ಆ ಇಬ್ಬರು ಹಿಂದೂ-ಮುಸ್ಲಿಂ ಯುವಕರ ಮಧ್ಯೆ ಗಾಢ ಸ್ನೇಹವಿತ್ತು, ಆದರೆ ಒಬ್ಬ ಮತ್ತೊಬ್ಬನ ಪತ್ನಿಯ ಮೇಲೆ ಕಣ್ಣು ಹಾಕಿಬಿಟ್ಟ, ಮುಂದೆ ನಡೆದಿದ್ದು ಘೋರ
ಇಲ್ಲಿ ಈರಪ್ಪ ಮಾದರ ಕೊಲೆಯಾಗಿರುವುದು ನಿಜ. ಆದರೆ ಕೊಲೆ ಮಾಡಿದ್ದು ಯಾಕೆ? ಮೂರು ವರ್ಷದ ಹಿಂದೆ ಯುವಕನ ಸ್ನೇಹ ಸಂಬಂಧ ಹದಗೆಡೋದಕ್ಕೆ ಕಾರಣವೇನು? ಇಲ್ಲಿ ನಡೆದಂತಹ ಮಿತ್ರದ್ರೋಹ ಯಾವುದು?
ಅವರಿಬ್ಬರದ್ದೂ ಬೇರೆ ಬೇರೆ ಧರ್ಮ. ಆದರೆ ಇಬ್ಬರ ಸ್ನೇಹ ಮಾತ್ರ ಧರ್ಮವನ್ನು ಮೀರಿದ್ದು. ಇಬ್ಬರೂ ಸದಾ ಕೂಡಿಕೊಂಡು ಓಡಾಡಿಕೊಂಡಿದ್ದವರು. ಎಲ್ಲಿಗೇ ಆದರೂ ಹೋಗೋದು ಬರೋದು ಇದ್ದರೆ ಇಬ್ಬರು ಕೂಡಿಯೇ ಓಡಾಡುತ್ತಿದ್ದರು. ಹೌದು ಇಲ್ಲಿ ಒಬ್ಬ ಹಿಂದೂ (Hindu), ಇನ್ನೊಬ್ಬ ಮುಸ್ಲಿಂ (muslim friend). ಇಲ್ಲಿ ಹಿಂದೂ, ದಲಿತ ಸಮುದಾಯಕ್ಕೆ ಸೇರಿದವ. ಆತ ಮುಸ್ಲಿಂ ಯುವಕರ ಜೊತೆಯೇ ಹೆಚ್ಚು ಸ್ನೇಹ ಹೊಂದಿದವ. ಅದರಲ್ಲೂ ಒಬ್ಬನ ಜೊತೆ ಗಾಢವಾದ ಸ್ನೇಹವಿತ್ತು. ಆದರೆ ಆ ಸ್ನೇಹ ಕಳೆದ ಮೂರು ವರ್ಷದಿಂದ ಹಳಸಿತ್ತು. ಮೇಲಾಗಿ ಒಬ್ಬ ಸ್ನೇಹಿತ ಇನ್ನೊಬ್ಬ ಸ್ನೇಹಿತನ ಪತ್ನಿಯ ಮೇಲೆ ಕಣ್ಣು ಹಾಕಿದ್ದ (illicit relationship). ಇದರಿಂದ ಮುಂದೆ ನಡೆದಿದ್ದು ಘೋರ… ಘನಘೋರ (murder).
ಬಾಗಲಕೋಟೆ (bagalkot) ಜಿಲ್ಲೆ ಗುಳೇಡಗುಡ್ಡ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ಗುಳೇದಗುಡ್ಡ ಖಣ. ಖಣ ಅಂದರೆ ಸೀರೆಯ ಮೇಲಿನ ಕುಪ್ಪಸ. ಉತ್ತರ ಕರ್ನಾಟಕದಲ್ಲಿ ಖಣ ಎಂದು ಕರೆಸಿಕೊಳ್ಳುವ ಬಟ್ಟೆ ನೇಯೋದಕ್ಕೆ ಗುಳೇದಗುಡ್ಡ ಪ್ರಸಿದ್ಧಿ. ಗುಳೇದಗುಡ್ಡ ಖಣ ಎಂದರೆ ಬಾರಿ ಫೇಮಸ್. ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರೆ ಇರುವ ಗುಳೇದಗುಡ್ಡ ವಿಶೇಷವಾದ ಪಟ್ಟಣ. ಇಂತಹ ಪಟ್ಟಣದಲ್ಲಿ ಫೆಬ್ರವರಿ 6ರಂದು ಪಟ್ಟಣದ ಪ್ರಮುಖ ಆರಾಧ್ಯ ದೈವ ಸಾಲೇಶ್ವರ ಜಾತ್ರೆ ನಡೆಯುತ್ತಿರುತ್ತದೆ. ಎಲ್ಲರೂ ಆ ಜಾತ್ರೆಯಲ್ಲಿ ಮಗ್ನರಾಗಿರುತ್ತಾರೆ.
ಎಲ್ಲರೂ ಜಾತ್ರೆ ಸಂಭ್ರಮದಲ್ಲಿರುತ್ತಾರೆ. ಆದರೆ ಅದೇ ದಿನ ಪಟ್ಟಣದ ಹೊರಬವಲಯದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು. ಆದರೆ ಅದು ಏನು ಅಂತ ಮಾತ್ರ ಯಾರಿಗೂ ಗೊತ್ತಾಗಿರೋದಿಲ್ಲ. ಹೌದು ಅಂದು ಪಟ್ಟಣಕ್ಕೆ ಹೊಂದಿಕೊಂಡಿರುವ ಪಕ್ಕದ ಹಳ್ಳದಲ್ಲಿ ಅದೊಬ್ಬ ಯುವಕನ ಕೊಲೆಯಾಗಿತ್ತು. ಆದರೆ ಆ ಯುವಕನ ಕೊಲೆಯಾಗಿದೆ ಅಂತ ಗೊತ್ತಾಗಿದ್ದು ಫೆಬ್ರವರಿ 8 ರಂದು. ಹೌದು ಫೆಬ್ರವರಿ 8ರಂದು ಇದೇ ಹಳ್ಳದಿಂದ ತಮ್ಮ ಹೊಲಕ್ಕೆ ನೀರು ಹಾಯಿಸಿಕೊಳ್ಳುತ್ತಿದ್ದ ಓರ್ವ ರೈತ ಎಂದಿನಂತೆ ಹಳ್ಳಕ್ಕೆ ಹೋಗಿ ನೋಡಿದಾಗ ಅಲ್ಲೊಂದು ಶವ ತೇಲುತ್ತಿತ್ತು.
ಶವದ ಕುತ್ತಿಗೆ ಭಾಗದಲ್ಲಿ ಚಾಕು ಇರಿದ ಗಾಯಗಳಾಗಿದ್ದು ಕಂಡು ಬಂದಿತ್ತು. ಶವ ಕಂಡಿದ್ದೇ ತಡ ಆತ ಗಾಬರಿಯಿಂದ ಓಡೋಡಿ ಬಂದು ತನ್ನ ಸ್ನೇಹಿತರಿಗೆ ಸುದ್ದಿ ತಿಳಿಸಿದ್ದ. ನಂತರ ಅದು ಗುಳೇದಗುಡ್ಡ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು. ತಕ್ಷಣ ಸ್ಥಳಕ್ಕೆ ಬಂದ ಗುಳೇದಗುಡ್ಡ ಪೊಲೀಸರು ತನಿಖೆ ಶುರು ಮಾಡಿದ್ದರು. ಶವವನ್ನು ಹೊರತೆಗೆದು ಪರಿಶೀಲನೆ ವಿಚಾರಣೆ ಅಂತೆಲ್ಲ ಶುರು ಮಾಡಿದಾಗ ಅಲ್ಲಿ ಕೊಲೆಯಾಗಿರುವುದು 22 ವರ್ಷದ ಈರಪ್ಪ ಮಾದರ ಅಂತ ಗೊತ್ತಾಗಿದೆ.
ಹೌದು ಈರಪ್ಪ ಮಾದರ ಗುಳೇದಗುಡ್ಡ ಪಟ್ಟಣದ ಮೂಕೇಶ್ವರಿ ನಗರದ ನಿವಾಸಿ. ಇನ್ನೂ ಕೇವಲ 22 ವರ್ಷ ವಯಸ್ಸು. ತನ್ನ ಪಾಡಿಗೆ ತಾನು ಅದೇ ಪಟ್ಟಣದ ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಇದ್ದವ. ಚಿಕ್ಕ ವಯಸ್ಸಿನಿಂದ ಇದೇ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ತನ್ನ ಕುಟುಂಬಕ್ಕೆ ಆಸರೆಯಾಗಿದ್ದವ. ಇನ್ನು ತಾಯಿ ಕೂಡ ಅವರಿವರ ಮನೆಗಳಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಬೆಳೆಸಿದ್ದಳು. ಈರಪ್ಪ ಮಾದರನ ತಾಯಿ ನೀಲವ್ವಗೆ ಗಂಡು ಹೆಣ್ಣು ಸೇರಿ ಒಟ್ಟು 9 ಜನ ಮಕ್ಕಳು. ಅದರಲ್ಲಿ ಕೊನೆಯ ಮಗ ಈರಪ್ಪ. ಕೊನೆಯ ಮಗನ ಮೆಲೆ ಸಹಜವಾಗಿಯೇ ತಾಯಿಗೆ ಹೆಚ್ಚು ಪ್ರೀತಿ.
ಇನ್ನು ನೀಲವ್ವಳ ಗಂಡ ಸುಮಾರು ವರ್ಷಗಳ ಹಿಂದೆ ತೀರಿಹೋಗಿದ್ದ. ಕಷ್ಟಪಟ್ಟು ದುಡಿದು ಎಲ್ಲ ಮಕ್ಕಳನ್ನು ಸಾಕಿದ್ದ ನೀಲವ್ವಳಿಗೆ ತನ್ನ ಕಿರಿಮಗನನ್ನು ಈ ರೀತಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದನ್ನು ನೋಡಿ ಅರಗಿಸಿಕೊಳ್ಳಲಾಗುತ್ತಿಲ್ಲ. ಹದಿಹರೆಯದ ಮಗನನ್ನು ಈ ರೀತಿ ಮಾಡಿದ್ದಾರೆ. ನನ್ನ ಮಗ ಯಾರ ಜೊತೆಗೂ ಜಗಳ ಮಾಡುವವನಲ್ಲ, ಯಾವುದೇ ಊರ ಉಸಾಬರಿ ಮಾಡುವವನಲ್ಲ. ದುಡಿಯೋದು ಮನೆಗೆ ಬರೋದು ಮಾತ್ರ ಗೊತ್ತಿತ್ತು. ಅಂತಹವನನ್ನು ಹೀಗೆ ಕೊಲೆ ಮಾಡಿದ್ದಾರೆ ಎಂದು ಒಂದೇ ಸಮನೇ ಕಣ್ಣೀರು ಹಾಕುತ್ತಿದ್ದಾರೆ.
ಇಲ್ಲಿ ಈರಪ್ಪ ಮಾದರ ಕೊಲೆಯಾಗಿರುವುದು ನಿಜ. ಆದರೆ ಕೊಲೆ ಮಾಡಿದ್ದು ಯಾಕೆ? ಮೂರು ವರ್ಷದ ಹಿಂದೆ ಯುವಕನ ಸ್ನೇಹ ಸಂಬಂಧ ಹದಗೆಡೋದಕ್ಕೆ ಕಾರಣವೇನು? ಇಲ್ಲಿ ನಡೆದಂತಹ ಮಿತ್ರದ್ರೋಹ ಯಾವುದು? ಕೊಲೆ ಮಾಡಿದ್ದು ಯಾರು? ಪ್ಲಾನ್ ಹೇಗಿತ್ತು ಇಲ್ಲಿದೆ ವಿವರ.
ಗುಳೇದಗುಡ್ಡ ಪಟ್ಟಣ ಅತಿ ಹೆಚ್ಚು ಬಡ ನೇಕಾರರು ಹೊಂದಿರುವ ಪಟ್ಟಣ. ನೇಕಾರರ ಜೊತೆ ವಿವಿಧ ಸಮುದಾಯದವರು ಕೂಡ ಸಣ್ಣಪುಟ್ಟ ವ್ಯಾಪಾರ, ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಇಂತಹ ಗ್ರಾಮದಲ್ಲಿ ಈರಪ್ಪ ಮಾದರ ಅದೊಂದು ಮುಸಲ್ಮಾನರ ಗುಜರಿ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಈ ವೇಳೆ ಆತನಿಗೆ ಹತ್ತಾರು ಜನ ಮುಸ್ಲಿಂ ಸಮುದಾಯದ ಸ್ನೇಹಿತರು ಇದ್ದರು. ಅದರಲ್ಲಿ ದಾದಾಪೀರ್ ಈತನ ಆಪ್ತಸ್ನೇಹಿತನಾಗಿದ್ದ.
ಎಗ್ ರೈಸ್ ಅಂಗಡಿ ಇಟ್ಟುಕೊಂಡಿದ್ದ ದಾದಾಪಿರ್ ಹಾಗೂ ಈರಪ್ಪನ ಮಧ್ಯೆ ಬಿಟ್ಟಿರಲಾರದಷ್ಟು ಗಾಢವಾದ ಸ್ನೇಹ ನೆಲೆಸಿತ್ತು. ದಾದಾಪಿರ್ ಹಾಗೂ ಈರಪ್ಪ ಇಬ್ಬರೂ ಬಿಟ್ಟಿರಲಾರದಷ್ಟು ಗಾಢವಾದ ಸ್ನೇಹ ಹೊಂದಿದ್ದರು. ಇಲ್ಲಿ ಈರಪ್ಪ ಮಾದರನನ್ನು ಕೊಲೆ ಮಾಡಿದ್ದು ಇದೇ ದಾದಾಪಿರ್. ಇಬ್ಬರೂ ಸ್ನೇಹಿತರಾಗಿದ್ದವರು. 2020ರ ಸಮಯದಲ್ಲಿ ಇಬ್ಬರೂ ಬೈಕ್ ಮೇಲೆ ಹೋಗುತ್ತಿದ್ದಾಗ ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಬಿದ್ದು ಇಬ್ಬರಿಗೂ ಗಂಭೀರ ಗಾಯಗಳಾಗಿದ್ವು.
ಇನ್ನು ದಾದಾಪೀರ್ ಸ್ಥಿತಿ ಗಂಭೀರವಾಗಿತ್ತು. ಆಗ ದಾದಾಪೀರ್ ಪತ್ನಿ ಈರಪ್ಪ ಮಾದರನ ಮೇಲೆಯೇ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಳು. ಅಂದಿನಿಂದ ಇಬ್ಬರ ಮಧ್ಯೆ ಸ್ನೇಹ ಹಳಸಿದರೂ ಮೇಲ್ನೋಟಕ್ಕೆ ಸ್ನೇಹಿತರಾಗಿಯೇ ಇದ್ದರು. ಈ ಮಧ್ಯೆ ಈರಪ್ಪ ಮಾದರ ದಾದಾಪೀರ್ ಪತ್ನಿಯ ಮೇಲೆ ಕಣ್ಣು ಹಾಕಿದ್ದ. ಆಕೆಯನ್ನು ಪ್ರೀತ್ಸೆ ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದ.
ದಾದಾಪೀರ್ ಇಲ್ಲದಿದ್ದಾಗ ಮನೆ ಬಾಗಿಲು ಬಡಿದು ಆತನ ಪತ್ನಿಯನ್ನು ಕಾಡುವುದು, ಪೀಡಿಸುವುದು, ಪ್ರೀತ್ಸೆ ಪ್ರೀತ್ಸೇ ಅಂತಾ ಕಾಡ್ತಿದ್ದನಂತೆ. ಇನ್ನೊಂದು ಕಡೆ ಬೈಕ್ ಅಪಘಾತವಾದಾಗ ನನ್ನದೇನು ಉದ್ದೇಶಪೂರ್ವಕ ತಪ್ಪು ಇಲ್ಲದಿದ್ದರೂ ನನ್ನ ಮೇಲೆ ಕೇಸ್ ಹಾಕಿಸಿಬಿಟ್ಟಿರಲ್ಲಾ, ನಿಮ್ಮನ್ನು ಸುಮ್ಮನೇ ಬಿಡೋದಿಲ್ಲ ಎಂದು ಆಗಾಗ ಕುಡಿದು ಬಂದು ಈರಪ್ಪ ಮಾದರ ದಾದಾಪಿರ್ ಗೆ ಅವಾಜ್ ಹಾಕುತ್ತಿದ್ದನಂತೆ. ಇದನ್ನೆಲ್ಲ ಸಹಿಸಿಕೊಂಡು ಬಂದ ದಾದಾಪೀರ್ ಕೊನೆ ಕೊನೆಗೆ ತಾಳ್ಮೆ ಕಳೆದುಕೊಂಡಿದ್ದ. ಈತನನ್ನು ಹೇಗಾದರೂ ಮಾಡಿ ಮುಗಿಸಬೇಕು ಇಲ್ಲದಿದ್ದರೆ ಇವ ನಮಗೇ ಮುಳುವಾಗುತ್ತಾನೆ ಎಂದು ಪ್ಲಾನ್ ಮಾಡಿ ಕೊಲೆ ಮಾಡೋದಕ್ಕೆ ಸಂಚು ರೂಪಿಸುತ್ತಿದ್ದ.
ಇಲ್ಲಿ ಈರಪ್ಪ, ದಾದಾಪೀರನಿಗೆ ಬೈಕ್ ಅಪಘಾತವಾದಾಗ ಪತ್ನಿ ನೀಡಿದ ದೂರನ್ನು ಇಟ್ಟುಕೊಂಡು ನಿಮ್ಮನ್ನು ಬಿಡೋದಿಲ್ಲ, ಒಂದು ಗತಿ ಕಾಣಿಸುತ್ತೇನೆ ಅಂತಾ ಪದೇ ಪದೆ ಬಡಬಡಿಸುತ್ತಿದ್ದ. ಇನ್ನೊಂದು ಕಡೆ ದಾದಾಪೀರ್ ಪತ್ನಿಯ ಮೇಲೆ ಕಣ್ಣು ಹಾಕಿ, ಬೇತಾಳನಂತೆ ಪ್ರೀತ್ರೆ ಅಂತ ಬೆನ್ನು ಬಿದ್ದಿದ್ದ. ಈ ಬಗ್ಗೆ ಹಿಂದೆ ಅನೇಕ ಬಾರಿ ದಾದಾಪೀರ್ ಎಚ್ಚರಿಕೆ ನೀಡಿದರೂ ಕೇಳಿರಲಿಲ್ಲ. ಇನ್ನು ಇಬ್ಬರೂ ಎಣ್ಣೆ ಸ್ನೇಹಿತರಾಗಿದ್ದರಿಂದ ಕುಡಿದ ಮತ್ತಲ್ಲಿ ಜಗಳವಾಡೋದು ಮತ್ತೆ ಮೇಲ್ನೋಟಕ್ಕೆ ಸ್ನೇಹ ಇನ್ನೂ ಗಟ್ಟಿಯಾಗಿದೆ ಎನ್ನುವ ರೀತಿಯಲ್ಲಿ ಓಡಾಡಿಕೊಂಡಿದ್ದರು.
ಆದರೆ ದಾದಾಪೀರ್ ಮಾತ್ರ ಕಳೆದ ಮೂರು ತಿಂಗಳಿಂದ ಈರಪ್ಪ ಮಾದರ ಕೊಲೆಗೆ ಸ್ಕೆಚ್ ಹಾಕಿದ್ದ. ಅದಕ್ಕೊಂದು ಸರಿಯಾದ ಸಮಯ ಕಾಯುತ್ತಿದ್ದ. ಕೊನೆಗೂ ಆ ಸಮಯ ಬಂದೇ ಬಿಟ್ಟಿತ್ತು. ಫೆಬ್ರವರಿ 6 ರಂದು ಪಟ್ಟಣದ ಸಾಲೇಶ್ವರ ಜಾತ್ರೆ ವೇಳೆ ಆತನ ಕೊಲೆಗೆ ಮುಹೂರ್ತ ಇಟ್ಟಿದ್ದ. ಆ ವೇಳೆ ಎಲ್ಲರೂ ಜಾತ್ರೆಯ ಸಂಭ್ರಮದಲ್ಲಿದ್ದರೆ, ದಾದಾಪೀರ್ ರಕ್ತ ಹರಿಸುವ ಮೂಡ್ ನಲ್ಲಿದ್ದ. ಆಗ ದಾದಾಪೀರ್ ಸಹಾಯ ಪಡೆದದ್ದು ಆತನ ಸಂಬಂಧಿ ಸದ್ದಾಂ ಹುಸೇನನದ್ದು.
ಕೆಲ ದಿನಗಳ ಕಾಲ ಈರಪ್ಪ ಮಾದರ ತಮ್ಮ ಮಾವನ ಊರು ಲಾಯದಗುಂದಿ ಗ್ರಾಮಕ್ಕೆ ಗಾರೆ ಕೆಲಸಕ್ಕೆ ಹೋಗಿದ್ದ. ಆಗ ದಾದಾಪೀರ್ ಸದ್ದಾಂ ಹುಸೇನ್ ಕಡೆಯಿಂದ ಕರೆ ಮಾಡಿಸಿ ಗುಳೇದಗುಡ್ಡ ಪಟ್ಟಣಕ್ಕೆ ಕರೆಸಿಕೊಂಡಿದ್ದ. ಆತನ ಕರೆಯ ಮೇರೆಗೆ ಈರಪ್ಪ ಮಾದರ ಗುಳೇದಗುಡ್ಡ ಪಟ್ಟಣಕ್ಕೆ ಬಂದಾಗ ದಾದಾಪೀರ್, ಸದ್ದಾಂ ಹಾಗೂ ಈರಪ್ಪ ಒಂದು ಕಡೆ ಸೇರುತ್ತಾರೆ. ಆದರೆ ಸದ್ದಾಂ, ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ.
ಮುಂದೆ ಈರಪ್ಪ ಮಾದರ ಹಾಗೂ ದಾದಾಪೀರ್ ಮೊದಲೆ ಎಣ್ಣೆ ಸ್ನೇಹಿತರು. ಇಬ್ಬರೂ ಕೂಡ ಮದ್ಯ ಖರೀದಿಸಿ ಹಳ್ಳದ ಕಡೆ ಹೋಗಿ ಇಬ್ಬರೂ ಹಳ್ಳದ ದಂಡೆ ಮೇಲೆ ಕೂತು ಮದ್ಯ ಸೇವನೆ ಮಾಡುತ್ತಾರೆ. ಆಗ ದಾದಾಪೀರ್ ಈರಪ್ಪನಿಗೆ ಸ್ವಲ್ಪ ಹೆಚ್ಚು ಕುಡಿಸುತ್ತಾನೆ. ನಶೆಯಲ್ಲಿ ಈರಪ್ಪ ತೇಲಾಡುತ್ತಿದ್ದರೆ ಮೂತ್ರ ವಿಸರ್ಜನೆ ಮಾಡಿ ಬರೋದಾಗಿ ದಾದಾಪೀರ್ ಎದ್ದು ಹೋಗಿದ್ದ.
ಕುಡಿಯುತ್ತಾ ಕೂತಿದ್ದ ಈರಪ್ಪನಿಗೆ ದಾದಾಪೀರ್ ಮೊದಲೇ ತಾನು ತಂದಿದ್ದ ಚಾಕುವಿನಿಂದ ಹಿಂಬದಿಯಿಂದ ಕುತ್ತಿಗೆಗೆ ಮೇಲಿಂದ ಮೇಲೆ ಚುಚ್ಚೋದಕ್ಕೆ ಶುರು ಮಾಡಿದ್ದ. ಆಗ ತಪ್ಪಿಸಿಕೊಂಡು ಓಡಲು ಪ್ರಯತ್ನ ಪಟ್ಟ ಈರಪ್ಪ ಸುಮಾರು 20 ಅಡಿ ದೂರ ಹೋಗಿ ಕುಸಿದು ಬಿದ್ದು, ತೀವ್ರ ರಕ್ತಸ್ರಾವವಾಗಿ ಅಲ್ಲೇ ಪ್ರಾಣ ಬಿಡುತ್ತಾನೆ.
ನಂತರ ಅಲ್ಲಿಂದ ಶವವನ್ನು ದರದರನೇ ಎಳೆಯುತ್ತಾ ಪಕ್ಕದಲ್ಲೇ ಇದ್ದ ಹಳ್ಳದಲ್ಲಿ ಬಿಸಾಕಿ ಅಲ್ಲಿಂದ ದಾದಾಪೀರ್ ಮನೆಗೆ ಬಂದಿದ್ದ. ಗುಳೇದಗುಡ್ಡ ಪಟ್ಟಣದಲ್ಲಿ ಏನೂ ಆಗಿಯೇ ಇಲ್ಲವೆಂಬಂತೆ ಓಡಾಡಿಕೊಂಡಿದ್ದ. ಆದರೆ ಎಂಟನೇ ತಾರೀಕು ಕೊಲೆಯಾದ ಸ್ಥಿತಿಯಲ್ಲಿ ದೇಹ ಸಿಕ್ಕಾಗ ಗುಳೇದಗುಡ್ಡ ಪೊಲೀಸರು ತೀವ್ರಗತಿಯಲ್ಲಿ ತನಿಖೆ ಶುರು ಮಾಡಿದ್ದರು. ಈರಪ್ಪ ಮಾದರ ಕುಟುಂಬಸ್ಥರು ಮತ್ತು ಸ್ನೇಹಿತರನ್ನು ವಿಚಾರಣೆ ಮಾಡಿದಾಗ ಈತನ ಪಕ್ಕಾ ಸ್ನೇಹಿತ ಯಾರು? ಬೈಕ್ ಅಪಘಾತದ ಒಳಸುಳಿ ಏನು ಎಂಬೆಲ್ಲದರ ಬಗ್ಗೆ ತಿಳಿದು ಬಂದಿತ್ತು.
ನಂತರ ದಾದಾಪೀರ್ ಪತ್ನಿಯ ಮೇಲೆ ಈರಪ್ಪ ಮಾದರ ಕಣ್ಣು ಹಾಕಿದ ವಿಚಾರ ಕೂಡ ಗೊತ್ತಾಗಿತ್ತು. ಆಗ ಈರಪ್ಪ ಮಾದರ ಕಾಲ್ ಗಳನ್ನು ಪರಿಶೀಲನೆ ಮಾಡಿದಾಗ ಆತ ಕೊನೆಗೆ ಮಾತಾಡಿದ್ದು ಸದ್ದಾಂ ಹುಸೇನ್ ಜೊತೆ ಎಂದು ಗೊತ್ತಾಗಿತ್ತು. ಆಗ ತಕ್ಷಣವೇ ಸದ್ದಾಂ ಹುಸೇನ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದಾದಾಪೀರ್ ಹಾಗೂ ಈರಪ್ಪ ಮಾದರ ಬಗ್ಗೆ ಸದ್ದಾಂ ಬಾಯಿಬಿಟ್ಟಿದ್ದ. ನಂತರ ದಾದಾಪೀರನನ್ನು ವಶಕ್ಕೆ ಪಡೆದಾಗ ಗುಳೇದಗುಡ್ಡ ಪೊಲೀಸರು ತಮ್ಮ ಪೊಲೀಸ್ ಭಾಷೆಯಲ್ಲಿ ವಿಚಾರಿಸಿದ್ದರು. ದಾದಾಪೀರ್ ಹಾಗೂ ಸದ್ದಾಂ ಹುಸೇನ್ ಕೊಲೆ ಬಗ್ಗೆ ಖುದ್ದಾಗಿ ಬಾಯಿ ಬಿಟ್ಟಿದ್ದಾರೆ. ಸದ್ಯ ಗುಳೇದಗುಡ್ಡ ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇಲ್ಲಿ ಒಂದು ಕಡೆ ಈರಪ್ಪ ಮಾದರ ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕಿ ಮಿತ್ರದ್ರೋಹ ಕೆಲಸ ಮಾಡಿದ್ದಾನೆ. ಆದರೆ ಈ ಬಗ್ಗೆ ದಾದಾಪೀರ್, ಈರಪ್ಪ ಮಾದರ ವಿರುದ್ದ ದೂರು ನೀಡಬಹುದಿತ್ತು. ಇಲ್ಲ ಹಿರಿಯರಿಗೆ ಹೇಳಿ ಬುದ್ದಿವಾದ ಹೇಳಿಸಬಹುದಿತ್ತು. ಆದರೆ ಇದೆಲ್ಲ ಬಿಟ್ಟು ಒಬ್ಬನ ಕೊಲೆ ಮಾಡೋದೆ ಇದಕ್ಕೆ ಪರಿಹಾರ ಎಂಬಂತೆ ಕೊಲೆ ಮಾಡಿದ್ದು ಮಾತ್ರ ವಿಪರ್ಯಾಸ. ಇತ್ತ ದಾದಾಪೀರ್ ಸದ್ದಾಂ ಕಂಬಿ ಎಣಿಸುತ್ತಿದ್ದರೆ, ಈರಪ್ಪನ ಮನೆಯಲ್ಲಿ ಆತನನ್ನು ಕಳೆದುಕೊಂಡ ತಾಯಿ ಹಾಗೂ ಕುಟುಂಬ ಕಣ್ಣೀರ ಕೋಡಿ ಹರಿಸುತ್ತಿದೆ.
ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ