
ಬೆಳಗಾವಿ: ಕುಡಿದ ಮತ್ತಿನಲ್ಲಿ (Drunk man) ಕಟ್ಟಡದ 3ನೇ ಮಹಡಿಯಿಂದ ಜಿಗಿದು ಯುವಕ ಸಾವನ್ನಪ್ಪಿರುವಂತಹ ಘಟನೆ ನಗರದ ಡಾ.ಅಂಬೇಡ್ಕರ್ ರಸ್ತೆಯ ತಮ್ಮಣ್ಣ ಆರ್ಕೇಡ್ನಲ್ಲಿ ನಡೆದಿದೆ. ಯೋಗೇಶ್ ಶಾನಭಾಗ್(28) ಮೃತ ಯುವಕ. ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಮೂಲದವರು ಎಂದು ಗುರುತಿಸಲಾಗಿದೆ. ಸಂಜೆ ಸ್ನೇಹಿತರೊಂದಿಗೆ ಬ್ರೂ59 ಪಬ್ಗೆ ಬಂದಿದ್ದು, ಈ ವೇಳೆ ಪಬ್ನ ಕಿಟಕಿ ಬಳಿ ಬಂದು ಏಕಾಏಕಿ ಕೆಳಗೆ ಜಿಗಿದ್ದಾರೆ ಎನ್ನಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿದ್ದ ಯೋಗೇಶ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ದಾವಣಗೆರೆ ತಾಲೂಕಿನ ಮಾದಾಪುರ ಕ್ರಾಸ್ನಲ್ಲಿ ನಡೆದಿದೆ. ಮೋಹನ್ ನಾಯ್ಕ್(30), ಪೂರ್ಯಾ ನಾಯ್ಕ್(35) ಮೃತರು. ಮೃತ ಸವಾರರು ಶಿವಮೊಗ್ಗದ ವಿನೋಬನಗರದ ನಿವಾಸಿಗಳಾಗಿದ್ದಾರೆ. ಚಲಿಸುತ್ತಿದ್ದ ಬೈಕ್ಗೆ ಹಿಂದಿನಿಂದ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಸ್ಥಳದಲ್ಲೇ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹದಡಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇದನ್ನೂ ಓದಿ: ಬೆಳಗಾವಿ: ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯ ಕೊಲೆ; ವೈದ್ಯ ಅರೆಸ್ಟ್
ಬೆಂಗಳೂರು: ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಕಬ್ಬಾಳು ಚಂದು, ಕುಳ್ಳ ರಘು ಬಂಧಿತ ಆರೋಪಿಗಳು. ಬಂಧಿತರಿಂದ 6 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯರನ್ನ ಟಾರ್ಗೆಟ್ ಮಾಡಿ, ಬೈಕ್ನಲ್ಲಿ ಬಂದು ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದರು.
ಆರೋಪಿಗಳು ಇತ್ತೀಚೆಗೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದು, ಪಾರಿಜಾತ ಹೂ ತರಲು ಹೋಗುತ್ತಿದ್ದ 71 ವರ್ಷದ ಆದಿಲಕ್ಷ್ಮಿ ಎಂಬ ವೃದ್ಧೆಯ ಸರ ಕಸಿದು ಪರಾರಿಯಾಗಿದ್ದರು. ಆರೋಪಿಗಳು ವೃದ್ಧೆಯನ್ನು ಮೊದಲು ಹೂ ಯಾವ ದೇವರಿಗೆ ಎಂದು ಆರೋಪಿ ಕಬ್ಬಾಳು ಚಂದು ಮಾತನಾಡಿಸಿದ್ದನು. ನಂತರ ಮತ್ತೊಬ್ಬ ಆರೋಪಿ ಬಂದು ಮಹಿಳೆ ಸರ ಕಸಿದು ಪರಾರಿಯಾಗಿದ್ದಾನೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Accident: ಮಿನಿ ಬಸ್ ಡಿಕ್ಕಿ: ಆಟೋದಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣ
ದಾವಣಗೆರೆ: ಗೋಮಾಳದ ವಿಚಾರಕ್ಕೆ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ದಾವಣಗೆರೆಯ ಗಾಂಧಿನಗರದ 6ನೇ ಕ್ರಾಸ್ನಲ್ಲಿ ನಡೆದಿದೆ. ದಾವಣಗೆರೆ ತಾಲೂಕಿನ ಕಿತ್ತೂರು ಗ್ರಾಮದ ಮೈಲಾರಿ(28) ಹತ್ಯೆಗೊಳಗಾದ ಯುವಕ. ಮೂವರು ಯುವಕರ ತಂಡದಿಂದ ದುಷ್ಕೃತ್ಯವೆಸಗಲಾಗಿದೆ. ಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ 6 ಎಕರೆ ಗೋಮಾಳದ ವಿಚಾರವಾಗಿ ಜಗಳವಾಗಿದೆ. ಮಲ್ಲ, ಮೂರ್ತಪ್ಪ, ರಕ್ಷಿತ್ ಸೇರಿ 7 ಜನರ ತಂಡದಿಂದ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಹತ್ಯೆಯಾಗಿರುವ ಮೈಲಾರಿ ಕುಟುಂಬಸ್ಥರಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.