ್ ಬರೆದುಕೊಟ್ಟಿದ್ದಾರೆ. ಆ ಕ್ಲಿನಿಕ್​ನಿಂದ ಹೊರಡುವಾಗ ಮಂದಾಕಿನಿ ಅವರ 200 ರೂ. ಕನ್ಸಲ್ಟೇಷನ್ ಫೀಸ್ ಅನ್ನು ಕೂಡ ಪಾವತಿ ಮಾಡಿದ್ದಾನೆ.

ಇದನ್ನೂ ಓದಿ: ಕೋಲಾರ: ಒಂಬತ್ತು ಇಂಚು ಜಾಗಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಅದಾಗಿ ಕೆಲವೇ ಸೆಕೆಂಡುಗಳಲ್ಲಿ ವಾಪಾಸ್ ಬಂದ ಆತ ತನ್ನ ಬ್ಯಾಗ್​ನಿಂದ ಚಾಕು ತೆಗೆದು ಮಂದಾಕಿನಿಯವರನ್ನು ಹೆದರಿಸಿ, ಪಕ್ಕದಲ್ಲಿದ್ದ ಆಕೆಯ ಮನೆಗೆ ಹೋಗಿ 1 ಲಕ್ಷ ರೂ. ಮೌಲ್ಯದ ಚಿನ್ನದ ಸರ ಮತ್ತು ಪೆಂಡೆಂಟ್, ಹಣವನ್ನು ದೋಚಿದ್ದಾನೆ. ಬಳಿಕ ಆಕೆಯನ್ನು ದೂರಕ್ಕೆ ತಳ್ಳಿ ಓಡಿ ಹೋಗಿದ್ದಾನೆ.

ಹಾಗೆ ಓಡಿಹೋಗುವ ಮುನ್ನ ಕ್ಷಮಿಸಿ ಎಂದು ಚೀಟಿಯಲ್ಲಿ ಬರೆದಿಟ್ಟು ಹೋಗಿದ್ದಾನೆ. ಆತನಿಂದ ಚಾಕು ಸಹಿತ ಸುಮಾರು 16,000 ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರ್ಜುನ್ ಈಗ ಪೊಲೀಸರ ವಶದಲ್ಲಿದ್ದಾನೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ