ಸೆನ್ಸೇಷನಲ್ ಕ್ರೈಮ್ ಕತೆಗಳು: ಸರವಣ ಭವನ ಸಿಬ್ಬಂದಿಯ ಅಣ್ಣ, ದೋಸಾ ಕಿಂಗ್ ರಾಜಗೋಪಾಲ ಜ್ಯೋತಿಷಿಯ ಮಾತು ಕೇಳಿ ಕೊಲೆ ಮಾಡಿಸಿಬಿಟ್ಟ!!
ತೀರ ಧಾರ್ಮಿಕ ಸ್ವಭಾವ ಮತ್ತು ಜ್ಯೋತಿಷಿಗಳು ಹೇಳಿದ್ದನ್ನು ಅನೂಚಾನಾಗಿ ಪಾಲಿಸುತ್ತಿದ್ದ ರಾಜಗೋಪಾಲ ಎರಡು ಸಂಗತಿಗಳ ಬಗ್ಗೆ ಕಟ್ಟುನಿಟ್ಟಾಗಿದ್ದ. ಅವನ ಹೋಟೆಲ್ ನಲ್ಲಿ ತಯಾರಾಗುತ್ತಿದ್ದ ತಿಂಡಿ ಮತ್ತು ಊಟದ ಗುಣಮಟ್ಟದ ಬಗ್ಗೆ ಅವನ್ಯಾವತ್ತೂ ರಾಜಿ ಮಾಡಿಕೊಂಡವನಲ್ಲ. ಎರಡನೇ ಸಂಗತಿಯೆಂದರೆ ಅವನು ಹೋಟೆಲ್ ಸಿಬ್ಬಂದಿಯನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ.
ಭಾರತವು ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗಿರುವುದರಿಂದ ಸ್ವಾಭಾವಿಕವಾಗಿಯೇ ಇಲ್ಲಿ ನಡೆಯುವ ಅಪರಾಧಗಳ ಸಂಖ್ಯೆಯೂ (crime rate) ಜಾಸ್ತಿ. ನಮ್ಮ ದೇಶದ ಪ್ರತಿ ಮೂಲೆಯಲ್ಲಿ ಡಕಾಯಿತಿ, ಕಳ್ಳತನ, ಹಲ್ಲೆ, ಕೊಲೆ, ರೇಪ್ ಮೊದಲಾದ ಅಪರಾಧಗಳು ಪ್ರತಿದಿನ ನಡೆಯುತ್ತವೆ. ಕೇವಲ ರೂ. 50 ಗಳಿಗೂ ನಮ್ಮಲ್ಲಿ ಕೊಲೆ ನಡೆಯುತ್ತವೆ. ಎಷ್ಟೋ ಲೈಂಗಿಕ ಅತ್ಯಾಚಾರದ (rape) ಪ್ರಕರಣಗಳು ನಾನಾ ಕಾರಣಗಳಿಗೆ ಬೆಳಕಿಗೆ ಬಾರದೆ ಮುಚ್ಚಿಹೋಗುತ್ತವೆ. ರೇಪ್ ನಡೆಸಿದ ನಂತರ ಸಂತ್ರಸ್ತೆಯನ್ನು ಜೀವಂತ ಸುಟ್ಟುಹಾಕಿದ ಪ್ರಕರಣಗಳ ಬಗ್ಗೆ ನಾವು ಕೇಳಿಸಿಕೊಳ್ಳುತ್ತಿಲ್ಲವೇ?
ಪ್ರಕರಣ ಯಾವುದೇ ಆಗಿರಲಿ, ಒಂದೆರಡು ವಾರಗಳವರಗೆ ಚರ್ಚೆಯಲ್ಲಿದ್ದು ನಂತರ ನಮ್ಮ ಸ್ಮೃತಿಪಟಲದಿಂದ ಮರೆಯಾಗಿಬಿಡುತ್ತದೆ. ಭಾರತ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯೂ ನಮಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ, ಹಿಂದೆ ನಡೆದ ಪ್ರಕರಣಗಳು ಏನಾದವು, ಅಪರಾಧಿಗಳಿಗೆ ಶಿಕ್ಷೆಯಾಯಿತೆ, ಸಂತ್ರಸ್ತರು ಏನಾದರು ಮೊದಲಾದ ಸಂಗತಿಗಳು ನಮ್ಮ ಗಮನಕ್ಕೆ ಬರೋದೇ ಇಲ್ಲ.
ಈ ಹಿನ್ನೆಲೆಯಲ್ಲಿ ಕೆಲವು ಸೆನ್ಸೇಷನಲ್ ಪ್ರಕರಣಗಳನ್ನು ನಾವು ಮೆಲಕು ಹಾಕೋಣ. ಇವತ್ತು ನಾವು ಚೆನ್ನೈನ ಹೋಟೆಲ್ ಉದ್ಯಮಿ ಮತ್ತು ‘ದೋಸಾ ಕಿಂಗ್’ ಎಂದು ಪ್ರಸಿದ್ಧನಾಗಿದ್ದ ಪಿ ರಾಜಗೋಪಾಲ ಪ್ರಕರಣವನ್ನು ಚರ್ಚಿಸೋಣ. ಇದು ಸರವಣ ಭವನ್ ಮರ್ಡರ್ ಕೇಸ್ ಅಂತಲೇ ಖ್ಯಾತಿ ಹೊಂದಿದೆ.
ಭಾರೀ ಕುಳ!
ರಾಜಗೋಪಾಲನ ಬದುಕನ್ನು ಅವಲೋಕಿಸಿದರೆ ಅವನು ಕೊಲೆ ಮಾಡಿಸುವಷ್ಟು ಕೀಳುಮಟ್ಟಕ್ಕಿಳಿಯಬಲ್ಲ ಅಂತ ಅನಿಸೋದೇ ಇಲ್ಲ. ಟ್ಯುಟಿಕೊರಿನ್ ನಲ್ಲಿ ಈರುಳ್ಳಿ ಮಾರಿ ಕುಟುಂಬ ಸಲಹುತ್ತಿದ್ದ ವ್ಯಕ್ತಿಯ ಮಗನಾಗಿದ್ದ ಅವನು 1981 ರಲ್ಲಿ ಹೊಟ್ಟೆಪಾಡಿಗಾಗಿ ಚೆನೈಗೆ ಬಂದು ರಸ್ತೆಗಳಲ್ಲಿ ಮಲಗಿ ಫುಟ್ ಪಾತ್ ಗಳಲ್ಲಿ ಅಲೆದಾಡುತ್ತಾ, ಒಂದು ಕಿರಾಣಾ ಅಂಗಡಿ ಶುರುಮಾಡಿ, ಒಂದಷ್ಟು ದುಡ್ಡು ಜಮಾ ಮಾಡಿಕೊಂಡು ಹೋಟೆಲ್ ಉದ್ಯಮಕ್ಕಿಳಿದವನು ಸರವನ ಭವನ್ ರೆಸ್ಟುರಾಂಟ್ ಗಳನ್ನು ಸ್ಥಾಪಿಸಿ ಭಾರತದಲ್ಲಿ 39 ಮತ್ತು ವಿದೇಶಗಳಲ್ಲಿ 43 ಹೋಟೆಲ್ ಗಳನ್ನು ಆರಂಭಿಸುವಷ್ಟರ ಮಟ್ಟಿಗೆ ಬೆಳೆದ. ಒಂದು ಅಂದಾಜಿನ ಪ್ರಕಾರ 2017ರಲ್ಲಿ ಅವನು ಸುಮಾರು ರೂ. 3000 ಕೋಟಿ ಆಸ್ತಿಯ ಒಡೆಯನಾಗಿದ್ದ!
ಸಿಬ್ಬಂದಿಗೆ ಪ್ರೀತಿಯ ಅಣ್ಣ!
ತೀರ ಧಾರ್ಮಿಕ ಸ್ವಭಾವ ಮತ್ತು ಜ್ಯೋತಿಷಿಗಳು ಹೇಳಿದ್ದನ್ನು ಅನೂಚಾನಾಗಿ ಪಾಲಿಸುತ್ತಿದ್ದ ರಾಜಗೋಪಾಲ ಎರಡು ಸಂಗತಿಗಳ ಬಗ್ಗೆ ಕಟ್ಟುನಿಟ್ಟಾಗಿದ್ದ. ಅವನ ಹೋಟೆಲ್ ನಲ್ಲಿ ತಯಾರಾಗುತ್ತಿದ್ದ ತಿಂಡಿ ಮತ್ತು ಊಟದ ಗುಣಮಟ್ಟದ ಬಗ್ಗೆ ಅವನ್ಯಾವತ್ತೂ ರಾಜಿ ಮಾಡಿಕೊಂಡವನಲ್ಲ. ಎರಡನೇ ಸಂಗತಿಯೆಂದರೆ ಅವನು ಹೋಟೆಲ್ ಸಿಬ್ಬಂದಿಯನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ.
ಅವರ ಮಕ್ಕಳ ಓದು, ಮದುವೆ, ಕಾಯಿಲೆ ಕಷ್ಟಗಳಿಗೆ ಅವರು ಕೇಳುವಷ್ಟು ಹಣ ನೀಡುತ್ತಿದ್ದ. ಹಾಗಾಗಿ ಅವನ ಸಿಬ್ಬಂದಿ ವರ್ಗವೆಲ್ಲ ಅವನನ್ನು ಪ್ರೀತಿ ಮತ್ತು ಗೌರವದಿಂದ ‘ಅಣ್ಣಾ’ ಅಂತ ಕರೆಯುತ್ತಿದ್ದರು. ಇಂಥ ‘ಅಣ್ಣ’ ಒಂದು ಕೊಲೆ ಮಾಡಿಸಬಹುದಿತ್ತೇ? ಆಗಲೇ ಹೇಳಿದಂತೆ ಜ್ಯೋತಿಷಿಗಳ ಮಾತನ್ನು ಕಣ್ಣು ಮುಚ್ಚಿ ನಂಬುತ್ತಿದ್ದ ಮತ್ತು ಪಾಲಿಸುತ್ತಿದ್ದ ರಾಜಗೋಪಾಲಗೆ ಒಬ್ಬ ಜ್ಯೋತಿಷಿಯ ಮಾತೇ ಮುಳುವಾಯಿತು.
ಅಸಲಿಗೆ ನಡೆದಿದ್ದೇನು?
ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿದ್ದ ರಾಜಗೋಪಾಲಗೆ ಜ್ಯೋತಿಷಿಯೊಬ್ಬ ಅವನ ಸರವಣ ಭವನದ ಚೆನೈ ಶಾಖೆಯೊಂದರಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮಗಳು ಜೀವಜ್ಯೋತಿಯನ್ನು ಮದುವೆಯಾದರೆ, ಅದೃಷ್ಟ ಒಲಿಯುತ್ತದೆ, ವ್ಯಾಪಾರ ಮತ್ತಷ್ಟು ವೃದ್ಧಿಸುತ್ತದೆ ಅಂತ ಹೇಳಿದ್ದ. ಆದರೆ ಜೀವಜ್ಯೋತಿ ಹೆಸರಿನ ಯುವತಿ ಪ್ರಿನ್ಸ್ ಶಾಂತಕುಮಾರ ಹೆಸರಿನ ಯುವಕನನ್ನು ಲವ್ ಮಾಡುತ್ತಿದ್ದಳು ಮತ್ತು ಅವನನ್ನು ಮದುವೆಯೂ ಅಗಿಬಿಟ್ಟಳು.
ರಾಜಗೋಪಾಲನಿಗೆ ತನ್ನ ಅರ್ಧದಷ್ಟು ವಯಸ್ಸಿವಳಾಗಿದ್ದ ಜೀವಜ್ಯೋತಿ ಮೇಲೆ ಅಷ್ಟಲ್ಲಾಗಲೇ ವಿಪರೀತ ವ್ಯಾಮೋಹ ಹುಟ್ಟಿಕೊಂಡು ಬಿಟ್ಟಿತ್ತು. ಹೇಗಾದರೂ ಮಾಡಿ ಅವಳನ್ನು ಒಲಿಸಿಕೊಂಡು ಮದುವೆಯಾಗಲೇಬೇಕೆಂಬ ಹಟಕ್ಕೆ ಬಿದ್ದುಬಿಟ್ಟಿದ್ದ. ಅವಳ ಮತ್ತು ಅವಳ ಗಂಡನ ವಿಶ್ವಾಸ ಗಳಿಸಿಕೊಳ್ಳಲು ರಾಜಗೋಪಾಲ ಚಿನ್ನಾಭರಣ, ಬೆಲೆಬಾಳುವ ಬಟ್ಟೆ ಮುಂತಾದವುಗಳನ್ನು ಉಡುಗೊರೆಯಾಗಿ ನೀಡತೊಡಗಿದ. ಅವರೊಂದು ಅಂಗಡಿ ಶುರುಮಾಡಲು ಹಣವನ್ನೂ ನೀಡಿದ. ಇಷ್ಟೆಲ್ಲ ಮಾಡಿದರೂ ಜೀವಜ್ಯೋತಿಗೆ ಅವಳ ತಂದೆ ವಯಸ್ಸಿನ ರಾಜಗೋಪಾಲ ಮೇಲೆ ಪ್ರೀತಿ ಹುಟ್ಟಲಿಲ್ಲ.
ಅವಳನ್ನು ಒಲಿಸಿಕೊಳ್ಳುವ ಪ್ರಯತ್ನಗಳು ವಿಫಲವಾದಾಗ ರಾಜಗೋಪಾಲ ಹತಾಷನಾಗತೊಡಗಿದ. ಅಮೇಲೆ ಅವನು ನೇರವಾಗಿಯೇ ಅವರಿಬ್ಬರಿಗೆ ವಿಚ್ಛೇದನ ಪಡೆದು ಬೇರ್ಪಡಿರಿ ಎಂದು ಹೆದರಿಸತೊಡಗಿದ.
ಸುಪಾರಿ ನೀಡಿ ಕೊಲ್ಲಿಸಿಬಿಟ್ಟ!
ಅವರು ಅದಕ್ಕೂ ಹೆದರದೆ ಹೋದಾಗ, ಮತ್ತೊಂದು ಸರವಣ ಭವನದಲ್ಲಿ ಮ್ಯಾನೇಜರ್ ಆಗಿದ್ದ ಡ್ಯಾನಿಯೇಲ್ ಎಂಬುವವನಿಗೆ ರೂ. 5 ಲಕ್ಷ ನೀಡಿ ಶಾಂತಕುಮಾರನನ್ನು ಕೊಲ್ಲಿಸುವಂತೆ ಹೇಳಿದ! ಆದರೆ ದಯಾಳು ಆಗಿದ್ದ ಡ್ಯಾನಿಯೇಲ್ ಆ ಹಣವನ್ನು ಶಾಂತಕುಮಾರಗೆ ನೀಡಿ ಚೆನೈ ಬಿಟ್ಟು ಬೇರೆಲ್ಲಾದರೂ ಹೋಗಿ ಹೊಸ ಜೀವನ ಶುರುಮಾಡಿ ಅಂತ ಹೇಳಿದ.
ಆದರೆ ಅವನು ನಿರಾಕರಿಸಿದಾಗ ಡ್ಯಾನಿಯೇಲ್ ಜೀವಜ್ಯೋತಿಯನ್ನು ಅವಳ ಕುಟುಂಬದೊಂದಿಗೆ ಅವಳ ದೂರದ ಹಳ್ಳಿಗೆ ಕಳಿಸಿ ಶಾಂತಕುಮಾರನನ್ನು ಕರೆದುಕೊಂಡು ಮತ್ತೊಂದು ದಿಕ್ಕನೆಡೆ ನಡೆದ
ಮರುದಿನ ಶಾಂತಕುಮಾರನ ಮೃತದೇಹ ಕೊಡೈಕೆನಾಲ್ ನ ಪಶ್ಚಿಮ ಘಟ್ಟಗಳಲ್ಲಿ ಪತ್ತೆಯಾಯಿತು.
ಸರವಣ ಭವನಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಉದ್ಯೋಗಿಗಳಿಗೆ ಅಣ್ಣ ನಾಗಿದ್ದ ರಾಜಗೋಪಾಲ ಒಬ್ಬ ಜ್ಯೋತಿಷಿಯ ಮಾತು ಕೇಳಿ ಶಾಂತಕುಮಾರನ ಕೊಲೆ ಮಾಡಿಸಿಬಿಟ್ಟ!!
ಪೊಲೀಸರಿಗೆ ಶರಣಾದ!
ನವೆಂಬರ 23, 2001 ರಂದು ರಾಜಗೋಪಾಲ ಪೊಲೀಸರಿಗೆ ಶರಣಾದ. ಎರಡು ವರ್ಷಗಳ ನಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದ. ಆದರೆ ಅವನಲ್ಲಿ ಜೀವಜ್ಯೋತಿಯ ವ್ಯಾಮೋಹ ಬತ್ತಿರಲಿಲ್ಲ. ಹಾಗಾಗಿ ಪುನಃ ಅವಳ ದುಂಬಾಲು ಬಿದ್ದ. ಜುಲೈ 15, 2003 ರಲ್ಲಿ ಅವನ ವಿರುದ್ಧ ಜೀವಜ್ಯೋತಿಗೆ 6 ಲಕ್ಷ ರೂ. ಲಂಚ ನೀಡಿದ ಮತ್ತು ಅವಳ ಸಹೋದರ ರಾಮಕುಮಾರ್ ಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ಬಾರಿ ಕೋರ್ಟ್ ಅವನಿಗೆ 10 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು ಮತ್ತು ಜೀವಜ್ಯೋತಿಗೆ ಭಾರೀ ಮೊತ್ತದ ಪರಿಹಾರ ನೀಡುವಂತೆ ಹೇಳಿತು.
ಸುಪ್ರೀಮ್ ಕೋರ್ಟ್ಗೆ ಅಂಬ್ಯುಲೆನ್ಸ್ನಲ್ಲಿ !
ವೈದ್ಯಕೀಯ ಕಾರಣಗಳಿಗೆ ಅವನಿಗೆ ಈ ಬಾರಿಯೂ ಜಾಮೀನು ಸಿಕ್ಕಿತಾದರೂ, ಹೊರಬಂದ ಮೇಲೆ ಹಳೆ ಚಾಳಿ ಮುಂದುವರಿಸಿದ್ದರಿಂದ ಮಾರ್ಚ್ 29, 2019 ರಂದು ಸರ್ವೋಚ್ಛ ನ್ಯಾಯಾಲಯ ಅವನಿಗೆ ಜೀವಾವಧಿ ಸೆರೆವಾಸದ ಶಿಕ್ಷೆ ವಿಧಿಸಿತು. ಜುಲೈ 7 ರಂದು ಶರಣಾಗುವಂತೆ ಕೋರ್ಟ್ ಆವನಿಗೆ ಹೇಳಿತ್ತು ಆದರೆ ಜುಲೈ 9ರಂದು ಅತ್ಯಂತ ನಾಟಕೀಯ ರೀತಿಯಲ್ಲಿ ಅಂಬ್ಯುಲೆನ್ಸ್ ಒಂದರಲ್ಲಿ ರಾಜಗೋಪಾಲ ಕೋರ್ಟ್ ಪ್ರವೇಶಿಸಿದ್ದ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವನು ಜಾಮೀನಿಗೆ ಮನವಿ ಮಾಡಿದನಾದರೂ ಸುಪ್ರೀಮ್ ಕೋರ್ಟ್ ಅದನ್ನು ತಿರಸ್ಕರಿಸಿತು.
ರಾಜಗೋಪಾಲನನ್ನು ಮತ್ತೊಮ್ಮೆ ಬಂಧಿಸಿ ಸೆರೆಮನೆಗೆ ಕಳಿಸಲಾಯಿತು. ಕೆಲವೇ ದಿನಗಳ ನಂತರ ಅವನಿಗೆ ಹೃದ್ರೋಗದ ಸಮಸ್ಯೆ ಶುರುವಾಯಿತು. ಅವನನ್ನು ಚೆನೈನ ವಿಜಯ ಆಸ್ಪತ್ರೆಯ ಸ್ಟ್ಯಾನ್ಲೀ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೈದಿಗಳಿಗೆ ಮೀಸಲಿಟ್ಟಿರುವ ವಾರ್ಡ್ ಗೆ ಸೇರಿಸಲಾಯಿತು. ರಾಜಗೋಪಾಲ, ಅದೇ ವಾರ್ಡ್ ನಲ್ಲಿ ಜುಲೈ 18 ರಂದು ಕೊನೆಯುಸಿರೆಳೆದ.
ಒಬ್ಬ ಜ್ಯೋತಿಷಿಯ ಮಾತು ಕೇಳಿ ಸಹಸ್ರಾರು ಜನರಿಗೆ ಅಣ್ಣ ಮತ್ತು ಅನ್ನದಾತನಾಗಿದ್ದ ರಾಜಗೋಪಾಲ ತನ್ನ ಅಂತ್ಯವನ್ನು ಹಾಗೆ ಕಂಡ!