₹5 ವಿಷಯದಲ್ಲಿ ಜಗಳ; ಕೋಲ್ಕತ್ತಾ ಢಾಕುರಿಯಾ ಮದ್ಯದ ಅಂಗಡಿಯಲ್ಲಿ ಗ್ರಾಹಕನನ್ನು ಹೊಡೆದು ಕೊಂದ ನೌಕರ

|

Updated on: Jul 31, 2023 | 2:45 PM

5 ರೂಪಾಯಿ ವಿಷಯದಲ್ಲಿ ಜಗಳ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ. ಅಂಗಡಿಯ ಸಿಸಿಟಿವಿ ದೃಶ್ಯ ನೋಡಿದರೆ ಒಬ್ಬ ಉದ್ಯೋಗಿ ಸುಶಾಂತ್ ಮೊಂಡಲ್ ಎಂಬ ಗ್ರಾಹನ ಕೂದಲು ಹಿಡಿದು ಅಂಗಡಿಯೊಳಗೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸಿದೆ.

₹5 ವಿಷಯದಲ್ಲಿ ಜಗಳ; ಕೋಲ್ಕತ್ತಾ ಢಾಕುರಿಯಾ ಮದ್ಯದ ಅಂಗಡಿಯಲ್ಲಿ ಗ್ರಾಹಕನನ್ನು ಹೊಡೆದು ಕೊಂದ ನೌಕರ
ಘಟನೆಯ ಸಿಸಿಟಿವಿ ದೃಶ್ಯ
Image Credit source: tv9 ಬಾಂಗ್ಲಾ
Follow us on

ಕೋಲ್ಕತ್ತಾ ಜುಲೈ 31: ಢಾಕುರಿಯಾ (Dhakuria) ಸೇತುವೆಯ ಉತ್ತರ ಭಾಗದಲ್ಲಿರುವ ಜನಪ್ರಿಯ ಮದ್ಯದ ಅಂಗಡಿಯೊಂದರ ನೌಕರನೊಬ್ಬ ಗ್ರಾಹಕನನ್ನು ಹೊಡೆದು ಕೊಂದ ಘಟನೆ (Murder Case) ವರದಿ ಆಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗ್ರಾಹಕರು ಮತ್ತು ನೌಕರನ ನಡುವಿನ ಜಗಳದ ನಂತರ 47 ವರ್ಷದ ಗ್ರಾಹಕನ ಮೇಲೆ ಹಲ್ಲೆ ನಡೆದಿದೆ. 5 ರೂಪಾಯಿ ವಿಷಯದಲ್ಲಿ ಜಗಳ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ. ಅಂಗಡಿಯ ಸಿಸಿಟಿವಿ ದೃಶ್ಯ ನೋಡಿದರೆ ಒಬ್ಬ ಉದ್ಯೋಗಿ ಸುಶಾಂತ್ ಮೊಂಡಲ್ ಎಂಬ ಗ್ರಾಹನ ಕೂದಲು ಹಿಡಿದು ಅಂಗಡಿಯೊಳಗೆ ಎಳೆದುಕೊಂಡು ಹೋಗುತ್ತಿರುವುದನ್ನು ತೋರಿಸಿದೆ. ಮೊಂಡಲ್ ಅನ್ನು ನೆಲಕ್ಕೆ ಬೀಳಿಸಿ ಕಪಾಳಮೋಕ್ಷ ಮಾಡಿದ ಸಿಬ್ಬಂದಿ ಅವರ ತಲೆಯನ್ನು ಎರಡು ಬಾರಿ ನೆಲದ ಮೇಲೆ ಹೊಡೆದು ಹಿಗ್ಗಾಮುಗ್ಗ ಥಳಿಸಿದ್ದಾನೆ ಇದಾದ ನಂತರ ಫುಟ್‌ಪಾತ್‌ಗೆ ಆತನನ್ನು ಎಸೆದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆತನನ್ನು ಗುರುತಿಸಿದ ಕೆಲವು ನೆರೆಹೊರೆಯವರು ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತಲುಪುವ ಮುನ್ನವೇ ಮೊಂಡಲ್ ಸಾವಿಗೀಡಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಂತರ ನಾಲ್ವರನ್ನು ಬಂಧಿಸಿದ್ದಾರೆ. ಗ್ರಾಹಕನ ಮೇಲೆ ಹಲ್ಲೆ ನಡೆಸಿದ ಅಂಗಡಿಯ ಹಿರಿಯ ಸಿಬ್ಬಂದಿ ಪ್ರಭಾತ್ ದತ್ತಾ, ಸಹ-ಮಾಲೀಕ ದೇಬೋಜ್ಯೋತಿ ಸಹಾ, ದತ್ತಾ ಅವರ ಪಕ್ಕದಲ್ಲಿ ನಿಂತಿದ್ದರೂ ತಡೆಯದ ಉದ್ಯೋಗಿ ಪ್ರಸೇನ್‌ಜಿತ್ ಬೈದ್ಯ, ಗ್ರಾಹಕ ಸಾವಿಗೀಡಾಗಿದ್ದಾನೆ ಎಂದು ಅರಿತ ಕೂಡಲೇ ಅಲ್ಲಿಂದ ಕಾಲ್ಕಿತ್ತ ನೌಕರ ಅಮಿತ್ ಕರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಅವರ ಮೇಲೆ ಐಪಿಸಿ 302 ರ ಅಡಿಯಲ್ಲಿ ಕೊಲೆ ಆರೋಪವನ್ನು ಹೊರಿಸಿದ್ದಾರೆ.

ರೊಚ್ಚಿಗೆದ್ದ ಸ್ಥಳೀಯರು ಅಂಗಡಿಯ ಮೇಲೆ ಕಲ್ಲು ಬಿಸಾಡಿದ್ದು, ನೂರಾರು ಮದ್ಯದ ಬಾಟಲಿಗಳನ್ನು ಒಡೆದು ಹಾಕಿದರು. ಢಾಕುರಿಯಾ ಸೇತುವೆಯ ಮುಂಭಾಗದ ರಸ್ತೆಯನ್ನು ಸ್ಥಳೀಯರು ನಿರ್ಬಂಧಿಸಿದ್ದರು. ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲು ರವೀಂದ್ರ ಸರೋಬರ್ ಪಿಎಸ್ ಮತ್ತು ಪ್ರದೇಶದ ಇತರ ಪೊಲೀಸ್ ಠಾಣೆಗಳ ಅಧಿಕಾರಿಗಳ ದೊಡ್ಡ ತಂಡ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿತು. ಸ್ಥಳದಲ್ಲಿದ್ದ ಡಿಸಿ (ಆಗ್ನೇಯ ವಿಭಾಗ) ಶುಭಂಕರ್ ಭಟ್ಟಾಚಾರ್ಯ, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೊದಲ್ಲಿ ಕಂಡುಬರುವ ವ್ಯಕ್ತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಹೇಳಿ ಗುಂಪನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ನಾವು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ತಂದೆಯ ಸ್ನೇಹಿತರಿಂದ ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ, ಗರ್ಭಿಣಿಯಾದ ಇಬ್ಬರು ಬಾಲಕಿಯರು

ಮೊಂಡಲ್, ಡ್ರೈವರ್ ಕೆಲಸ ಮಾಡುತ್ತಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಶ್ಯಾಮನಗರದ ನಿವಾಸಿ ಮೊಂಡಲ್ ತನ್ನ ಅತ್ತೆಯ ಮನೆಯ ಸಮೀಪದ ಪಂಚನಂತಲದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೊಂಡಲ್ ಮದ್ಯದ ನಶೆಯಲ್ಲಿದ್ದು,  ಮದ್ಯ ಖರೀದಿಸಲು ಅಂಗಡಿಗೆ ಹೋಗಿದ್ದರು ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ