ಪ್ರತಿಷ್ಟಿತ ವಿಲ್ಲಾದಲ್ಲಿ ಕೆಲಸ ಮಾಡ್ತಿದ್ದ ಯುವಕ ಸಾವು; ಮನೆ ಮಗನನ್ನ ಕಳೆದುಕೊಂಡು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 14, 2024 | 3:37 PM

ಆ ಕುಟುಂಬಕ್ಕೆ ಆ ಯುವಕನೇ ಆಧಾರವಾಗಿದ್ದು, ಓದಬೇಕಾದ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿಕೊಂಡು ಕುಟುಂಬದ ಜವಬ್ದಾರಿಯನ್ನ ಹೆಗಲ ಮೇಲೆ ಹಾಕಿಕೊಂಡಿದ್ದ. ಜೊತೆಗೆ ಬರ್ತಿದ್ದ ಅಲ್ಪ ಸ್ವಲ್ಪ ಸಂಬಳದಲ್ಲೆ ಕುಟುಂಬಸ್ಥರೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ. ಆದ್ರೆ, ಏಪ್ರಿಲ್​.12 ರ ಸಂಜೆ ಕುಟುಂಬಕ್ಕೆ ಆಧಾರವಾಗಿದ್ದ ಕೆಲಸವೇ ಆತನ ಜೀವಕ್ಕೆ ಮುಳುವಾಗಿಬಿಟ್ಟಿದೆ.

ಪ್ರತಿಷ್ಟಿತ ವಿಲ್ಲಾದಲ್ಲಿ ಕೆಲಸ ಮಾಡ್ತಿದ್ದ ಯುವಕ ಸಾವು; ಮನೆ ಮಗನನ್ನ ಕಳೆದುಕೊಂಡು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ವಿಲ್ಲಾದಲ್ಲಿ ಕೆಲಸ ಮಾಡ್ತಿದ್ದ ಯುವಕ ಸಾವು
Follow us on

ಬೆಂಗಳೂರು ಗ್ರಾಮಾಂತರ, ಏ.14: ಜಿಲ್ಲೆಯ ದೇವನಹಳ್ಳಿ(Devanahalli) ತಾಲೂಕಿನ ನಂದಿಬೆಟ್ಟ ರಸ್ತೆಯಲ್ಲಿರುವ ಪ್ರೇಸ್ಟಿಜ್ ಗಾಲ್ಪ್ ಶೈರ್​ನ ವಿಲ್ಲಾಗಳಲ್ಲಿ ಪ್ರತಿಷ್ಟಿತ ಜನರು ಮನೆ ಮಾಡಿದ್ದು, ನಿತ್ಯ ನೂರಾರು ಜನ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ. ಅದೇ ರೀತಿ ದೊಡ್ಡಬಳ್ಳಾಪುರ ತಾಲೂಕಿನ ದಂಡುದಾಸ ಕೊಡಿಗೇಹಳ್ಳಿ ನಿವಾಸಿ ಶೋಭರಾಜ್ ಎನ್ನುವ ಯುವಕ ಕಳೆದ ಎರಡು ಮೂರು ವರ್ಷಗಳಿಂದ ಇದೇ ವಿಲ್ಲಾದಲ್ಲಿ ಕೆಲಸ ಮಾಡುತ್ತಿದ್ದ. ಅದರಂತೆ ಏ.12 ರ ಸಂಜೆ ಸಹ ವಿಲ್ಲಾದಲ್ಲಿ ಕೆಲಸ ಮಾಡಲು ಬಂದಿದ್ದ  ಶೋಭರಾಜ್, ಸಂಜೆ ಸ್ವಿಮ್ಮಿಂಗ್ ಫೂಲ್​​ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಮೃತ ಶೋಭರಾಜ್​​ಗೆ ಈಜಲು ಸಹ ಬರುತ್ತಿತ್ತು. ಹೀಗಿರುವಾಗ ಶೋಭರಾಜ್ ಸ್ವಿಮ್ಮಿಂಗ್ ಪೂಲ್​ನಲ್ಲಿ ಅನುಮಾನಾಸ್ವದ ರೀತಿಯಲ್ಲಿ ಪತ್ತೆಯಾಗಿದ್ದು, ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಸ್ವಿಮ್ಮಿಂಗ್ ಪೂಲ್​ನಲ್ಲಿ ಸಂಜೆ 4 ಗಂಟೆ ಸುಮಾರಿಗೆ ಶೋಭರಾಜ್ ಶವವಾಗಿ ಪತ್ತೆಯಾಗಿದ್ದು, ರಾತ್ರಿ 8 ಗಂಟೆಯವರೆಗೂ ವಿಲ್ಲಾಗಳ ಮ್ಯಾನೇಜ್ಮೆಂಟ್ ಆಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಬಂದು ನೋಡಲಿಲ್ವಂತೆ. ಅಲ್ಲೆ ಈಜು ಬರ್ತಿದ್ದ ಶೋಭರಾಜು ಸ್ವೀಮ್ಮಿಂಗ್ ಪೂಲ್​ಗೆ ಬಿದ್ದು ಹೇಗೆ ಸತ್ತ ಎಂದು ಸಂಬಂಧಿಕರು ಪ್ರಶ್ನೆ ಮಾಡುತ್ತಿದ್ದು, ಯುವಕನ ಸಾವಿಗೆ ವಿಲ್ಲಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಉಡುಪಿ: ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಮುಳುಗಿ ಬಾಲಕ ಸಾವು; ಕೊನೆ ಕ್ಷಣದ ವೀಡಿಯೋ ಸೆರೆ

ಇನ್ನು ಮೃತ ಯುವಕ, ಕುಟುಂಬಕ್ಕೆ ಆಧಾರವಾಗಿದ್ದ. ಆದರೆ ಆತನ ದಿಢೀರ್​ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಈ ಹಿನ್ನಲೆ ಅವರ ಕುಟುಂಬಕ್ಕೆ ನ್ಯಾಯ ಕೊಡಿಸಿ  ಮೃತ ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಒಟ್ಟಾರೆ ನಿತ್ಯ ನೂರಾರು ಜನ ಕೆಲಸ ಮಾಡುತ್ತಾ ಓಡಾಡುತ್ತಿದ್ದರೂ ಯುವಕನೊಬ್ಬ ನೀರಿಗೆ ಬಿದ್ದು ಸಾವನ್ನಪ್ಪಿರುವುದು ಸಹಜವಾಗೆ ಕುಟುಂಬಸ್ಥರ ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತು ವಿಶ್ವನಾಥಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ತನಿಖೆ ನಂತರ ಯುವಕನದ್ದು ಸಹಜ ಸಾವೋ ಅಥವಾ ಅಸಹಜ ಸಾವೋ ಎನ್ನುವುದು ಬೆಳಕಿಗೆ ಬರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ